ಟ್ರ್ಯಾಕ್ಟರ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ:೩೦ಕ್ಕೂ ಹೆಚ್ಚು ಜನರಿಗೆ ಗಾಯ

| Published : Feb 03 2024, 01:50 AM IST

ಟ್ರ್ಯಾಕ್ಟರ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ:೩೦ಕ್ಕೂ ಹೆಚ್ಚು ಜನರಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಫೆ.೨ರ ಶುಕ್ರವಾರ ಬೆಳಗಿನ ಜಾವ ೫ರ ಸಮಯದಲ್ಲಿ ಅತಿವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮುಂದೆ ಇಟ್ಟಿಗೆ ಏರಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಡಿವೈಡರ್ ಮೇಲೆ ಹತ್ತಿ ಬಸ್‌ ಕಂದಕಕ್ಕೆ ಉರುಳಿದೆ. ಇದರಿಂದ ಸುಮಾರು ೩೦ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಮದುವೆ ಸಮಾರಂಭವನ್ನು ಮುಗಿಸಿಕೊಂಡು ವಾಪಾಸ್ ಹೋಗುವ ಸಂದರ್ಭದಲ್ಲಿ ಒಪ್ಪಂದಪಡೆದಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ರಸ್ತೆಬದಿಯ ಕಂದಕಕ್ಕೆ ಬಿದ್ದ ಪರಿಣಾಮ ಬಸ್‌ನಲ್ಲಿದ್ದ ಸುಮಾರು ೩೦ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ತಾಲ್ಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಹಳ್ಳಿ ಗೇಟ್‌ಬಳಿ ಈ ಅಪಘಾತ ಸಂಭವಿಸಿದ್ದು, ಮದುವೆ ಒಪ್ಪಂದ ಪಡೆದ ಕೆಎಸ್‌ಆರ್‌ಟಿಸಿ ಬಸ್ ಮದುವೆಗೆ ಆಗಮಿಸಿದ್ದ ಜನರನ್ನು ಕರೆದುಕೊಂಡು ಕಲ್ಬುರ್ಗಿಯಿಂದ ಗುರುವಾರ ಸಂಜೆ ಹೊರಟು ಬಳ್ಳಾರಿ, ಚಳ್ಳಕೆರೆ, ತುಮಕೂರು ಮೂಲಕ ಮಾಗಡಿಗೆ ತಲುಪಬೇಕಿದ್ದು, ಫೆ.೨ರ ಶುಕ್ರವಾರ ಬೆಳಗಿನ ಜಾವ ೫ರ ಸಮಯದಲ್ಲಿ ಅತಿವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮುಂದೆ ಇಟ್ಟಿಗೆ ಏರಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಪಡಿಸಿ ಡಿವೈಡರ್ ಮೇಲೆ ಹತ್ತಿ ಕಂದಕಕ್ಕೆ ಉರುಳಿದೆ. ಚಾಲಕ ಅಜಾಗರೂಕತೆಯೇ ಅಪಘಾತ ಕಾರಣ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಇಟ್ಟಿಗೆಗಳು ರಸ್ತೆಯ ತುಂಬು ಚಲ್ಲಾಪಿಲ್ಲಿಯಾಗಿ ಬಿದ್ದಿವೆ.

ಅಪಘಾತದಲ್ಲಿ ಮಾಗಡಿ ಮೂಲಕ ಲೋಕೇಶ್(೩೧), ಭಾಗ್ಯಲಕ್ಷ್ಮೀ (೩೪) ಜಯರಾಮ್(೪೮), ಪಾಪಣ್ಣ (೬೦), ಸಕ್ರಿಬಾಯಿ(೭೦), ತಾಳಕೇರಪ್ಪ(೬೮), ಪುಟ್ಟರಂಗನಾಯ್ಕ(೬೧), ಶಂಕರ್(೩೫), ಕೃಷ್ಣಬಾಯಿ(೩೫), ಶರಣಸಂಗಪ್ಪ(೩೮), ಲಕ್ಷ್ಮೀಬಾಯಿ(೩೮), ಸರೋಜಬಾಯಿ (೪೭) ಸೇರಿದಂತೆ ಒಟ್ಟು ೩೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುದ್ದಿ ತಿಳಿದಕೂಡಲೇ ತಳಕು ಪೊಲೀಸರು ಸ್ಥಳಕ್ಕೆಧಾವಿಸಿ ಹೈವೆ ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಸ್‌ ಚಾಲಕ ಬಸವರಾಜ ಜಿ.ಕಂಬಾರ(೩೫) ಗಾಯಾಳುವಾಗಿದ್ದು, ಈತನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಪಿಎಸ್‌ಐ ಲೋಕೇಶ್, ಗಾದಿಲಿಂಗ ಹಾಗೂ ಸಿಬ್ಬಂದಿ ವರ್ಗ ಸ್ಥಳದಲ್ಲಿದ್ದು, ಅಪಘಾತಕ್ಕೀಡಾದವರಿಗೆ ಚಿಕಿತ್ಸೆ ಕೊಡಿಸಲು ಶ್ರಮಿಸಿದರು. ತಳಕು ಠಾಣಾಧಿಕಾರಿ ಎನ್.ಕೆ.ಅಜ್ಜಯ್ಯ ಪ್ರಕರಣ ದಾಖಲಿಸಿದ್ದಾರೆ.