ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕೆಆರ್‌ಎಸ್ ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸದೇ, ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು.

ಸಮಿತಿ ಹಿರಿಯ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ಹಾಗೂ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಸದಸ್ಯರು, ತಾಲೂಕಿನಲ್ಲಿ ವಿವಿಧ ಅಕ್ರಮಗಳ ಕುರಿತು ದೂರು ನೀಡಿದ್ದರೂ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿದರು.

ಬೃಂದಾವನ ವೀಕ್ಷಣೆಗೆ ಬರುವ ಪ್ರವಾಸಿಗರಿಂದ ಅಧಿಕ ಶುಲ್ಕ ಪಡೆಯಲಾಗುತ್ತಿದೆ. ಜೊತೆಗೆ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ ಎಂದು ದೂರಿದರು.

ಶ್ರೀರಂಗಪಟ್ಟಣ- ಬೀದರ್ ರಸ್ತೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಕಿರಂಗೂರು ಮಾರ್ಗ ದರಸಗುಪ್ಪೆ ಗ್ರಾಮದವರೆಗೂ ಕಾಮಗಾರಿ ಪೂರ್ಣಗೊಳಿಸದೆ ಮಂದಗತಿಯಲ್ಲಿ ನಡೆಯುತ್ತಿದೆ. ಪ್ರತಿ ನಿತ್ಯ ಸಾವಿರಾರು ವಾಹನಗಳು ಓಡಾಟ ನಡೆಸುತ್ತಿದ್ದು, ರಸ್ತೆ ಕಾಮಗಾರಿಯಲ್ಲಿರುವುದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಪಾದಚಾರಿಗಳಿಗಂತು ಧೂಳು ಜೊತೆ ರಸ್ತೆ ಕಲ್ಲುಗಳು ಸಿಡಿದು ಪ್ರಾಣಕ್ಕೆ ಅಪಾಯ ತಂರುವಂತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ ಕಾಮಗಾರಿ ನಡೆಸುವ ಗುತ್ತಿಗೆದಾರನ ವಿರುದ್ದ ಕ್ರಮ ತೆಗೆದುಕೊಳ್ಳಲು ಮೀನಾಮೇಷ ಎಣಿಸುತ್ತಿದ್ಧಾರೆ ಎಂದು ಆರೋಪಿಸಿದರು.

ಕೆಆರ್‌ಎಸ್‌ನ ಬೃಂದಾವನಕ್ಕೆ ಹೋಗುವ ಪ್ರವಾಸಿಗರ ವಾಹನಗಳ ಪ್ರವೇಶ ಶುಲ್ಕವನ್ನು ನೀರಾವರಿ ನಿಗಮದಿಂದ ಮೂರುಪಟ್ಟು ಏರಿಕೆ ಮಾಡಿ ಪ್ರವಾಸಿಗರಿಗೆ ಬರೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೇತುವೆ ಮೇಲೆ ಹೋಗುವ ವಾಹನಗಳ ಶುಲ್ಕ ಪಡೆಯುವುದಲ್ಲದೆ ಪಾಸ್ಟ್‌ಟ್ಯಾಗ್ ಮೂಲಕ ಕತ್ತರಿ ಹಾಕುವುದು ನಂತರ ಪ್ರವೇಶದ್ವಾರದಲ್ಲಿ ಮತ್ತೆ ವಾಹನಗಳಿಗೆ ಪ್ರವೇಶ ಶುಲ್ಕ ಜೊತೆಗೆ ಪ್ರವಾಸಿಗರಿಗೂ ಬೃಂದಾವನ ಪ್ರವೇಶ ಶುಲ್ಕ ಹೀಗೆ ಮೂರ್‍ನಾಲ್ಕು ವಿಧದಲ್ಲಿ ಶುಲ್ಕ ವಸೂಲು ಮಾಡಿ ಪ್ರವಾಸಿಗರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ನೀರಾವರಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಇದಲ್ಲದೇ, ಕಳೆದ 50 ವರ್ಷದಿಂದ ಉಳುಮೆ ಮಾಡುವ ರೈತರಿಗೆ ಭೂಮಿಯನ್ನು ಸಕಾಲಕ್ಕೆ ದರಕಾಸು ಸಮಿತಿ ಕರೆದು ಅವರ ಹೆಸರಿಗೆ ಖಾತೆ ಮಾಡದೆ ತಾಲೂಕು ಆಡಳಿತದ ಬೇಜಬ್ದಾರಿತನ ತೋರುತ್ತಿದೆ. ಶಾಸಕರ ನೇತೃತ್ವದಲ್ಲಿ ದರಕಾಸು ಸಮಿತಿ ಸಭೆ ಕರೆದು ಉಳುಮೆ ಮಾಡಿ ಕೃಷಿ ಚಟುವಟಿಕೆಯಲ್ಲಿರುವ ರೈತರನ್ನ ಪರಿಶೀಲಿಸಿ ಅವರಿಗೆ ಖಾತೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಬೆಳವಾಡಿ ಹಾಗೂ ಬೀಚನಕುಪ್ಪೆ ಗ್ರಾಮದ ಬಳಿಯ ಸಾವಿರಾರೂ ಬೆಲೆ ರು. ಬಾಳುವ ಸರ್ಕಾರಿಯ ನೂರಾರು ಎಕರೆ ಜಮೀನು ಕಬಳಿಸಿರುವ ಉದ್ಯಮಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕಳೆದ ಎರಡು ವರ್ಷದಿಂದ ಪ್ರತಿಭಟಿಸಿ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ಬಗ್ಗೆ ಕಠಿಣ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಶಿರಸ್ತೇದಾರ್ ನಾಗೇಶ್ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.

ಒಂದು ವೇಳೆ ಈ ಮೇಲಿನ ಅಕ್ರಮಗಳ ವಿರುದ್ದ ಕ್ರಮಕ್ಕೆ ಮುಂದಾಗದಿದ್ದರೆ ತಾಲೂಕು ಆಡಳಿತ ವಿರುದ್ದವೇ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಕುಳಿತು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಸದಸ್ಯರಾದ ಹುಂಡವಾಡಿ ಮಹದೇವು, ರಾಮಕೃಷ್ಣ, ಎಂ.ವಿ.ಕೃಷ್ಣ, ವಸಂತ ಸೇರಿದಂತೆ ಇತರರು ಇದ್ದರು.