ಸಾರಾಂಶ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಕರ್ನಾಟಕಕ್ಕಾಗಿ ನಾವು ಎಂಬ ರಾಜ್ಯದಾದ್ಯಂತ ಬೈಕ್ ಜಾಥಾವು ಶುಕ್ರವಾರ ಪಟ್ಟಣಕ್ಕೆ ಆಗಮಿಸಿತು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಕರ್ನಾಟಕಕ್ಕಾಗಿ ನಾವು ಎಂಬ ರಾಜ್ಯದಾದ್ಯಂತ ಬೈಕ್ ಜಾಥಾವು ಶುಕ್ರವಾರ ಪಟ್ಟಣಕ್ಕೆ ಆಗಮಿಸಿತು. ನಗರದ ಹಳೇ ಬಸ್‌ನಿಲ್ದಾಣದಲ್ಲಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಮಾತನಾಡಿ, ಖಾಸಗಿ ಶಾಲೆಗಳ ಗುಣಮಟ್ಟದ ಸರ್ಕಾರಿ ಉಚಿತ ಶಾಲೆಗಳು ನಿರ್ಮಾಣವಾಗಬೇಕು, 3 ಲಕ್ಷಕ್ಕಿಂತ ಹೆಚ್ಚು ಸರ್ಕಾರಿ ಹುದ್ದೆಗಳ ಪಾರದರ್ಶಕ ನೇಮಕಾತಿಯಾಗಬೇಕು, ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿ ನಿರುದ್ಯೋಗಿಗಳಿಗೆ ಮಾಸಾಶನ ಹಾಗೂ ಗ್ರಾಮೀಣ ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಗ್ರಾಪಂಗೊಂದು ಉಚಿತ ಕ್ರೀಡಾ ತರಬೇತಿ ಅಕಾಡೆಮಿಗಳ ಸ್ಥಾಪನೆಯಾಗಬೇಕು. ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನಡೆದು ಖಾಸಗಿ ಆಸ್ಪತ್ರೆಗಳ ಗುಣಮಟ್ಟದ ರೀತಿ ಉಚಿತ ಸರ್ಕಾರಿ ಆಸ್ಪತ್ರೆಗಳು ನಿರ್ಮಾಣವಾಗಬೇಕು. ಎಲ್ಲಾ ಶಾಲೆಗಳಲ್ಲಿ ಬ್ಯಾಂಕುಗಳಲ್ಲಿ ರೈಲ್ವೆ, ವಿಮಾನ ನಿಲ್ದಾಣಗಳಲ್ಲಿ ಕನ್ನಡದ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ಹೊಸ ಉದ್ಯಮಗಳ ನಿರ್ಮಾಣಕ್ಕೆ ಪೂರಕ ಮತ್ತು ಅನುಕೂಲ ವಾತಾವರಣವಾಗಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಬೇಕು. ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಯುವಕರನ್ನು ಸ್ವಾವಲಂಬಿ ಮಾಡಲು ಹೋಬಳಿಗೊಂದು ಕೌಶಲ್ಯ ತರಬೇತಿ ಕೇಂದ್ರ ಸ್ಥಾಪಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಠಿಸಬೇಕು ಆಗ ಮಾತ್ರ ರಾಜ್ಯದಲ್ಲಿ ಒಂದು ನವ ನಿರ್ಮಾಣದ ಕನಸು ನನಸಾಗುತ್ತದೆ ಇದೆಲ್ಲಾ ದೃಷ್ಠಿಯನ್ನು ಇಟ್ಟುಕೊಂಡು ಕೆಆರ್‌ಎಸ್ ಪಕ್ಷ ರಾಜ್ಯ ವ್ಯಾಪ್ತಿ ೩೦೦೦ ಕಿ.ಮೀ. ಬೈಕ್ ಜಾಥಾವನ್ನು ಹಮ್ಮಿಕೊಂಡಿದ್ದು ಈ ಬಾರಿ ಭ್ರಷ್ಟರನ್ನು ದೂರವಿಟ್ಟು ಮತದಾನ ಮಾಡುವಂತೆ ಮನವಿ ಮಾಡಿದರು. ಈ ವೇಳೆ ರಾಜ್ಯ ಉಪಾಧ್ಯಕ್ಷ ಎಸ್. ಎಚ್. ಲಿಂಗೇಗೌಡ, ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ಎನ್. ದೀಪಕ್, ತಾಲೂಕು ಅಧ್ಯಕ್ಷ ಶಿವಕುಮಾರ್ ಮತ್ತಿತರಿದ್ದರು.