ಭರ್ತಿಯಾದ ಕೃಷ್ಣರಾಜಸಾಗರ ಜಲಾಶಯ...! ಗರಿಷ್ಟ ಮಟ್ಟವನ್ನು ಮುಟ್ಟಿದ ನೀರಿನ ಪ್ರಮಾಣ

| Published : Jul 26 2024, 01:45 AM IST / Updated: Jul 26 2024, 06:24 AM IST

ಸಾರಾಂಶ

ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ ೧೨೪.೮೦ ಅಡಿಗಳಾಗಿದ್ದು, ಬುಧವಾರ ರಾತ್ರಿ ೮ ಗಂಟೆ ವೇಳೆಗೆ ಅಣೆಕಟ್ಟೆಯಲ್ಲಿ ೧೨೪.೮೦ ಅಡಿ ನೀರು ಸಂಗ್ರಹವಾಗಿತ್ತು. ಅಣೆಕಟ್ಟೆಗೆ ೪೨,೧೪೫ ಕ್ಯುಸೆಕ್ ಒಳಹರಿವಿದ್ದರೆ, ೪೦೯೧೪ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.  

ಮಂಡ್ಯ ಮಂಜುನಾಥ

 ಮಂಡ್ಯ : ನಿರೀಕ್ಷಿತ ಮುಂಗಾರು ಆಗಮನದಿಂದ ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿದೆ. ಜುಲೈ ತಿಂಗಳಲ್ಲೇ ಜಲಾಶಯ ಭರ್ತಿಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭಿಸಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ ೧೨೪.೮೦ ಅಡಿಗಳಾಗಿದ್ದು, ಬುಧವಾರ ರಾತ್ರಿ ೮ ಗಂಟೆ ವೇಳೆಗೆ ಅಣೆಕಟ್ಟೆಯಲ್ಲಿ ೧೨೪.೮೦ ಅಡಿ ನೀರು ಸಂಗ್ರಹವಾಗಿತ್ತು. ಅಣೆಕಟ್ಟೆಗೆ ೪೨,೧೪೫ ಕ್ಯುಸೆಕ್ ಒಳಹರಿವಿದ್ದರೆ, ೪೦೯೧೪ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ೪೯.೪೫೨ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಮೇ ೧೫ರಂದು ಮಳೆ ಕೊರತೆಯಿಂದಾಗಿ ಜಲಾಶಯ ೭೯.೬೫ ಅಡಿಗೆ ಕುಸಿದಿತ್ತು. ಕುಡಿಯುವ ನೀರಿಗೂ ಸಮಸ್ಯೆ ಉಂಟಾಗುವ ಆತಂಕೆದುರಾಗಿತ್ತು. ಜೂ.೨೮ರಿಂದ ಜಲಾಶಯದ ಒಳಹರಿವು ಹೆಚ್ಚಾಗಲು ಆರಂಭಿಸಿತು. ೩೮೫೬ ಕ್ಯುಸೆಕ್ ಇದ್ದ ಒಳಹರಿವು ೧೩೪೫೭ ಕ್ಯುಸೆಕ್‌ಗೆ ಏರಿತು. ಜು.೩ಂದು ೧೪೧೩೫ ಕ್ಯುಸೆಕ್‌ನಷ್ಟು ನೀರು ಹರಿದುಬಂದಿದ್ದರಿಂ ಜು.೫ಕ್ಕೆ ಜಲಾಶಯದ ನೀರಿನ ಮಟ್ಟ ೧೦೦ ಅಡಿಯನ್ನು ತಲುಪಿತ್ತು.

ಆ ನಂತರ ಜಲಾಶಯದ ಒಳಹರಿವಿನ ಪ್ರಮಾಣ ಮತ್ತೆ ಕುಸಿದು ಜು.೬ರಂದು ೬೧೮೫ಕ್ಯುಸೆಕ್ ಹರಿದುಬರುತ್ತಿತ್ತು. ಆನಂತರದ ದಿನಗಳಲ್ಲಿ ಒಳಹರಿವು ಒಮ್ಮೊಮ್ಮೆ ಏರಿಕೆಯಾಗುತ್ತಾ ಮತ್ತೊಮ್ಮೆ ಕುಸಿಯುತ್ತಲೇ ಬಂದಿತ್ತು. ಜು.೧೪ರಂದು ಒಳಹರಿವು ೨೮೯೮ ಕ್ಯುಸೆಕ್‌ಗೆ ಕುಸಿದು ಆತಂಕ ಮೂಡಿಸಿತ್ತು. ಜು.೧೫ರಂದು ಮತ್ತೆ ಒಳಹರಿವಿನ ಪ್ರಮಾಣ ೧೦,೧೨೧ಕ್ಯುಸೆಕ್‌ಗೆ ಏರಿಕೆಯಾಯಿತು. ನಂತರ ೧೯,೨೦೨ ಕ್ಯುಸೆಕ್, ಬಳಿಕ ೨೫೯೩೩ ಕ್ಯುಸೆಕ್, ಆನಂತರ ೩೫೯೯೭ ಕ್ಯುಸೆಕ್, ತದನಂತರದಲ್ಲಿ ೪೪೬೧೭ ಕ್ಯುಸೆಕ್, ಕೊನೆಗೆ ೭೦೮೫೦ ಕ್ಯುಸೆಕ್ ನೀರು ಹರಿದುಬರುವುದರೊಂದಿಗೆ ಕೇವಲ ೫ ದಿನಗಳಲ್ಲಿ ೧೫ ಟಿಎಂಸಿ ನೀರು ಹರಿದುಬಂದಿತು.

ಕಳೆದ ವರ್ಷ ಮಳೆ ಕೊರತೆಯಿಂದ ಜಲಾಶಯ ಭರ್ತಿಯಾಗಿರಲಿಲ್ಲ. ಕೇವಲ ೧೧೪ ಅಡಿಯವರೆಗೆ ಾತ್ರ ತಲುಪಲು ಸಾಧ್ಯವಾಗಿತ್ತು. ಹೀಗಾಗಿ ಮುಂಗಾರು ಹಂಗಾಮಿಗೆ ಸಮರ್ಪಕವಾಗಿ ನೀರು ಹರಿಸಲಾಗಲಿಲ್ಲ. ಬೇಸಿಗೆ ಬೆಳೆಗೂ ನೀರು ಕೊಡುವುದಕ್ಕೆ ಸಾಧ್ಯವಾಗಲೂ ಇಲ್ಲ. ಪ್ರಾಧಿಕಾರದ ನಿರಂತರ ಆದೇಶಗಳಿಂದ ಜಲಾಶಯದಲ್ಲಿ ಸಂಗ್ರಹವಾಗಿದ್ದ ಭಾಗಶಃ ನೀರೆಲ್ಲವೂ ತಮಿಳುನಾಡಿಗೆ ಹರಿಸಲಾಗಿತ್ತು.

ಜಲಾಶಯಕ್ಕೆ ೪೨,೦೪೫ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ೪೦೯೧೪ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹೇಮಾವತಿ ಜಲಾಶಯವೂ ಭರ್ತಿಯ ಹಂತ ತಲುಪಿದೆ. ಆ ಜಲಾಶಯಕ್ಕೆ ೩೪೫೬೮ ಕ್ಯುಸೆಕ್ ಒಳಹರಿವಿದ್ದು, ೩೪೭೪೫ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹಾರಂಗಿ ಜಲಾಶಯದಿಂದಲೂ ೭೧೦೪ ಕ್ಯುಸೆಕ್ ನೀರನ್ನು ಹರಿಯಬಿಡುತ್ತಿರುವುದರಿಂದ ಈ ನೀರೆಲ್ಲವೂ ಕೃಷ್ಣರಾಜಸಾಗರ ಜಲಾಶಯದತ್ತ ಹರಿದುಬರುತ್ತಿದೆ.

೧೬ ವರ್ಷದ ಜಲಾಶಯದ ನೀರಿನ ಮಟ್ಟದ ವಿವರ

೨೦೦೮ ಆ.೧೫ರಂದು ೧೨೪.೮೦ ಅಡಿಗಳು

೨೦೦೯ ಜು.೨೪ರಂದು ೧೨೪.೮೦ ಅಡಿಗಳು

೨೦೧೦ ಅ.೧೮ರಂದು ೧೨೪.೧೦ ಅಡಿಗಳು

೨೦೧೧ ಆ.೧೫ರಂದು ೧೨೪.೪೦ ಅಡಿಗಳು

೨೦೧೨ ಸೆ.೧೫ರಂದು ೧೧೦.೬೩ ಅಡಿಗಳು

೨೦೧೩ ಆ.೧ರಂದು ೧೨೪.೮೦ ಅಡಿಗಳು

೨೦೧೪ ಆ.೭ರಂದು ೧೨೪.೮೦ ಅಡಿಗಳು

೨೦೧೫ ನ.೧೭ರಂದು ೧೧೧ ಅಡಿಗಳು

೨೦೧೬ ಜು.೨೮ರಂದು ೯೯.೬೫ ಅಡಿಗಳು

೨೦೧೭ ಅ.೨೩ರಂದು ೧೧೪.೩೨ ಅಡಿಗಳು

೨೦೧೮ ಜು.೨೦ರಂದು ೧೨೪.೮೦ ಅಡಿಗಳು

೨೦೧೯ ಆ.೧೫ರಂದು ೧೨೪.೮೦ ಅಡಿಗಳು

೨೦೨೦ ಅ.೧೭ರಂದು ೧೨೪.೮೦ ಅಡಿಗಳು

೨೦೨೧ ಅ.೨೯ರಂದು ೧೨೪.೮೦ ಅಡಿಗಳು

೨೦೨೨ ಜು.೨೦ರಂದು ೧೨೪.೮೦ ಅಡಿಗಳು

೨೦೨೩ ಆ.೩ರಂದು ೧೧೩.೪೬ ಅಡಿಗಳು

೨೦೨೪ ಜು.೨೪ರಂದು ೧೨೪.೮೦ ಅಡಿಗಳು೮೦ ಸಾವಿರ ಕ್ಯುಸೆಕ್ ನೀರು ಬಿಡುವ ಮುನ್ಸೂಚನೆ

ಕೃಷ್ಣರಾಜಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಒಳಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ೮೦ ಸಾವಿರ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ಜಲಾಶಯದಿಂದ ಪ್ರಸ್ತುತ ೪೦ ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ. ಹೇಮಾವತಿ ಮತ್ತು ಹಾರಂಗಿ ಅಣೆಕಟ್ಟೆಗಳು ಭರ್ತಿಯಾಗಿರುವುದರಿಂದ ಹೆಚ್ಚು ನೀರು ಜಲಾಶಯದ ಕಡೆಗೆ ಹರಿದುಬರುತ್ತಿದೆ. ಹೀಗಾಗಿ ಅಣೆಕಟ್ಟೆಯಿಂದ ೫೦ ಸಾವಿರ ಕ್ಯುಸೆಕ್‌ನಿಂದ ೮೦ ಸಾವಿರ ಕ್ಯುಸೆಕ್‌ವರೆಗೆ ನೀರು ಹರಿಯಬಿಡುವ ಸಾಧ್ಯತೆಗಳಿರುವುದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಚ್ಚರಿಕೆ ನೀಡಿದ್ದಾರೆ.

ಜಲಾಶಯದಿಂದ ಹೆಚ್ಚು ನೀರನ್ನು ಹರಿಯ ಬಿಟ್ಟಿರುವುದರಿಂದ ರಂಗನತಿಟ್ಟು ಪಕ್ಷಿಧಾಮದ ಬೋಟಿಂಗ್ ಪಾಯಿಂಟ್ ಮುಳುಗಡೆಯಾಗಿದೆ. ಪಕ್ಷಿಗಳ ಆಶ್ರಯತಾಣವಾದ ನಡುಗಡ್ಡೆಗಳು ಭಾಗಶಃ ಜಲಾವೃಗೊಂಡಿವೆ. ನೀರು ಮತ್ತಷ್ಟು ಹೆಚ್ಚಾದರೆ ವಾಕಿಂಗ್ ಪಾಥ್‌ಗೂ ನೀರು ನುಗ್ಗುವ ಸಾಧ್ಯತೆಗಳಿವೆ. ಪ್ರವಾಸಿಗರ ವೀಕ್ಷಣೆಗೂ ನಿರ್ಬಂಧ ವಿಧಿಸಲಾಗಿದ್ದು, ಗೇಟ್ ಬಳಿಯೇ ಪ್ರವಾಸಿಗರನ್ನ ತಡೆದು ಹೊರಗೆ ಕಳುಹಿಸಲಾಗುತ್ತಿದೆ.