: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಹಯೋಗದಲ್ಲಿ ಕಲ್ಕೂರ ಪ್ರತಿಷ್ಠಾನ ಹಮ್ಮಿಕೊಂಡಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆ ಶುಕ್ರವಾರ ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ನೆರವೇರಲಿರುವುದು.
ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಹಯೋಗದಲ್ಲಿ ಕಲ್ಕೂರ ಪ್ರತಿಷ್ಠಾನ ಹಮ್ಮಿಕೊಂಡಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆ ಶುಕ್ರವಾರ ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ನೆರವೇರಲಿರುವುದು.ಬೆಳಗ್ಗೆ 9 ಗಂಟೆಗೆ ‘ಶ್ರೀ ಕೃಷ್ಣ ವರ್ಣ ವೈಭವ’ ಚಿತ್ರಕಲಾ ಸ್ಪರ್ಧೆ ಆರಂಭಗೊಳ್ಳಲಿದ್ದು ಇದರಲ್ಲಿ ಎಲ್‌ಕೆಜಿ ಯಿಂದ 7ನೇ ತರಗತಿ ವರೆಗೆ ಪ್ರತ್ಯೇಕ ವಿಭಾಗಗಳಲ್ಲಿ ಚಿತ್ರಗಳಿಗೆ ಬಣ್ಣ ತುಂಬುವ ಸ್ಪರ್ಧೆಯಿರುವುದು. 8ನೇ ತರಗತಿಯಿಂದ 10ನೇ ತರಗತಿ ವರೆಗೆ ‘ಸುಧಾಮ ಕೃಷ್ಣ’ ಹಾಗೂ ಪಿಯುಸಿ ಮತ್ತು ಮೇಲ್ಪಟ್ಟವರಿಗೆ ಮುಕ್ತ ವಿಭಾಗದಲ್ಲಿ ‘ವಿಶ್ವರೂಪ ದರ್ಶನ ಅಥವಾ ಗೋಪಾಲಕೃಷ್ಣ’ ಚಿತ್ರ ರಚನೆ ಸ್ಪರ್ಧೆ ನಡೆಯಲಿದೆ.
ಬೆಳಗ್ಗೆ 10-30ಕ್ಕೆ ಮಹಿಳೆಯರು ಸಾಂಪ್ರದಾಯಿಕವಾಗಿ ಹಾಡನ್ನು ಹಾಡುತ್ತಾ ಸಾಮೂಹಿಕವಾಗಿ ಭರಣಿ ಪಾತ್ರೆಯಲ್ಲಿ ಕಡಗೋಲಿನಿಂದ ಮೊಸರು ಕಡೆದು ಬೆಣ್ಣೆ ತೆಗೆಯುವುದು. ಇದರಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ.ಮಧ್ಯಾಹ್ನ 12.30ಕ್ಕೆ ಗಣ್ಯರು ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆಯೊಂದಿಗೆ ಸಮಾರಂಭ ಉದ್ಘಾಟನೆಗೊಳ್ಳಲಿದೆ.
ಮಧ್ಯಾಹ್ನ 1 ಗಂಟೆಗೆ ಮಹಿಳೆಯರು ತಮ್ಮ ಮನೆಮಂದಿ ಬಂಧು ಬಳಗ ಇಷ್ಟ ಮಿತ್ರರೊಂದಿಗೆ ತಮ್ಮದೇ ಆದ ಸಾಂಪ್ರದಾಯಿಕ ಶೈಲಿಯಲ್ಲಿ 6 ತಿಂಗಳ ಕೆಳಗಿನ ಕಂದಮ್ಮಗಳನ್ನು ತೊಟ್ಟಿಲಿಗೆ ಹಾಕುತ್ತಾ ಅವರದೇ ಭಾಷೆಯಲ್ಲಿ ಜೋಗುಳ ಹಾಡುತ್ತಾ ಮಗುವನ್ನು ತೊಟ್ಟಿಲಲ್ಲಿ ತೂಗುವುದು.ಮಧ್ಯಾಹ್ನ 2 ಗಂಟೆಗೆ ದೇವಸ್ಥಾನದ ಪ್ರಾಂಗಣದಲ್ಲಿ ಏಕಕಾಲದಲ್ಲಿ 12 ವೇದಿಕೆಗಳಲ್ಲಿ , 44 ವಿಭಾಗಗಳ ಸ್ಪರ್ಧೆ ಆರಂಭಗೊಳ್ಳುವುದು.
ತೊಟ್ಟಿಲ ಕೃಷ್ಣ, ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲ ಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ಗೀತಾ ಕೃಷ್ಣ, ರಾಧಾಕೃಷ್ಣ, ರಾಧಾ ಮಾಧವ, ಯಶೋದಾ ಕೃಷ್ಣ, ದೇವಕಿ ಕೃಷ್ಣ, ವಾಸುದೇವ ಕೃಷ್ಣ, ಯಕ್ಷ ಕೃಷ್ಣ, ಕೃಷ್ಣ ಕುಚೇಲ, ನಂದ ಗೋಕುಲ, ಶಂಖನಾದ, ಶಂಖ ಉದ್ಘೋಷ, ಪಂಡರಾಪುರ ವಿಠಲ- ನೃತ್ಯ ಭಜನಾ ಸ್ಪರ್ಧೆ, ರಸಪ್ರಶ್ನೆ ಇದಲ್ಲದೆ ಆನ್ ಲೈನ್ ವಿಭಾಗದ ವೃಕ್ಷ ಕೃಷ್ಣ, ಗೋಪಾಲಕೃಷ್ಣ ಹಾಗೂ ಕೃಷ್ಣ ರೀಲ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ರಾತ್ರಿ 11ಕ್ಕೆ, ಶಾಸ್ತ್ರೀಯ ಗಾಯನ ದೊಂದಿಗೆ ಪಕ್ಕವಾದ್ಯ ಸಹಿತವಾಗಿ ಸಾಮೂಹಿಕ ವೇಣು ವಾದನ (ಕೊಳಲು) ಬಳಿಕ ಸಾಮೂಹಿಕ ಅರ್ಘ್ಯ ಪ್ರದಾನ, ಪ್ರಸಾದ ರೂಪದಲ್ಲಿ ಉಂಡೆ, ಚಕ್ಕುಲಿ, ಕಡುಬು ವಿತರಿಸಲಾಗುವುದು.
ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ, ಸ್ಥಳದಲ್ಲೇ ಹೆಸರು ನೋಂದಾಯಿಸಲು ಅವಕಾಶವಿದ್ದು, ಭಾಗವಹಿಸುವ ಎಲ್ಲ ವೇಷಧಾರಿಗಳಿಗೆ ಉಡುಪಿ ಕಡಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಶ್ರೀ ಕೃಷ್ಣ ಚರಿತ್ರೆ ಪುಸ್ತಕ, ಕೊಳಲು, ಭಗವದ್ಗೀತೆ ಪುಸ್ತಕ ಹಾಗೂ ಪ್ರಶಂಸಾ ಪತ್ರ ಹಾಗೂ ಬಿಸಿ ಹಾಲು, ಪೇಡಾ ನೀಡಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.