ಡಿ.೧೫ಕ್ಕೆ ಕೆಎಸ್‌ನ ಗೀತ-ನೃತ್ಯೋತ್ಸವ: ಕಿಕ್ಕೇರಿ ಕೃಷ್ಣಮೂರ್ತಿ

| Published : Dec 13 2024, 12:49 AM IST

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ನಿಂದ ಕೆ.ಎಸ್.ನರಸಿಂಹ ಸ್ವಾಮಿರವರ ನೆನಪಿನ ಗೀತ ನೃತ್ಯೋತ್ಸವ ಕಾರ್ಯಕ್ರಮ ಡಿ.೧೫ರ ಸಂಜೆ ೫.೩೦ಕ್ಕೆ ನಗರದ ಬಾಲಭವನ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ನಿಂದ ಕೆ.ಎಸ್.ನರಸಿಂಹ ಸ್ವಾಮಿರವರ ನೆನಪಿನ ಗೀತ ನೃತ್ಯೋತ್ಸವ ಕಾರ್ಯಕ್ರಮ ಡಿ.೧೫ರ ಸಂಜೆ ೫.೩೦ಕ್ಕೆ ನಗರದ ಬಾಲಭವನ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.

ಜಿಲ್ಲೆಯಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಪೂರ್ವಭಾವಿಯಾಗಿ ಹಾಗೂ ಸಮ್ಮೇಳನಕ್ಕೆ ಸ್ವಾಗತ ಕೋರುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ವಹಿಸುವರು. ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿಯಾಗಿ ಡಾ.ಬಿ.ವಿ.ನಂದೀಶ್ ಪ್ರಾಸ್ತವಿಕವಾಗಿ ಮಾತನಾಡುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಗಾಯಕರಾದ ಶ್ರೀನಿವಾಸ ಉಡುಪ, ಪೂರ್ಣಿಮಾ, ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಡೇವಿಡ್ ಪ್ರತಿಭಾಂಜಲಿ, ವಿದ್ಯಾಶಂಕರ್, ಎಂ.ಎನ್.ಶ್ರೀಧರ್, ಇಂದಿರಾ ರಾಮಯ್ಯ, ಟಿ.ಎನ್.ಶ್ರೀಧರ್, ಪಿ.ಎಂ.ಶಿವಶಂಕರ್ ಮುಂತಾದ ಕಲಾವಿದರು ಕೆ.ಎಸ್.ನರಸಿಂಹಸ್ವಾಮಿ ಅವರ ಗೀತಗಾಯನ ಹಾಗೂ ನೃತ್ಯ ಕಾರ್ಯಕ್ರಮ ನಡೆಸಲಿದ್ದಾರೆ ಎಂದು ನುಡಿದರು.

ಸಮ್ಮೇಳನದ ಪ್ರಾರಂಭಕ್ಕೆ ೮೭ ಕಲಾವಿದರು ನಾಡಗೀತೆಯನ್ನು ಹಾಡಲಿದ್ದು, ಅದರ ಪೂರ್ವಭಾವಿ ಸಿದ್ದತಾ ಗಾಯನವನ್ನು ಕಾರ್ಯಕ್ರಮದಲ್ಲಿ ಮಾಡಲಾಗುವುದು. ಸಂಪೂರ್ಣ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.

ಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ನಗರಸಭಾ ಸದಸ್ಯ ಶ್ರೀಧರ್, ಡೇವಿಡ್ ಪ್ರತಿಭಾಂಜಲಿ ಇದ್ದರು.

ಡಿ.14 ರಂದು ಹಿರಿಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ

ಪಾಂಡವಪುರ:

ಗುರುವಂದನಾ ಕಾರ್ಯಕ್ರಮ ನಿಮಿತ್ತ ತಾಲೂಕಿನ ಮೇಲುಕೋಟೆ ಜನಪದ ಸೇವಾ ಟ್ರಸ್ಟ್ ಹಾಗೂ ಶ್ರೀಲಕ್ಷ್ಮಿ ಹಯಗ್ರೀವ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಡಿ.14ರಂದು ಮಧ್ಯಾಹ್ನ ಕಾಲೇಜಿನ ಆವರಣದಲ್ಲಿ ಪೂರ್ವಭಾವಿ ಸಭೆ ಆಯೋಜಿಸಿದ್ದಾರೆ. ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮೇಲುಕೋಟೆಯಲ್ಲಿ ಸ್ಥಾಪಿತವಾದ ಜನಪದ ಸೇವಾ ಟ್ರಸ್ಟ್ ಪದವಿ ಪೂರ್ವ ಕಾಲೇಜು ಮುಂದೆ ಶ್ರೀಲಕ್ಷ್ಮಿ ಹಯಗ್ರೀವ ಪದವಿ ಪೂರ್ವ ಕಾಲೇಜು ಆಗಿ ಹೊಸ ಹೆಸರಿನೊಂದಿಗೆ ಮೇಲುಕೋಟೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಸಾವಿರಾರು ವಿದ್ಯಾರ್ಥಿಗಳು ಇಂದು ತಮ್ಮ ಜೀವನ ರೂಪಿಸಿಕೊಳ್ಳಲು ಕಾರಣವಾಗಿದೆ.

ಅಲ್ಲದೇ, ನಮ್ಮೆಲ್ಲರ ಭವಿಷ್ಯ ರೂಪಿಸಿದೆ. ಈ ಕಾಲೇಜು ಹಾಗೂ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಿದ ಎಲ್ಲಾ ಗುರುಗಳನ್ನು ನೆನೆಯುತ್ತಾ ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಎಲ್ಲಾ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು ಸೇರಿ ಒಂದೇ ವೇದಿಕೆಯಲ್ಲಿ ಜನವರಿ 2025ರ ಮಾಹೆಯಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ಇಚ್ಚಿಸಿದ್ದು, ಡಿ.14 ರಂದು ಪೂರ್ವಭಾವಿ ಸಭೆ ನಡೆಸಲು ಹಿರಿಯ ವಿದ್ಯಾರ್ಥಿಗಳು

ಕಾಲೇಜಿನ ಎಲ್ಲಾ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು (1984ರಿಂದ 2023-24ರ ತನಕ) ಸ್ವಯಂ ಪ್ರೇರಿತರಾಗಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಬಗ್ಗೆ ತಮ್ಮ ಸೂಕ್ತ ಸಲಹೆ ಮಾರ್ಗದರ್ಶನ ಅಭಿಪ್ರಾಯ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೋರಿದ್ದಾರೆ.ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿಂದು ವಿಶೇಷ ಪೂಜೆ

ಮದ್ದೂರು:

ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಡಿ.13ರಂದು, ಹನುಮದ್ ವ್ರತದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ನಡೆಯಲಿದೆ. ಮುಂಜಾನೆ ಶ್ರೀ ಆಂಜನೇಯ ಸ್ವಾಮಿ ಮೂಲ ವಿಗ್ರಹಕ್ಕೆ ಮಧು, ಪಂಚಾಮೃತ ಅಭಿಷೇಕದೊಂದಿಗೆ ಪುಷ್ಪಾಲಂಕಾರ ಸೇವೆ ಜರುಗಲಿದೆ. 11 ಗಂಟೆ ಸುಮಾರಿಗೆ ಶ್ರೀರಾಮ ಸೀತಾ, ಲಕ್ಷ್ಮಣ ಸಮೇತವಾಗಿ ಮುಖ್ಯಪ್ರಾಣ ದೇವರನ್ನು ಪ್ರತಿಷ್ಠಾಪನೆ ಮಾಡಿ ಜರುಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ದೇಗುಲದ ಪ್ರಧಾನ ಅರ್ಚಕ ಪ್ರದೀಪ ಆಚಾರ್ಯ ಮನವಿ ಮಾಡಿದ್ದಾರೆ.