ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಪವಿತ್ರಾ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಗೀತಾ ಚಾವಣ್ ತಿಳಿಸಿದ್ದಾರೆ.ಈ ಹಿಂದೆ ಅಧ್ಯಕ್ಷರಾಗಿದ್ದ ರಮೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಕಾಂಗ್ರೆಸ್ ಬೆಂಬಲಿತ ೧೬ ಸದಸ್ಯರನ್ನು ಹೊಂದಿರುವ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪವಿತ್ರಾ ಮಂಜುನಾಥ್ ಅವರನ್ನು ಹೊರತುಪಡಿಸಿ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿ ಗೀತಾ ಚಾವಣ್ ಅವರು ಅವಿರೋಧವಾಗಿ ಆಯ್ಕೆಯೆಂದು ಘೋಷಿಸಿದರು.
ನೂತನ ಅಧ್ಯಕ್ಷೆ ಪವಿತ್ರಾ ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಟಿ.ಎಸ್.ರಾಜಶೇಖರ್ ಅಭಿನಂದಿಸಿ ಮಾತನಾಡಿ, ಎಲ್ಲಾ ಸದಸ್ಯರು ವಿಶ್ವಾಸವಿಟ್ಟು ಪವಿತ್ರಾ ಮಂಜುನಾಥ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು, ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಗಳ ಅಭಿವೃದ್ಧಿಗೆ ಒತ್ತು ಕೊಡಬೇಕು. ಅಲ್ಲದೆ ಸರ್ಕಾರದಿಂದ ಬರುವ ಅನುದಾನವನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವಲ್ಲಿ ಎಲ್ಲಾ ಸದಸ್ಯರು ಕೈ ಜೋಡಿಸಿ ಉತ್ತಮ ಸೇವೆ ಸಲ್ಲಿಸುವತ್ತ ಗಮನಹರಿಸಬೇಕು ಎಂದರು.ಗ್ರಾಪಂ ನೂತನ ಅಧ್ಯಕ್ಷೆ ಪವಿತ್ರಾ ಮಂಜುನಾಥ್ ಮಾತನಾಡಿ, ಶಾಸಕ ಶರತ್ ಬಚ್ಚೇಗೌಡರ ಆಶೀರ್ವಾದದಿಂದ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದು, ನಮ್ಮ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಜನತೆಗೆ ಮೂಲ ಸವಲತ್ತುಗಳಾದ ಕುಡಿಯುವ ನೀರು, ಬೀದಿ ದೀಪ, ಚರಂಡಿಗಳ ಸ್ವಚ್ಛತೆ, ಕಸ ವೀಲೆವಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡುವತ್ತ ಗಮನಹರಿಸುತ್ತೇನೆ ಎಂದು ಹೇಳಿದರು.
ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರ್‌ಗೌಡ, ಮಾಜಿ ತಾಪಂ ಅಧ್ಯಕ್ಷ ಟಿ.ಎಸ್.ರಾಜಶೇಖರ್, ಬಿಎಂಆರ್‌ಡಿಎ ಸದಸ್ಯ ಸುಬ್ಬರಾಜು, ಮುಖಂಡರಾದ ಗುರುಬಸಪ್ಪ, ಎಂ.ದೇವರಾಜ್ ನೂತನ ಅಧ್ಯಕ್ಷರಿಗೆ ಅಭಿನಂದಿಸಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಪಿಡಿಒ ಮುನಿಗಂಗಯ್ಯ, ಉಪಾಧ್ಯಕ್ಷರಾದ ಅಸ್ಮಾತಾಜ್ ಜಿಯಾಉಲ್ಲಾ, ಮಾಜಿ ಅಧ್ಯಕ್ಷರಾದ ಎನ್.ರಮೇಶ್, ಬಸವಪ್ರಕಾಶ್, ಆರ್.ರವಿಕುಮಾರ್, ಮಂಜುನಾಥ್, ದೇವತಾ ಟಿ.ನಾಗರಾಜ್, ಮಾಜಿ ಉಪಾಧ್ಯಕ್ಷ ಎಸ್.ಸುಧಾಕರ್, ಮಾಜಿ ತಾಪಂ ಸದಸ್ಯ ಡಿ.ನರಸಿಂಹಯ್ಯ, ಮಾಜಿ ಸದಸ್ಯ ಅಂಬರೀಶ್, ಕಾರ್ಯದರ್ಶಿ ನರೇಶ್, ಕರವಸೂಲಿಗಾರ ರಾಜಣ್ಣ ಹಾಗೂ ಎಲ್ಲಾ ಗ್ರಾಪಂ ಸದಸ್ಯರು ಹಾಜರಿದ್ದರು.