ಕೃಷ್ಣಾ ಸಕ್ಕರೆ ಕಾರ್ಖಾನೆ: ಸವದಿ ಬೆಂಬಲಿಗರಿಗೆ ಜಯ

| Published : Oct 27 2025, 02:00 AM IST

ಕೃಷ್ಣಾ ಸಕ್ಕರೆ ಕಾರ್ಖಾನೆ: ಸವದಿ ಬೆಂಬಲಿಗರಿಗೆ ಜಯ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭಾ ಚುನಾವಣೆ, ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಚುನಾವಣೆ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಅಥಣಿ

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಕ್ಷೇತ್ರದ ಮೇಲಿನ ಪ್ರಾಬಲ್ಯ ಸಾಧಿಸಿದ್ದು ಶಾಸಕ ಲಕ್ಷ್ಮಣ ಸವದಿ, ಈಗ ಇಲ್ಲಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲೂ ವೈಟ್‌ ವಾಶ್‌ ಮಾಡುವ ಮೂಲಕ ತಮ್ಮ ಕ್ಷೇತ್ರದಲ್ಲಿ ತಾವೇ ಚಕ್ರಾಧಿಪತಿ ಎಂಬುದನ್ನು ಸಾಬೀತುಗೊಳಿಸಿದ್ದಾರೆ.

ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ನೇತೃತ್ವದ ರೈತರ ಸಹಕಾರಿ ಪೆನೆಲ್‌ ಒಟ್ಟು 13 ಸ್ಥಾನಗಳ ಪೈಕಿ ಬ ವರ್ಗದ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಿಕೊಂಡಿತ್ತು. ಉಳಿದ 12 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಪೆನೆಲ್‌ನ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ನಾಲ್ಕನೇ ಅವಧಿಗೆ ನಿಕಟ ಪೂರ್ವ ಅಧ್ಯಕ್ಷ ಪರಪ್ಪ ಸವದಿ ನೇತೃತ್ವದ ಆಡಳಿತ ಮಂಡಳಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿಲದಿಂದ ಮಾಜಿ ಶಾಸಕರಾದ ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ, ಶಹಜಹಾನ ಡೊಂಗರಗಾವ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದ ಸ್ವಾಭಿಮಾನಿ ರೈತ ಪೆನೆಲ್‌ ರಚಿಸಿ ಶಾಸಕ ಲಕ್ಷ್ಮಣ ಸವದಿ ಮಣಿಸಲು ಕಾರ್ಯತಂತ್ರ ಹೆಣೆಯಲಾಗಿತ್ತು. ಆದರೆ ಈ ಪೆನೆಲ್‌ನ ಎಲ್ಲ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಪರಾಭವಗೊಳ್ಳುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಚುನಾವಣೆ ಪೂರ್ವದಲ್ಲಿ ಪ್ರಚಾರ ಭಾಷಣದಲ್ಲಿ ಶಾಸಕ ಲಕ್ಷ್ಮಣ ಸವದಿ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮಧ್ಯೆ ಆರೋಪ ಮತ್ತು ಪ್ರತ್ಯಾರೋಪಗಳು ತಾರಕಕ್ಕೇರಿದ್ದವು. ಕಳೆದ ವಿಧಾನಸಭಾ ಚುನಾವಣೆ, ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಚುನಾವಣೆ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ರಮೇಶ ಜಾರಕಿಹೊಳಿಗೆ ಮತಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ಮಾಡಿದರೂ ಮೂರು ಬಾರಿಯೂ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.

ಶಾಂತಿಯುತ ಮತದಾನ:

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ ಭಾನುವಾರ ಬೆಳಗ್ಗೆ 8 ಗಂಟೆಗೆ ಮತದಾನ ಪ್ರಾರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯಗೊಂಡಿತ್ತು. ಒಟ್ಟು 11300 ಮತಗಳಲ್ಲಿ 8975 ಮತಗಳು ಚಲಾವಣೆಗೊಂಡು ಶೇ.79.41ರಷ್ಟು ಮತದಾನವಾಗಿದ್ದವು. ಸಂಜೆ 5 ಗಂಟೆಗೆ ನಂತರ ನಡೆದ ಮತ ಎಣಿಕೆಯಲ್ಲಿ ಮೊದಲ ಹಂತದಲ್ಲಿಯೇ ಶಾಸಕ ಲಕ್ಷ್ಮಣ ಸವದಿ ನೇತೃತ್ವದ ರೈತ ಸಹಕಾರಿ ಪೆನೆಲ್‌ ಮುನ್ನಡೆ ಸಾಧಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿತು..

2 ಗುಂಪುಗಳ ಮಧ್ಯೆ ಘರ್ಷಣೆ:

ಮತದಾನ ವೇಳೆ ನಕಲಿ ಮತದಾನ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದು ಎರಡು ಗುಂಪುಗಳ ಬೆಂಬಲಿಗರ ಮಧ್ಯೆ ಘರ್ಷಣೆ ನಡೆದಿತ್ತು. ನಕಲಿ ಮತದಾನ ಮಾಡಲು ಬಂದ ವ್ಯಕ್ತಿಗೆ ಧರ್ಮದೇಟು ನೀಡಿ ಮತದಾನ ಕೇಂದ್ರದಿಂದ ಹೊರ ಹಾಕಲಾಗಿತ್ತು. ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಹಾಗೂ ರಮೇಶ ಜಾರಕಿಹೊಳಿ ಬೆಂಬಲಿಗ ಸತ್ಯಪ್ಪ ಭಾಗೇಣ್ಣವರ ಮಧ್ಯೆ ಮಾತಿನ ಚಕಮಕಿ ನಡೆದು ಕೆಲಕಾಲ ಬಿಡುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಟ್ರಾಫಿಕ್ ಸಮಸ್ಯೆ:

ಅಥಣಿ ಗೋಕಾಕ ರಸ್ತೆಯ ಬದಿಗೆ ಇರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಮುಂಭಾಗದ ಜತ್ - ಜಂಬೋಟ್ ರಾಜ್ಯ ಹೆದ್ದಾರಿಯಲ್ಲಿ ಚುನಾವಣೆ ನಿಮಿತ್ತ ಅತ್ಯಧಿಕ ವಾಹನಗಳು ಓಡಾಟ, ದೀಪಾವಳಿ ಹಬ್ಬದ ಕೊನೆಯ ದಿನವಾಗಿದ್ದರಿಂದ ಅನೇಕ ದೇವಸ್ಥಾನಗಳ ಪಲ್ಲಕ್ಕಿ ಕೃಷ್ಣ ನದಿ ಸ್ನಾನಕ್ಕೆ ಹೋದ ಕಾರಣ ರಸ್ತೆ ಯುದ್ಧಕ್ಕೂ ಟ್ರಾಫಿಕ್ ಸಮಸ್ಯೆ ತಲೆದೊರೆತು. ಟ್ರಾಫಿಕ್ ಸಮಸ್ಯೆ ತಿಳಿಗೊಳಿಸುವಲ್ಲಿ ಪೊಲೀಸರು ಹರಸಹಾಸ ಪಡಬೇಕಾಯಿತು.

ಸಂಭ್ರಮದ ವಿಜಯೋತ್ಸವ:

ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಅವರ ಬೆಂಬಲಿಗರು ಹಾಗೂ ಚುನಾವಣೆಯಲ್ಲಿ ಜಯ ಸಾಧಿಸಿದ ಅಭ್ಯರ್ಥಿಗಳು ಪರಸ್ಪರ ಗುಲಾಲು ಎರಚಿಕೊಂಡು ಪಟಾಕಿ ಸಿಡಿಸಿ ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.