ಸಾರಾಂಶ
ಉಳ್ಳಾಲ: ಇಂಗ್ಲಿಷಲ್ಲಿ ಬೇರೆ, ಬೇರೆ ಕಾಯಿಲೆಯ ಚಿತ್ರಣ ಕಟ್ಟಿ ಕೊಡುವ ಸಾಕಷ್ಟು ಕೃತಿಗಳು ಬಂದಿವೆ. ಆದರೆ ರೋಗ, ರೋಗಿ, ರೋಗಿಯ ಆತ್ಮೀಯರ ಅನುಭವದ ಕಥನಗಳು ಕನ್ನಡದಲ್ಲಿ ಬಂದಿರುವುದು ಬಹಳ ವಿರಳ ಎಂದು ಚಿತ್ರದುರ್ಗ ಬಿಎಂಸಿಎಚ್ ಮನೋವೈದ್ಯಕೀಯ ವಿಭಾಗದ ಪ್ರೊ.ಡಾ.ಕೆ.ಎಸ್. ಪವಿತ್ರಾ ಅಭಿಪ್ರಾಯಪಟ್ಟಿದ್ದಾರೆ.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಅಧೀನದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ವತಿಯಿಂದ ಬುಧವಾರ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಹಿರಿಯ ಲೇಖಕಿ ಚಂದ್ರಕಲಾ ನಂದಾವರ ಅವರು ತಮ್ಮ ಪತಿ ಪ್ರೊ.ವಾಮನ ನಂದಾವರರ ಡಿಮೆನ್ಶಿಯಾ ಅಲ್ಝೈಮರ್ಸ್ ಕಾಯಿಲೆಯ-ಅನುಭವ ಯಾನದ ಬಗ್ಗೆ ರಚಿಸಿದ ‘ಕಾಲ ಕಟ್ಟಿದ ಕನಸು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಚಂದ್ರಕಲಾ ಅವರು ಡಿಮೆನ್ಶಿಯಾ (ಮರೆಗುಳಿತನ)ಕಾಯಿಲೆಯ ಬಗೆಗಿನ ಸಾಕಷ್ಟು ಮಾಹಿತಿಯನ್ನು ಮೊದಲ ಪುಟದಲ್ಲೇ ನೀಡಿದ್ದಾರೆ. ಸಾವು ಎದುರು ನೋಡಬೇಕಾದರೆ ಮನಸಿನ ನೋವಿನ ಭಿನ್ನ ಮುಖ, ಯೋಚನೆ, ಭವಿಷ್ಯ, ಜಾತಕ ನೋಡಿದನ್ನೂ ಕೃತಿಯಲ್ಲಿ ದಾಖಲಿಸಿದ್ದಾರೆ. ಹಾಗಾಗಿ ಈ ಪುಸ್ತಕವನ್ನ ವೈದ್ಯರೂ ಓದಲೇ ಬೇಕಿದೆ. ಈ ಅನುಭವ ಕಥನವು ಬರೆದ ಲೇಖಕಿ ಮತ್ತು ಓದುಗನಿಗೆ ಏಕಕಾಲದ ಚಿಕಿತ್ಸಕವಾಗಿ ಕಾಣುತ್ತದೆ ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.ದೇರಳಕಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಪ್ರೊ.ಡಾ.ಸುಮಲತಾ ಆರ್.ಶೆಟ್ಟಿ, ಯೆನೆಪೋಯ ವಿವಿಯ ಹಿರಿಯ ನಾಗರಿಕರ ವಿಭಾಗದ ಮುಖ್ಯಸ್ಥ ಹಾಗೂ ಸಂಶೋಧಕರಾದ ಡಾ.ಪ್ರಭಾ ಅಧಿಕಾರಿ ಇದ್ದರು.ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಡಾ.ಶಿಶಿರ್ ಕುಮಾರ್ ಸ್ವಾಗತಿಸಿದರು. ಡಾ.ಉಂಡಾರು ಶ್ರೀನಿವಾಸ್ ಭಟ್ ಲೇಖಕಿಯನ್ನು ಪರಿಚಯಿಸಿದರು. ಶೃತಿ ಅಮೀನ್ ಮುಖ್ಯ ಅತಿಥಿಯನ್ನ ಪರಿಚಯಿಸಿದರು. ಡಾ.ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಸಾಯಿಗೀತ ನಿರೂಪಿಸಿದರು. ಪ್ರೊ.ಆಗ್ನಿತ ಐಮನ್ ವಂದಿಸಿದರು.ಎಷ್ಟೋ ರೋಗಿಗಳನ್ನ ಕಂಡಾಗ ಅವರಿಗೆ ಅಂಟಿಕೊಂಡಿರುವುದು ಡಿಮೆನ್ಶಿಯಾ ಕಾಯಿಲೆ ಎಂಬುದು ಗೊತ್ತಿರಲಿಲ್ಲ. ಆದರೆ ನನ್ನ ಪತಿಗೆ ಡಿಮೆನ್ಶಿಯ ಕಾಯಿಲೆ ಅಂಟಿಕೊಂಡಾಗ ಇದರ ಬಗ್ಗೆ ಬರೆಯಬೇಕೆಂಬ ಛಲದಿಂದ ಬರೆದೆ. ಪತಿಯ ಶುಶ್ರೂಷೆ ಮಾಡಿದಕ್ಕಿಂತಲೂ ಹೆಚ್ಚು ಪುಸ್ತಕ ಬರೆಯಲು ಕಷ್ಟ ಪಟ್ಟಿದ್ದೇನೆ. ಪುಸ್ತಕ ಬರೆದ ನಂತರ ಮಾನಸಿಕವಾಗಿ ನಿರಾಳನಾಗಿದ್ದೇನೆ.
-ಚಂದ್ರಕಲಾ ನಂದಾವರ,ಖ್ಯಾತ ಲೇಖಕರು.