ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದಲ್ಲಿ ೧೫೦ ದಿನಗಳ ಕಾಲ ಗರಿಷ್ಠ ಮಟ್ಟದ ನೀರು ಸಂಗ್ರಹವಾಗಿ ಹೊಸ ದಾಖಲೆ ಬರೆದಿದೆ. ಕಳೆದ ವರ್ಷ ೧೦೮ ದಿನಗಳವರೆಗೆ ಗರಿಷ್ಠ ಮಟ್ಟದ ನೀರನ್ನು ಕಾಯ್ದಿರಿಸಿಕೊಂಡಿದ್ದ ಜಲಾಶಯ ಈ ಬಾರಿ ಇನ್ನೂ ಹೆಚ್ಚು ಕಾಲ ಪೂರ್ಣ ಪ್ರಮಾಣದಲ್ಲಿ ನೀರನ್ನು ತನ್ನ ಒಡಲಲ್ಲಿ ಹಿಡಿದಿಟ್ಟುಕೊಳ್ಳುವ ಮೂಲಕ ಮತ್ತೊಂದು ದಾಖಲೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ.ಕೇರಳದ ವಯನಾಡು, ಮಡಿಕೇರಿ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾಗಿತ್ತು. ಜೊತೆಗೆ ಜೂ ೩೦ರಂದು ಕಾವೇರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದರು. ಅಣೆಕಟ್ಟೆಯಲ್ಲಿ ಸತತ ೧೫೦ ದಿನಗಳ ಕಾಲ ಗರಿಷ್ಠ ಮಟ್ಟದ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಈ ಭಾಗದ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಇಲ್ಲದಂತೆ ಕಾಪಾಡಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ.
ಅಣೆಕಟ್ಟು ಭರ್ತಿಯಾದ ನಂತರದ ದಿನಗಳಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಆದ್ಯತೆ ನೀಡುವ ಸಲುವಾಗಿ ನಾಲೆಗಳಲ್ಲಿ ನೀರು ಹರಿಸಲಾಯಿತು. ಮಳೆ ಪ್ರಮಾಣ ಕಡಿಮೆಯಾದ ಕಾರಣ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಜುಲೈನಿಂದ ಇಲ್ಲಿಯವರೆಗೆ ಕೇರಳ, ಕೊಡಗು, ಹೇಮಾವತಿ ಭಾಗದಲ್ಲೂ ನಿರಂತರ ಮಳೆ ಸುರಿದಿದ್ದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಳಗೊಂಡು ಅಣೆಕಟ್ಟು ಭರ್ತಿಯಾಯಿತು. ಅದರಿಂದಾಗಿ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡುವ ಮೂಲಕ ಗರಿಷ್ಠ ಮಟ್ಟವನ್ನು ಕಾಯ್ದುಕೊಳ್ಳಲಾಗಿತ್ತು.ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಬೀಳುತ್ತಿರುವುದರಿಂದ ತಮಿಳುನಾಡಿಗೆ ಈ ಬಾರಿ ಅಪಾರ ಪ್ರಮಾಣದ ನೀರು ಹರಿದುಹೋಗಿದೆ. ಕರ್ನಾಟಕದಿಂದ ಹರಿಯಲ್ಪಟ್ಟ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗದೆ ಮೆಟ್ಟೂರು ಜಲಾಶಯದಿಂದಲೂ ಸಮುದ್ರಕ್ಕೆ ಹೆಚ್ಚು ಪ್ರಮಾಣದ ನೀರು ಹರಿದುಹೋಗಿದೆ ಎನ್ನಲಾಗಿದೆ.
ಒಟ್ಟಾರೆ ಈ ಬಾರಿ ವರುಣನ ಕೃಪೆಯಿಂದ ಕಾವೇರಿ ನೀರಿನ ವಿವಾದ ಸೃಷ್ಟಿಯಾಗಿಲ್ಲ. ಜಿಲ್ಲೆಯ ರೈತರಿಗೆ ಎರಡು ಬೆಳೆ ಬೆಳೆಯಲು ಕೃಷ್ಣರಾಜಸಾಗರ ಜಲಾಶಯದಿಂದ ನೀರು ಕೊಡಲು ನೀರಾವರಿ ಸಲಹಾ ಸಮಿತಿ ಸಹ ಸಹಮತ ವ್ಯಕ್ತಪಡಿಸಿದೆ. ಜೊತೆಗೆ ಹತ್ತು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಯೂ ಇಲ್ಲದೇ ಇರುವುದರಿಂದ ರೈತರು ಖುಷಿಯಿಂದ ಇರುವುದು ಕಂಡುಬಂದಿದೆ.ಪ್ರಸ್ತುತ ಜಲಾಶಯದ ಗರಿಷ್ಠ ಮಟ್ಟ ೧೨೪.೮೦ ಅಡಿ ಆಗಿದ್ದು, ೧೨೩.೮೬ ಅಡಿಯವರೆಗೆ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ೩೩೭೨ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಅಣೆಕಟ್ಟೆಯಿಂದ ೫೭೦೨ ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ ೪೮.೧೪೪ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
;Resize=(128,128))
;Resize=(128,128))
;Resize=(128,128))