ಕೃಷ್ಣರಾಜಸಾಗರ ಅಣೆಕಟ್ಟೆಯ ಗೇಟ್ ತೆರೆದು ನೀರು ಪೋಲು...!

| Published : Mar 26 2025, 01:31 AM IST

ಕೃಷ್ಣರಾಜಸಾಗರ ಅಣೆಕಟ್ಟೆಯ ಗೇಟ್ ತೆರೆದು ನೀರು ಪೋಲು...!
Share this Article
  • FB
  • TW
  • Linkdin
  • Email

ಸಾರಾಂಶ

ಗೇಟ್ ಏಕಾಏಕಿ ತೆರೆದ ನಂತರವೂ ಅದನ್ನು ತಕ್ಷಣವೇ ಮುಚ್ಚುವುದಕ್ಕೆ ಅಧಿಕಾರಿಗಳು ಕ್ರಮ ವಹಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಪರಿಣಾಮ ಅಣೆಕಟ್ಟೆಯಿಂದ ಇಡೀ ರಾತ್ರಿ ನೀರು ನದಿಗೆ ಹರಿದುಹೋಗಿದೆ. ಅಣೆಕಟ್ಟೆಯ ಗೇಟ್ ಏಕಾಏಕಿ ತೆರೆದುಕೊಳ್ಳುವುದಕ್ಕೆ ಕಾರಣವೇನು?, ತಾಂತ್ರಿಕ ಸಮಸ್ಯೆ ಎದುರಾಗಿ ತೆರೆದುಕೊಂಡಿತೇ?, ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಗೇಟ್ ತೆರೆದುಕೊಂಡಿತೇ?.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷ್ಣರಾಜಸಾಗರ ಅಣೆಕಟ್ಟೆಯ ಗೇಟ್‌ವೊಂದು ಏಕಾಏಕಿ ತೆರೆದುಕೊಂಡು ಒಂದು ಸಾವಿರ ಕ್ಯುಸೆಕ್ಸ್‌ನಷ್ಟು ನೀರು ನದಿಗೆ ಹರಿದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಅಣೆಕಟ್ಟೆಯ ೫ ನೇ ನಂಬರ್‌ನ ಗೇಟು ಭಾನುವಾರ ರಾತ್ರಿ ಏಕಾಏಕಿ ತೆರೆದುಕೊಂಡಿದೆ. ಇದರಿಂದ ನೀರು ಒಂದು ದಿನದವರೆಗೆ ನಿರಂತರವಾಗಿ ಹರಿದುಹೋಗಿದೆ. ಇದರಿಂದ ಸಾವಿರಾರು ಕ್ಯುಸೆಕ್ ನೀರು ನದಿಗೆ ಹರಿದುಹೋಗಿದೆ ಎಂಬ ಆರೋಪ ಕೇಳಿಬಂದಿದೆ.

ಗೇಟ್ ಏಕಾಏಕಿ ತೆರೆದ ನಂತರವೂ ಅದನ್ನು ತಕ್ಷಣವೇ ಮುಚ್ಚುವುದಕ್ಕೆ ಅಧಿಕಾರಿಗಳು ಕ್ರಮ ವಹಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಪರಿಣಾಮ ಅಣೆಕಟ್ಟೆಯಿಂದ ಇಡೀ ರಾತ್ರಿ ನೀರು ನದಿಗೆ ಹರಿದುಹೋಗಿದೆ. ಅಣೆಕಟ್ಟೆಯ ಗೇಟ್ ಏಕಾಏಕಿ ತೆರೆದುಕೊಳ್ಳುವುದಕ್ಕೆ ಕಾರಣವೇನು?, ತಾಂತ್ರಿಕ ಸಮಸ್ಯೆ ಎದುರಾಗಿ ತೆರೆದುಕೊಂಡಿತೇ?, ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಗೇಟ್ ತೆರೆದುಕೊಂಡಿತೇ?, ತಕ್ಷಣವೇ ಗೇಟ್ ಬಂದ್ ಮಾಡಲು ಅಧಿಕಾರಿಗಳು ಕ್ರಮ ವಹಿಸದಿರುವುದಕ್ಕೆ ಕಾರಣವೇನು ಎಂಬುದು ಅಸ್ಪಷ್ಟವಾಗಿದೆ.

ಕೆಆರ್‌ಎಸ್‌ನ ಮೋಟಾರ್ ರಿವರ್ಸ್ ಆಗಿದ್ದರಿಂದ ಗೇಟ್ ತೆರೆದುಕೊಂಡಿರಬಹುದು ಅಥವಾ ತಮ್ಮದೇ ಸಿಬ್ಬಂದಿ ಬಟನ್ ಪ್ರೆಸ್ ಮಾಡಿ ಗೇಟ್ ತೆರೆದಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿ ವಲಯದಿಂದ ಕೇಳಿಬರುತ್ತಿದೆ.

ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಗೇಟ್‌ನ್ನು ತಕ್ಷಣಕ್ಕೇ ಬಂದ್ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಸೋಮವಾರ ರಾತ್ರಿ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಧಿಕಾರಿಗಳು ಗೇಟ್ ಬಂದ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ತಾಂತ್ರಿಕ ದೋಷ ಕಾರಣ: ರಘುರಾಮ್

ತಾಂತ್ರಿಕ ದೋಷದಿಂದ ಅಣೆಕಟ್ಟೆಯ ಗೇಟ್ ತೆರೆದುಕೊಂಡಿದೆ. ಅದು ಹೇಗೆ ತೆರೆದುಕೊಂಡಿತು. ಅದಕ್ಕೆ ಯಾರು ಕಾರಣ ಎಂಬುದರ ಬಗ್ಗೆ ವರದಿ ಕೇಳಿದ್ದೇನೆ. ಗೇಟ್ ಸುಭದ್ರವಾಗಿದ್ದು, ಆತಂಕಪಡುವ ಅವಶ್ಯಕತೆಯಿಲ್ಲ. ತಾಂತ್ರಿಕ ಸಮಸ್ಯೆಯಿಂದ ಗೇಟ್ ತೆರೆದುಕೊಂಡಿರುವುದಾಗಿ ಪ್ರಾಥಮಿಕವಾಗಿ ತಿಳಿದುಬಂದಿದೆ. ಇದರಿಂದ ೮೫೦ ಕ್ಯುಸೆಕ್‌ನಿಂದ ೧೦೦೦ ಕ್ಯುಸೆಕ್‌ವರೆಗೆ ನೀರು ನದಿಗೆ ಹರಿದಿದೆ. ನಿತ್ಯ ನದಿಗೆ ೧೭೫೦ ಕ್ಯುಸೆಕ್ ನೀರು ಬಿಡಲಾಗುತ್ತಿತ್ತು. ಅದು ೨೫೦೦ ಕ್ಯುಸೆಕ್‌ವರೆಗೆ ಹರಿದಿದೆ. ಓಪನ್ ಆಗಿದ್ದ ನಂ.೫ ಗೇಟ್‌ನ್ನು ಮುಚ್ಚಲಾಗಿದೆ.

- ರಘುರಾಮ್, ಅಧೀಕ್ಷಕ ಅಭಿಯಂತರ, ಕೃಷ್ಣರಾಜಸಾಗರ ಜಲಾಶಯತಾಂತ್ರಿಕ ದೋಷ ನೆಪ ಕದ್ದುಮುಚ್ಚಿ ತಮಿಳುನಾಡಿಗೆ ನೀರು ರೈತರು, ಸಾರ್ವಜನಿಕರ ಆರೋಪ

ಶ್ರೀರಂಗಪಟ್ಟಣ: ಕೆಆರ್‌ಎಸ್ ಅಣೆಕಟ್ಟೆಯಿಂದ ತಾಂತ್ರಿಕ ದೋಷದ ನೆಪ ಹೇಳಿ ರಾತ್ರೋರಾತ್ರಿ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸಿರುವುದಾಗಿ ರೈತರು, ಸಾರ್ವಜನಿಕರು ಆರೋಪಿದ್ದಾರೆ.

ಅಣೆಕಟ್ಟೆಯ ಗೇಟ್‌ನಿಂದ ನಿರಂತರವಾಗಿ ಮೂರು ದಿನಗಳಿಂದ ತಮಿಳುನಾಡಿಗೆ ಕಾವೇರಿ ನೀರು ಹರಿದಿದೆ. ಇದೀಗ ತಾಂತ್ರಿಕ ತೊಂದರೆ ಸರಿಪಡಿಸಿ ಗೇಟ್ ಬಂದ್ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿರುವುದು ಸಾಕಷ್ಟು ಅನುಮಾನ ವ್ಯಕ್ತವಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಕೆಆರ್‌ಎಸ್ ಅಣೆಕಟ್ಟೆ ಕೆಳ ಭಾಗದ ಕಾವೇರಿ ನದಿ ನೀರಿನ ಮಟ್ಟದಲ್ಲಿ ಏಕಾಏಕಿ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ ರೈತರಿಗೆ ನೀರಾವರಿ ಅಧಿಕಾರಿಗಳಿಂದ ಹಾರಿಕೆ ಉತ್ತರ ದೊರೆತಿದೆ. ಸಮಸ್ಯೆಗಳ ನೆಪ ಮಾಡಿಕೊಂಡು ತಮಿಳುನಾಡಿಗೆ ಸರ್ಕಾರ ನೀರನ್ನು ಬಿಡಲಾಗುತ್ತಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿದೆ ಎಂದು ರೈತರು ತಿಳಿಸಿದ್ದಾರೆ.

ಅಧಿಕಾರಿಗಳೊಂದಿಗೆ ಗಲಾಟೆ ಮಾಡಿದ ಬಳಿಕ ಗೇಟ್ ಬಂದ್ ಮಾಡಿಸಿದ್ದು, ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರ ಕಣ್ಣಾ ಮುಚ್ಚಾಲೆ ಆಟದಿಂದ ತಮಿಳುನಾಡಿಗೆ ನದಿ ಮೂಲಕ ನೀರು ಹರಿಸಲಾಗಿದೆ ಎಂದು ರೈತರು, ಜನರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.