ಮಾಗಡಿ: ಮಾಜಿ ಶಾಸಕರು ಕಾವೇರಿ ನೀರಿಗಾಗಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಶಾಸಕರ ವಿರುದ್ಧ ಆರೋಪ ಮಾಡಿರುವುದು ಕೇವಲ ರಾಜಕೀಯ ಪ್ರಚಾರಕ್ಕಾಗಿ ಮಾತ್ರ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ತೇಗಾಲದಿಂದ ದಾಬಸ್‌ಪೇಟೆ ಕೈಗಾರಿಕಾ ವಲಯಕ್ಕೆ ಕೋಟ್ಯಂತರ ರು.ಪಾಯಿ ವೆಚ್ಚದಲ್ಲಿ ನೀರು ತೆಗೆದುಕೊಂಡು ಹೋಗುತ್ತಿರುವುದು ರಾಜ್ಯ ಸರ್ಕಾರದ ಒಂದು ಬೃಹತ್ ಯೋಜನೆ. ಕೈಗಾರಿಕೆಗಳು ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ತೆರಿಗೆ ಪಾವತಿಸುತ್ತವೆ. ಅಲ್ಲಿಗೂ ನೀರು ಒದಗಿಸುವುದು ಸರ್ಕಾರದ ಕರ್ತವ್ಯ. ಇಂತಹ ಬೃಹತ್ ಯೋಜನೆಗೆ ಅಡ್ಡಿಪಡಿಸುವುದು ಅಷ್ಟು ಸುಲಭವಲ್ಲ. ಮಾಜಿ ಶಾಸಕರಿಗೆ ಈ ಯೋಜನೆಯ ಬಗ್ಗೆ ಕನಿಷ್ಠ ತಿಳಿವಳಿಕೆಯೂ ಇದ್ದಂತಿಲ್ಲ ಎಂದು ಕೃಷ್ಣಮೂರ್ತಿ ಹೇಳಿದರು.

ಬೆಂಗಳೂರಿಗೆ ಕಾವೇರಿ ನೀರು ಕೊಂಡೊಯ್ಯುವಾಗ ದಾರಿಯುದ್ದಕ್ಕೂ ಇರುವ ಪ್ರತಿಯೊಂದು ಊರಿನವರೂ ನಮಗೇ ನೀರು ಬೇಕು ಎಂದು ಪೈಪ್‌ಲೈನ್ ಒಡೆದು ನಿಂತರೆ ಬೆಂಗಳೂರಿಗೆ ಕಾವೇರಿ ನೀರು ತಲುಪಲು ಸಾಧ್ಯವೇ? ಎತ್ತಿನಹೊಳೆ ಯೋಜನೆ ದಾಬಸ್‌ಪೇಟೆ ಮುಖಾಂತರ ಮಾಗಡಿಗೆ ಬರಬೇಕಿದೆ. ಆಗ ಅವರು ತಡೆದರೆ ನಮ್ಮ ಗತಿಯೇನು? ಅಭಿವೃದ್ಧಿ ವಿಷಯದಲ್ಲಿ ಇಂತಹ ಇಬ್ಬಗೆ ನೀತಿ ಸಲ್ಲದು. ಈ ಯೋಜನೆ ಮಾಗಡಿ ತಾಲೂಕಿನ ಮೂಲಕ ಹಾದುಹೋಗುವಾಗ, ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಬಾಲಕೃಷ್ಣ ಅವರು ಅಧಿಕಾರಿಗಳ ಜೊತೆ ಸಮಾಲೋಚಿಸಿ, ಮಾಗಡಿ ತಾಲೂಕಿಗೆ ಎಲ್ಲೆಲ್ಲಿ ನೀರಿನ ಅವಶ್ಯಕತೆ ಇದೆಯೋ ಅಲ್ಲೆಲ್ಲಾ ನೀರು ಒದಗಿಸಲು ಈಗಾಗಲೇ ಸಮರ್ಪಕ ಕ್ರಮ ಕೈಗೊಂಡಿದ್ದಾರೆ. ಕಾವೇರಿ ನ್ಯಾಯಾಧೀಕರಣದ ನಿಯಮಾವಳಿಗಳಿರುವುದರಿಂದ ಎಲ್ಲವನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ನಮ್ಮ ಶಾಸಕರು ಸುಮ್ಮನೆ ನಿದ್ದೆ ಮಾಡುತ್ತಿಲ್ಲವೆಂದು ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಮಾತನಾಡಿ, ಮಾಜಿ ಶಾಸಕರು ಈ ಹಿಂದೆ ಮಂಚನಬೆಲೆ ಜಲಾಶಯಕ್ಕೆ ಹರಿಯುತ್ತಿರುವ ಕೊಳಚೆ ನೀರು ತಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಹೋರಾಟ ನಡೆಸಿದ್ದರು. ಅದನ್ನು ನಾವು ಶ್ಲಾಘಿಸುತ್ತೇವೆ. ಆದರೆ ಮಾಜಿ ಶಾಸಕರ ಹೋರಾಟ ಕೇವಲ ರಾಜಕೀಯ ಪ್ರೇರಿತ. ಮಾಜಿ ಶಾಸಕರಿಗೆ ನಿಜವಾಗಿಯೂ ತಾಲೂಕಿನ ಹಿತಾಸಕ್ತಿ ಮುಖ್ಯವಾಗಿದ್ದರೆ, ರಸ್ತೆಯಲ್ಲಿ ನಿಂತು ಗುತ್ತಿಗೆದಾರರನ್ನು ಕರೆಯುವ ಬದಲು, ನಿಮ್ಮದೇ ಪಕ್ಷದ ಸಂಸದರು ಹಾಗೂ ಕೇಂದ್ರ ಸಚಿವರನ್ನು ಕರೆದುಕೊಂಡು ಹೋಗಿ ಸಂಬಂಧಪಟ್ಟ ಕಾವೇರಿ ಜಲನಿಗಮದ ಎಂಡಿ ಹಾಗೂ ಚೀಫ್ ಇಂಜಿನಿಯರ್ ಜೊತೆ ಇಲಾಖಾವಾರು ಚರ್ಚೆ ನಡೆಸಿ ಸೌಲಭ್ಯ ತನ್ನಿ. ಅದನ್ನು ಬಿಟ್ಟು ಬೀದಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿ ಯುವಕರನ್ನು ಹಾದಿ ತಪ್ಪಿಸಬೇಡಿ ಎಂದು ಕೃಷ್ಣಮೂರ್ತಿ ಕಿಡಿಕಾರಿದರು.

ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ ನಿಮ್ಮದೇ ಮೈತ್ರಿ ಪಕ್ಷದ ತುಮಕೂರು ಶಾಸಕರು ಅಡ್ಡಿಪಡಿಸುತ್ತಿದ್ದಾಗ ನೀವು ಹಾಸಿಗೆ ಹಾಸಿಕೊಂಡು ಮಲಗಿದ್ದಿರಾ? ತಾಕತ್ತಿದ್ದರೆ ಸಂಸದರನ್ನು ಕರೆತಂದು ಆ ಯೋಜನೆಗೆ ಇರುವ ಅಡೆತಡೆ ನಿವಾರಿಸಲು ಹೋರಾಟ ಮಾಡಿ, ನಾವೂ ನಿಮ್ಮ ಜೊತೆ ಕೈಜೋಡಿಸುತ್ತೇವೆಂದು ಕೃಷ್ಣಮೂರ್ತಿ ಸವಾಲು ಹಾಕಿದರು.


ಪತ್ರಿಕಾಗೋಷ್ಠಿಯಲ್ಲಿ ಪಂಚ ಗ್ಯಾರಂಟಿ ತಾಲೂಕು ಅಧ್ಯಕ್ಷ ಕಲ್ಕೆರೆ ಶಿವಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ತಿಪ್ಪಸಂದ್ರ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಪುರಸಭೆ ಮಾಜಿ ಉಪಾಧ್ಯಕ್ಷ ರೆಹಮತ್‌ಖಾನ್, ರೂಪೇಶ್, ರಾಮಣ್ಣತಾತ, ಶೇಖರ್‌ಭೈರಪ್ಪ, ಪರ್ವಿಜ್, ಅಬಿದ್‌ಆಲಿಖಾನ್, ಇಲಿಯಾಜ್, ರಹಮಾನ್ ಇತರರಿದ್ದರು.

(ಫೋಟೋ ಕ್ಯಾಪ್ಷನ್‌)ಮಾಗಡಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡಿದರು.