೬ ವರ್ಷಗಳಲ್ಲೇ ಕೆಆರ್‌ಎಸ್ ಕನಿಷ್ಠ ಮಟ್ಟ

| Published : May 19 2024, 01:45 AM IST

ಸಾರಾಂಶ

ಹಿಂದಿನ ವರ್ಷ ನಿರೀಕ್ಷೆಯಂತೆ ಮುಂಗಾರು ಮಳೆಯಾಗದ ಕಾರಣ ಜಲಾಶಯ ಭರ್ತಿಯಾಗಲಿಲ್ಲ. ಮಳೆ ಕೊರತೆಯಿಂದ ಆಣೆಕಟ್ಟೆಯಲ್ಲಿ ನೀರಿನ ಮಟ್ಟ ೧೧೪ ಅಡಿ ತಲುಪುವುದಕ್ಕಷ್ಟೇ ಶಕ್ತವಾಯಿತು. ಸುಪ್ರೀಂಕೋರ್ಟ್, ಪ್ರಾಧಿಕಾರಗಳ ಆದೇಶಗಳಂತೆ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಿದ್ದರಿಂದ ಜಲಾಶಯದಲ್ಲಿ ನೀರನ್ನು ಉಳಿಸಿಕೊಳ್ಳಲು ಕಷ್ಟಪಡುವಂತಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ಆರು ವರ್ಷಗಳಿಗೆ ಹೋಲಿಸಿದರೆ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹಾಲಿ ಜಲಾಶಯದಲ್ಲಿ ೮೦.೨೫ ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ. ೨೦೧೯ರಲ್ಲಿ ಇದೇ ದಿನ ಜಲಾಶಯದಲ್ಲಿ ೮೧.೮೮ ಅಡಿ ನೀರು ಸಂಗ್ರಹವಾಗಿತ್ತು.

ಹಿಂದಿನ ವರ್ಷ ನಿರೀಕ್ಷೆಯಂತೆ ಮುಂಗಾರು ಮಳೆಯಾಗದ ಕಾರಣ ಜಲಾಶಯ ಭರ್ತಿಯಾಗಲಿಲ್ಲ. ಮಳೆ ಕೊರತೆಯಿಂದ ಆಣೆಕಟ್ಟೆಯಲ್ಲಿ ನೀರಿನ ಮಟ್ಟ ೧೧೪ ಅಡಿ ತಲುಪುವುದಕ್ಕಷ್ಟೇ ಶಕ್ತವಾಯಿತು. ಸುಪ್ರೀಂಕೋರ್ಟ್, ಪ್ರಾಧಿಕಾರಗಳ ಆದೇಶಗಳಂತೆ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಿದ್ದರಿಂದ ಜಲಾಶಯದಲ್ಲಿ ನೀರನ್ನು ಉಳಿಸಿಕೊಳ್ಳಲು ಕಷ್ಟಪಡುವಂತಾಯಿತು.

ಪ್ರಸ್ತುತ ಕೆಆರ್‌ಎಸ್ ಜಲಾಶಯದಲ್ಲಿ ೮೦.೨೫ ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಆಣೆಕಟ್ಟೆಗೆ ೧೫೬೦ ಕ್ಯುಸೆಕ್‌ನಷ್ಟು ಒಳಹರಿವಿದ್ದರೆ ೧೫೫ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ೧೮ ಮೇ ೨೦೨೩ರಲ್ಲಿ ೮೬.೧೪ ಅಡಿ ನೀರಿದ್ದರೆ, ೬೮೪ ಕ್ಯುಸೆಕ್ ಒಳಹರಿವು, ೧೮೧ ಕ್ಯುಸೆಕ್ ಹೊರಹರಿವಿತ್ತು. ೧೮ ಮೇ ೨೦೨೨ರಲ್ಲಿ ಆಣೆಕಟ್ಟೆಯಲ್ಲಿ ೧೦೦.೧೬ ಅಡಿ ನೀರು ಸಂಗ್ರಹವಾಗಿ ರೈತರು ಮತ್ತು ಸಾರ್ವಜನಿಕರಲ್ಲಿ ನಿರಾಳಭಾವ ಮೂಡಿಸಿತ್ತು. ಅಂದು ಜಲಾಶಯಕ್ಕೆ ೨೮೨೫ ಕ್ಯುಸೆಕ್ ಒಳಹರಿವು, ೧೪೩೭ ಕ್ಯುಸೆಕ್ ಹೊರಹರಿವಿತ್ತು. ೧೮ ಮೇ ೨೦೨೧ರಲ್ಲಿ ಆಣೆಕಟ್ಟೆಯಲ್ಲಿ ೮೭ ಅಡಿಯಷ್ಟು ನೀರಿದ್ದರೆ ೬೭೫ ಕ್ಯುಸೆಕ್ ಒಳಹರಿವು, ೩೭೪೩ ಕ್ಯುಸೆಕ್ ಹೊರಹರಿವು ದಾಖಲಾಗಿತ್ತು. ೧೮ ಮೇ ೨೦೨೦ರಲ್ಲಿ ೯೫.೧೮ ಅಡಿ ನೀರಿದ್ದು, ೧೩೯ ಕ್ಯುಸೆಕ್ ಒಳಹರಿವು, ೩೮೫೬ ಕ್ಯುಸೆಕ್ ಹೊರಹರಿವಿತ್ತು. ೧೮ ಮೇ ೨೦೧೯ರಲ್ಲಿ ೮೧.೮೮ ಅಡಿ ನೀರು ಸಂಗ್ರಹವಾಗಿ ೧೪೨ ಕ್ಯುಸೆಕ್ ಒಳಹರಿವು, ೩೫೧ ಕ್ಯುಸೆಕ್ ಹೊರಹರಿವು ದಾಖಲಾಗಿತ್ತು.

ಆರು ವರ್ಷಗಳಿಂದ ಬೇಸಿಗೆಯಲ್ಲೂ ಜಲಾಶಯದಲ್ಲಿ ಉತ್ತಮ ನೀರಿನಮಟ್ಟ ಕಾಯ್ದುಕೊಂಡಿದ್ದ ಕೆಆರ್‌ಎಸ್ ಈ ವರ್ಷ ಕಳಾಹೀನ ಸ್ಥಿತಿ ತಲುಪಿದೆ. ಜಲಾಶಯದಲ್ಲಿ ೧೦.೮೯೭ ಟಿಎಂಸಿ ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಕುಡಿಯುವುದಕ್ಕೆ ಸಾಕಾಗುವಷ್ಟು ನೀರು ಮಾತ್ರ ಜಲಾಶಯದಲ್ಲಿ ಸಂಗ್ರಹವಾಗಿದೆ.

೨೦೧೯ ರಿಂದ ೨೦೨೨ರವರೆಗೆ ಪೂರ್ವ ಮುಂಗಾರು ಉತ್ತಮವಾಗಿತ್ತು. ಆ ಸಮಯದಲ್ಲಿ ಜಲಾಶಯದ ನೀರಿನ ಮಟ್ಟವೂ ಸಮಾಧಾನಕರವಾಗಿತ್ತು. ಈ ಬಾರಿ ಆಣೆಕಟ್ಟೆಯಲ್ಲಿ ೮೦.೨೫ ಅಡಿಯಷ್ಟು ಮಾತ್ರ ನೀರಿದೆ. ಈ ಬಾರಿಯ ಬೇಸಿಗೆಯಲ್ಲಿ ಕಂಡೂ ಕೇಳರಿಯದಷ್ಟು ರಣಬಿಸಿಲು ಹಾಗೂ ಉಷ್ಣಹವೆಯಿಂದ ಭೂಮಿಯ ತಾಪವೂ ಹೆಚ್ಚಿದೆ. ಇದರಿಂದ ಕೇರಳ, ಕೊಡಗು ಭಾಗದಲ್ಲಿ ಹೆಚ್ಚು ಮಳೆಯಾದರೂ ಭೂಮಿ ಹೆಚ್ಚಾಗಿ ನೀರನ್ನು ಹೀರಿಕೊಳ್ಳುತ್ತಿರುವುದರಿಂದ ಒಳಹರಿವಿನಲ್ಲಿ ಏರಿಕೆಯಾಗದಂತಾಗಿದೆ. ಇದು ರೈತರ ನಿರಾಸೆಗೂ ಕಾರಣವಾಗಿದೆ.

ಕಳೆದೊಂದು ವಾರದಿಂದ ಪೂರ್ವ ಮುಂಗಾರು ಚುರುಕುಗೊಂಡಿರುವುದರಿಂದ ರೈತರು ಭೂಮಿಯನ್ನು ಉಳುಮೆ ಮಾಡುವ ಮೂಲಕ ಬಿತ್ತನೆಗೆ ಹದಗೊಳಿಸುತ್ತಿದ್ದಾರೆ. ಕೆರೆ-ಕಟ್ಟೆಗಳು ಖಾಲಿಯಾಗಿದ್ದರಿಂದ ಬಹುತೇಕ ರೈತರು ಕೆರೆಯ ಮಣ್ಣನ್ನು ಜಮೀನುಗಳಿಗೆ ಸಾಗಿಸಿಕೊಂಡು ಕೃಷಿ ಚಟುವಟಿಕೆಗೆ ಚುರುಕು ನೀಡುವುದಕ್ಕೆ ಸಿದ್ಧರಾಗಿದ್ದಾರೆ. ಹಲವರು ಹೊಸದಾಗಿ ಕೊಳವೆ ಬಾವಿಗಳನ್ನು ತೆಗೆಸುವುದರೊಂದಿಗೆ ಬೆಳೆಗೆ ನೀರಿನ ಸೌಕರ್ಯವನ್ನೂ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯ ಮುಂಗಾರು ಮಳೆಯ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಕೃಷಿಯಲ್ಲಿ ತೊಡಗಿಕೊಳ್ಳುವುದಕ್ಕೆ ಉತ್ಸುಕಾಗಿದ್ದಾರೆ. ಉತ್ತಮ ಮಳೆ, ಆಣೆಕಟ್ಟೆ ಭರ್ತಿಯಾಗುವುದು, ನಾಲೆಗಳಿಗೆ ನೀರು ಬಿಡುಗಡೆಯಾಗುವ ದಿನಗಳಿಗಾಗಿ ಎದುರುನೋಡುತ್ತಿದ್ದಾರೆ.

೭೦ ಅಡಿಗಿಂತಲೂ ಕಡಿಮೆ ಮಟ್ಟ:ಕಳೆದ ೨೦ ವರ್ಷಗಳ ಪೈಕಿ ೪ ವರ್ಷಗಳಲ್ಲಿ ಮೇ ತಿಂಗಳ ೧೮ರಂದು ಜಲಾಶಯದ ನೀರಿನ ಮಟ್ಟ ೭೦ ಅಡಿಗಳಿಗಿಂತಲೂ ಕೆಳಮಟ್ಟಕ್ಕೆ ಕುಸಿದಿತ್ತು. ೨೦೦೭ ಮೇ ೧೮ರಂದು ಆಣೆಕಟ್ಟೆಯ ನೀರಿನ ಮಟ್ಟ ೬೮.೭೫ ಅಡಿ ಇದ್ದು, ೧೫೩ ಕ್ಯುಸೆಕ್ ಒಳಹರಿವು, ೨೫೪ ಕ್ಯುಸೆಕ್ ಹೊರಹರಿವು ದಾಖಲಾಗಿ ಆಣೆಕಟ್ಟೆಯಲ್ಲಿ ೬.೬೩೬ ಟಿಎಂಸಿ ಅಡಿ ನೀರು ದಾಖಲಾಗಿತ್ತು. ಅದಾದ ಬಳಿಕ ೨೦೧೩ರ ಮೇ ೧೮ರಂದು ಜಲಾಶಯದಲ್ಲಿ ೬೪.೫೭ ಅಡಿ ನೀರು ದಾಖಲಾಗಿದ್ದು, ೮೫೯ ಕ್ಯುಸೆಕ್ ಒಳಹರಿವು, ೭೬೭ ಕ್ಯುಸೆಕ್ ಹೊರಹರಿವಿದ್ದು, ೫.೪೭೦ ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ೨೦೧೭ರ ಮೇ ೧೮ರಲ್ಲಿ ೬೯.೪೦ ಅಡಿ ನೀರಿದ್ದು, ೧೮೩ ಕ್ಯುಸೆಕ್ ಒಳಹರಿವು, ೮೬೨ ಕ್ಯುಸೆಕ್ ಹೊರಹರಿವಿನೊಂದಿಗೆ ೬.೮೩೫ ಟಿಎಂಸಿ ಅಡಿ ನೀರಿದ್ದರೆ, ೨೦೧೮ರ ಮೇ ೧೮ರಲ್ಲಿ ೬೯.೫೨ ಅಡಿ ನೀರು ದಾಖಲಾಗಿ ೩೪೩ ಕ್ಯುಸೆಕ್ ಒಳಹರಿವು, ೯೫೦ ಕ್ಯುಸೆಕ್ ಹೊರಹರಿವಿನೊಂದಿಗೆ ೬.೮೭೨ ಟಿಎಂಸಿ ನೀರು ಸಂಗ್ರಹವಾಗಿತ್ತು.೧೦೦ರ ಗಡಿ ದಾಟಿದ್ದು ೨ ವರ್ಷ ಮಾತ್ರ:ಕಳೆದ ಎರಡು ದಶಕದಲ್ಲಿ ಎರಡು ವರ್ಷ ಮಾತ್ರ ಮುಂಗಾರು ಆರಂಭಕ್ಕೆ ಮುನ್ನವೇ ಜಲಾಶಯ ೧೦೦ ಅಡಿಯ ಗಡಿ ದಾಟಿದ್ದು ವಿಶೇಷ. ೨೦೦೪ರ ಮೇ ೧೮ರಂದು ಆಣೆಕಟ್ಟೆಯಲ್ಲಿ ೧೦೪.೫೧ ಅಡಿ ನೀರು ದಾಖಲಾಗಿದ್ದು, ೧೫೩ ಕ್ಯುಸೆಕ್ ಒಳಹರಿವು, ೨೪೬೨ ಕ್ಯುಸೆಕ್ ಹೊರಹರಿವಿದ್ದು, ಜಲಾಶಯದಲ್ಲಿ ೨೬.೫೫೬ ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ೨೦೨೨ರ ಮೇ ೧೮ರಂದು ಅಣೆಕಟ್ಟೆಯಲ್ಲಿ ೧೦೦.೧೬ ಅಡಿ ನೀರು ಶೇಖರಣೆಯಾಗಿ, ೨೮೨೫ ಕ್ಯುಸೆಕ್ ಒಳಹರಿವು, ೧೪೩೭ ಕ್ಯುಸೆಕ್ ಹೊರಹರಿವಿದ್ದು ೨೨.೯೩೬ ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.