ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಬಿಸಿಲಿನ ಶಾಖಕ್ಕೆ ನದಿಯಲ್ಲಿನ ನೀರು ದಿನದಿಂದ ದಿನಕ್ಕೆ ಖಾಲಿಯಾಗುತ್ತಿದೆ. ಇದೀಗ ಕೃಷ್ಣ ನದಿಯಲ್ಲಿ ಕೇವಲ 15 ದಿನಗಳಿಗೆ ಮಾತ್ರ ಆಗುವಷ್ಟು ನೀರು ಉಳಿದಿದ್ದು, ನದಿ ಪಾತ್ರದ ಜನರು ಹಾಗೂ ರೈತರು ಕಂಗಾಲಾಗುವಂತೆ ಮಾಡಿದೆ. ಈ ಭಾಗದಲ್ಲಿ ಮೊದಲೇ ನೀರು ಹಾಗೂ ಮೇವಿಗಾಗಿ ರೈತರು ಪರದಾಟ ನಡೆಸುತ್ತಿದ್ದಾರೆ. ಮುಂದೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಸಂಬಂಧ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಥಣಿಯಲ್ಲಿ ರೈತರ ಸಭೆ ಕರೆದಿದ್ದರು. ಆದರೆ, ಸಭೆಯಲ್ಲಿ ಗೊಂದಲವುಂಟಾಗಿದ್ದು, ಅಪೂರ್ಣವಾದಂತಾಗಿದೆ.ಸಭೆ ಪ್ರಾರಂಭವಾಗುತ್ತಿದ್ದಂತೆ ರೈತರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಲಾಗಿತ್ತು. ಈ ವೇಳೆ ಕೃಷ್ಣ ನದಿಯ ದಂಡೆಯ ಗ್ರಾಮಗಳ ಜನರು ಹಿಪ್ಪರಗಿ ಅಣೆಕಟ್ಟಿನ ಮುಂಭಾಗದ ಜನ ತಮ್ಮದೇ ಒಂದು ಸಮಸ್ಯೆ ಹೇಳಿದರೇ ಅಣೆಕಟ್ಟೆಯ ಹಿಂಭಾಗದ ಜನರು ಬೇರೆಯದ್ದೇ ಸಮಸ್ಯೆ ಹೇಳತೊಡಗಿರುವುದರಿಂದ ಗೊಂದಲವುಂಟಾಯಿತು.
ದಯಾ ಮರಣಕ್ಕೆ ಅವಕಾಶ ನೀಡಿ:ಶೇಗುಣಸಿ ಗ್ರಾಮ ಸುರೇಶ ಪಾಟೀಲ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮೊಳಗೆ ಜಗಳ ಹಚ್ಚಬೇಡಿ ಎಂದು ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದರು. ಬರಗಾಲ ಮತ್ತು ನೆರೆ ಬಂದಾಗ ಎರಡು ಸಂಕಷ್ಟವನ್ನು ನದಿ ತೀರದ ರೈತರು ನಾವು ಅನುಭವಿಸುತ್ತಿದ್ದೇವೆ. ಪರಿಸ್ಥಿತಿ ಗೊತ್ತಿದ್ದು ತಾಲೂಕು ಮತ್ತು ಜಿಲ್ಲಾಡಳಿತ ಮುಂಚೆಯೇ ಏಕೆ ಕ್ರಮಕೈಗೊಳ್ಳಿಲಿಲ್ಲ ಎಂದು ಪ್ರಶ್ನಿಸಿದರು. ನಮಗೆ ಸಾಕಾಗಿ ಹೋಗಿದ್ದು, ಎಲ್ಲ ರೈತರು ಸಾಯಲು ಸಿದ್ದರಾಗಿದ್ದೇವೆ. ನಮಗೆ ದಯಾ ಮರಣಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಬಳಿಕ ಕೆಲವು ರೈತರು ತಮ್ಮ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತರನ್ನುದ್ದೇಶಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ರೈತರ ಸಮಸ್ಯ ಅರ್ಥವಾಗಿದೆ. ಸಮಸ್ಯೆ ಪರಿಹಾರಕ್ಕೆ ಅತೀ ಶೀಘ್ರದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡುವುದಾಗಿ ತಿಳಿಸಿದರು.ನೆರೆಯ ಮಹಾರಾಷ್ಟ್ರದಿಂದ 3 ಟಿಎಂಸಿ ನೀರು ಬಿಡಿಸುವುದಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗಿದೆ. ಅಲ್ಲದೇ, ಹಿಡಕಲ್ ಜಲಾಶಯದ ನೀರನ್ನು ತರಲು ಕೂಡ ಪ್ರಯತ್ನ ಮಾಡುತ್ತೇನೆ. ಸದ್ಯ ಕೃಷ್ಣ ನದಿಯಲ್ಲಿ ತಿಂಗಳ 15 ದಿನಕ್ಕೆ ಆಗುವಷ್ಟು ಮಾತ್ರ ಇದೆ. ಮುಂದೆ ನೀರಿನ ಸಮಸ್ಯ ಗಂಭಿರವಾಗಬಹುದು. ಆದರೂ ಜಿಲ್ಲಾಡಳಿತ ಸಮಸ್ಯ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ನದಿ ತೀರದ ಜನರು ಸಹಕರಿಸಬೇಕು. ಈಗಾಗಲೇ ಅಥಣಿ ತಾಲೂಕಿನ 19 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿರುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಕಾರಿಗೆ ಮುತ್ತಿಗೆ ಯತ್ನ:ಮಾತಿನ ಬಳಿಕ ಜಿಲ್ಲಾಧಿಕಾರಿಗಳು ಸಭೆಯಿಂದ ಹೊರಡುತ್ತಿದ್ದಂತೆ ಸಮಸ್ಯೆ ಹೇಳಿಕೊಳ್ಳಲು ರೈತರು ಮುಂದಾದರು. ಸಮಸ್ಯೆ ಕೇಳದೆ ಡಿಸಿ ಹೊರಟು ಈ ವೇಳೆ ರೈತರು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತ, ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆಗ ಪೊಲೀಸರು ರೈತರನ್ನು ತಡೆದು ಕಾರಿಗೆ ದಾರಿ ಮಾಡಿಕೊಟ್ಟರು.
ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಉಪವಿಭಾಗಾಧಿಕಾರಿ ಮಹಬೂಬಿ, ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ಎಸ್.ಜಿ.ಶ್ರೀನಿವಾಸ್ ಮತ್ತು ಪ್ರವೀಣ ಹುಣಸಿಕಟ್ಟಿ, ಅಥಣಿ ತಹಸೀಲ್ದಾರ್ ವಾಣಿ, ಗ್ರೇಡ್-2 ತಹಸೀಲ್ದಾರ್ ಹೊಸಕೇರಿ, ಚುನಾವಣಾಧಿಕಾರಿ ಮಲ್ಲಿಕಾರ್ಜುನ್, ತಾಪಂ ಕಾರ್ಯನಿರ್ಹಣಾಧಿಕಾರಿ ಶಿವಾನಂದ ಕವಲಾಪೂರ, ಜಿಪಂ ಎಂಜಿನಿಯರ್ ವೀರಣ್ಣ ವಾಲಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.ಕೋಟ್
ನೀರು ಮೇವಿನ ಸಮಸ್ಯೆ ಇದೆ. ಅಧಿಕಾರಿಗಳು ಜನರ ಸಮಸ್ಯೆ ಆಲಿಸಲಿಲ್ಲ. ಎರಡು ತಿಂಗಳ ಹಿಂದೆಯೇ ನೀರಿನ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದೇವೆ. ಯಾವುದೇ ಕ್ರಮತೆಗೆದುಕೊಳ್ಳಲಿಲ್ಲ. ಕಾಳಮ್ಮವಾಡಿ ಡ್ಯಾಂನಿಂದ ಬರಬೇಕಾದ 2 ಟಿಎಂಸಿ ನೀರು ಬಿಡಿಸಿಕೊಳ್ಳಲು ಜಿಲ್ಲಾಡಳತ ಮತ್ತು ಸರ್ಕಾರ ವಿಫಲವಾಗಿವೆ. ಇನ್ನಷ್ಟು ಸಮಸ್ಯೆಯಾಗಿ ಕಾನೂನು ಸುವ್ಯವಸ್ಥೆ ಕೈ ಮೀರಲಿದೆ. ಇದಕ್ಕೆ ಜಿಲ್ಲಾಡಳಿತವೇ ಜವಾಬ್ದಾರಿ. ಸಮಸ್ಯೆ ಕೇಳದೆ ಜಿಲ್ಲಾಧಿಕಾರಿಗಳು ಹಾಗೆ ಹೋಗಿದ್ದು ಖಂಡನೀಯ-ಮಹಾದೇವ ಮಡಿವಾಳ, ಅಥಣಿ ತಾಲೂಕು ರೈತ ಸಂಘದ ಅಧ್ಯಕ್ಷ