ಶೀಘ್ರ ರಸ್ತೆಗಳ ದುರಸ್ಥಿಗೆ ಕೆಆರ್‌ಎಸ್ ಆಗ್ರಹ

| Published : Jan 31 2025, 12:49 AM IST

ಸಾರಾಂಶ

ಕೊಳ್ಳೇಗಾಲ ಪಟ್ಟಣದ ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಗುರುವಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆಗೆ ಮುಕ್ತಿ ನೀಡಬೇಕು, ಆ ಮೂಲಕ ವಾಹನ ಸವಾರರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಗುರುವಾರ ನಗರಸಭೆ ಮುಂಭಾಗ ಸಾಂಕೇತಿಕವಾಗಿ ಪ್ರತಿಭಟಿಸಿದರು. ಪಟ್ಟಣದ ಗುರುಕಾರ್ ವೃತ್ತದ ಬಳಿ ಜಮಾಯಿಸಿದ್ದ ಪ್ರತಿಭಟನಾಕಾರರು ನಗರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಹದಗೆಟ್ಟ ಡಾ.ರಾಜ್ ಕುಮಾರ್ ರಸ್ತೆ, ಡಾ.ಅಂಬೇಡ್ಕರ್ ರಸ್ತೆಯಲ್ಲಿ ಮೆರವಣಿಗೆ ನಡೆಸುವ ಮೂಲಕ ನಗರಸಭೆ ಮುಂದೆ ಜಮಾಯಿಸಿ ಪ್ರತಿಭಟಿಸಿದರು. ರಸ್ತೆಗಳು ಹಾಳಾಗಿರುವುದರಿಂದ ವಾಹನ ಸವಾರರು, ಪಾದಾಚಾರಿಗಳು ಸಂಚರಿಸಲು ತ್ರಾಸದಾಯಕವಾಗಿದೆ, ಕೂಡಲೆ ನಗರಸಭಾಧಿಕಾರಿ, ಶಾಸಕರು ಎಚ್ಚೆತ್ತುಕೊಳ್ಳಬೇಕು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ, ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದರೂ ಸಾರ್ವಜನಿಕ ಕೆಲಸ ಸುಗಮವಾಗಿ ಆಗುತ್ತಿಲ್ಲ, ಕೊಳ್ಳೇಗಾಲ ನಗರಸಭೆಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತಿಲ್ಲ, ಇನ್ನಾದರೂ ಸ್ಥಳೀಯ ತಾಲೂಕು ಆಡಳಿತ, ಜಿಲ್ಲಾಡಳಿತ ಇತ್ತ ಗಮನಹರಿಸಬೇಕು ಎಂದು ಮನವಿ ಮಾಡಿದರು. ಈ ಭಾಗದಲ್ಲಿ ಅನೇಕ ಗಣ್ಯರು, ಸಚಿವ, ಶಾಸಕರು ಸಂಚರಿಸುತ್ತಿದ್ದರೂ ಅವರಿಗೆ ರಸ್ತೆ ಸಮಸ್ಯೆ ಕಾಣದಾಗಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಕೆ.ಆರ್.ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಎಲ್.ಶ್ರೀನಿವಾಸ್ ಶಾಸ್ತ್ರೀ, ಗಣೇಶ್, ಚಾ.ನಗರ ಜಿಲ್ಲಾಧ್ಯಕ್ಷ ಗಿರೀಶ್, ಉಪಾಧ್ಯಕ್ಷ ಸೈಯದ್ ಸಮೀ, ಜಿಲ್ಲಾ ಕಾರ್ಯದರ್ಶಿ ಬೂದಬಾಳು ಶ್ರೀನಿವಾಸ್, ಪ್ರದಾನ ಕಾರ್ಯದರ್ಶಿ ಕಂದಳ್ಳಿ ಮಹೇಶ್,ನವೀನ್, ಹೊಸ ಹಂಪಾಪುರ ಕುಮಾರ್, ಮಧುನಾಯಕ, ಚಂದ್ರಶೇಖರ, ಜಯಶಂಕರ್, ಶಿವಶಂಕರ್ ಇನ್ನಿತರರಿದ್ದರು.