ಸಾರಾಂಶ
ತಾಲೂಕಿನ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಸಂಘದ ನೂತನ ಅಧ್ಯಕ್ಷರಾಗಿ ಹೊಣಕೆರೆ ಕೃಷ್ಣಸ್ವಾಮಿ ನೇಮಕವಾಗಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಸಂಘದ ನೂತನ ಅಧ್ಯಕ್ಷರಾಗಿ ಹೊಣಕೆರೆ ಕೃಷ್ಣಸ್ವಾಮಿ ನೇಮಕವಾಗಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಘಟಕ ರಚಿಸಿ ಮಾತನಾಡಿದ ಅಲೆಮಾರಿ ಹಿಂದುಳಿದ ವರ್ಗ ೧ ಜನಾಂಗದ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಮಂಜುನಾಥ್ ಅವರು ಅಲೆಮಾರಿ ಸಮಾಜವನ್ನು ಒಗ್ಗೂಡಿಸುವ ಮೂಲಕ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಆ ಜನಾಂಗಕ್ಕೆ ಒದಗಿಸುವ ದೃಷ್ಟಿಯಿಂದ ಅಲೇಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಸಂಘ ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಈ ಜನಾಂಗಕ್ಕೆ ನಲವತ್ತಾರು ಉಪಜಾತಿಗಳು ಸೇರಿವೆ. ಆದರೆ ತುರುವೇಕೆರೆ ತಾಲೂಕಿನಲ್ಲಿ ಐದರಿಂದ ಆರು ಜನಾಂಗ ಮಾತ್ರ ವಾಸ ಮಾಡುತ್ತಿದ್ದಾರೆ. ಗೊಲ್ಲ, ಬುಡುಬುಡಿಕೆ, ಸಿಳ್ಳೇಕ್ಯಾತ, ಬೆಸ್ತರ್, ದೊಂಬಿದಾಸ ಜನಾಂಗದವರು ತಾಲೂಕಿನಲ್ಲಿ ವಾಸ ಮಾಡುತ್ತಿದ್ದು ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ಜನಸಂಖ್ಯೆ ಇದೆ. ಈ ಜನಾಂಗ ಎಲ್ಲಾ ಕ್ಷೇತ್ರದಲ್ಲಿಯೂ ಸಹ ಹಿಂದುಳಿದಿದೆ. ಈ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸಂಘವನ್ನು ಸ್ಥಾಪಿಸಲಾಗುತ್ತಿದೆ. ಇದರ ಮೂಲಕ ಎಸ್.ಸಿ ಮತ್ತು ಎಸ್ಟಿ ಜನಾಂಗಕ್ಕೆ ಸಿಗುವ ಮೀಸಲಾತಿ ನಮ್ಮ ಅಲೇಮಾರಿ ಜನಾಂಗಕ್ಕೆ ಸಿಗಬೇಕು. ಅಲೆಮಾರಿಗಳು ವಾಸ ಮಾಡುವ ಸ್ಥಳಗಳಲ್ಲಿ ಸಿ.ಸಿ.ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯ ದೊರೆಯಬೇಕು. ಬಜೆಟ್ ನಲ್ಲಿ ಈ ಜನಾಂಗದ ಅಭಿವೃದ್ಧಿಗಾಗಿ ೫೦೦ ಕೋಟಿ ಮೀಸಲಿಡಬೇಕು. ಅಲೆಮಾರಿಗಳು ವಾಸ ಮಾಡುವ ಗೋಮಾಳ, ಜಮೀನು ಸೇರಿದಂತೆ ವಾಸಿಸುವ ಜಾಗಕ್ಕೆ ಹಕ್ಕುಪತ್ರ, ಪಹಣಿ ನೀಡಬೇಕು. ಈ ಜನಾಂಗಕ್ಕೆ ಪ್ರತ್ಯೇಕ ರುದ್ರಭೂಮಿ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ಇದೇ ತಿಂಗಳ ೧೬ ರಂದು ತುಮಕೂರಿನಲ್ಲಿ ಜಿಲ್ಲಾ ಸಮ್ಮೇಳನ ಏರ್ಪಡಿಸಲಾಗಿದೆ. ಈ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಂಜುನಾಥ್ ಕರೆ ನೀಡಿದರು. ತಾಲೂಕಿನ ಅಧ್ಯಕ್ಷರಾಗಿ ಹೊಣಕೆರೆ ಕೃಷ್ಣಸ್ವಾಮಿ, ಗೌರವಾಧ್ಯಕ್ಷರಾಗಿ ದಿವಾಕರ್, ಉಪಾಧ್ಯಕ್ಷರಾಗಿ ನರಸಿಂಹರಾಜು, ಪ್ರಭಾಕರ್, ನಟೇಶ್, ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣಮೂರ್ತಿ, ಅಶೋಕ್, ರವಿ, ಶಶಿಧರ್, ಖಜಾಂಚಿಯಾಗಿ ಬಸವರಾಜು, ಪ್ರಧಾನ ಕಾರ್ಯದರ್ಶಿಯಾಗಿ ರಮೇಶರವರನ್ನು ನೇಮಕ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಮಧುಸೂಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡಲಗಿರೀಶ್, ತಾಲೂಕು ಯಾದವ ಸಮಾಜದ ಅಧ್ಯಕ್ಷ ಜಿ.ಪಂ ಮಾಜಿ ಸದಸ್ಯ ಉಗ್ರಯ್ಯ, ತಾಲ್ಲೂಕು ಜೆ.ಡಿ.ಎಸ್ ಮಾಜಿ ಅಧ್ಯಕ್ಷ ಸ್ವಾಮಿ ಸೇರಿದಂತೆ ಇತರರು ಇದ್ದರು.