ನಿಗದಿತ ವೇತನ ನೀಡದಕ್ಕೆ ಆಕ್ರೋಶ: ಕೆಎಸ್‌ಆರ್‌ಟಿಸಿ ಬಸ್ ಚಾಲಕರಿಂದ ಡಿಪೋ ಎದುರು ಪ್ರತಿಭಟನೆ

| Published : Sep 15 2024, 01:55 AM IST

ನಿಗದಿತ ವೇತನ ನೀಡದಕ್ಕೆ ಆಕ್ರೋಶ: ಕೆಎಸ್‌ಆರ್‌ಟಿಸಿ ಬಸ್ ಚಾಲಕರಿಂದ ಡಿಪೋ ಎದುರು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಗದಿತ ವೇತನ ಪಾವತಿಸುತ್ತಿಲ್ಲ ಎಂದು ಆರೋಪಿಸಿ ಬಸ್‌ ಚಾಲಕರು ಪ್ರತಿಭಟನೆ ನಡೆಸಿದರು. ನಗರದ ಡಿಪೋ ಮುಂಭಾಗ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರ ಪೈಕಿ 35 ಮಂದಿಯನ್ನು ಗುತ್ತಿಗೆಯ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಖಾಸಗಿ ಸಂಸ್ಥೆ ಒಪ್ಪಂದದ ಪ್ರಕಾರ ನಿಗದಿತ ವೇತನವನ್ನು ಪಾವತಿಸುತ್ತಿಲ್ಲ ಎಂದು ಆರೋಪಿಸಿ ಬಸ್ ಚಾಲಕರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಡಿಪೋ ಮುಂಭಾಗ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಚಾಲಕರು ಗುತ್ತಿಗೆ ಪಡೆದ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಡಿಕೇರಿ ಡಿಪೋದಲ್ಲಿ ಕೆಲವು ಮಂದಿ ಚಾಲಕರನ್ನು ಎರಡು ಪ್ರತ್ಯೇಕ ಖಾಸಗಿ ಸಂಸ್ಥೆಗಳು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದು, ಈ ಪೈಕಿ ಸಂಸ್ಥೆಯೊಂದರ ಗುತ್ತಿಗೆ ಅವಧಿ ಮುಗಿದಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಗುತ್ತಿಗೆ ವಹಿಸಿಕೊಂಡ ಸಂಸ್ಥೆ ಕರಾರಿನ ಪ್ರಕಾರ ತಿಂಗಳಿಗೆ 25 ಸಾವಿರ ರು. ವೇತನ, 3 ಸಾವಿರ ರು. ಪಿ.ಎಫ್. ಹಣ ಸಹಿತ ಉಳಿಕೆ 23 ಸಾವಿರ ವೇತನವನ್ನು 10ನೇ ತಾರೀಖಿನ ಒಳಗೆ ಪಾವತಿ ಮಾಡಬೇಕಿತ್ತು. ಆದರೆ ಶುಕ್ರವಾರ ದಿನ ಕೇವಲ 13 ಸಾವಿರ ರು. ಪಾವತಿ ಮಾಡಿದೆ. ವಿಚಾರಿಸಿದಲ್ಲಿ ಉಡಾಫೆಯಿಂದ ಉತ್ತರಿಸಲಾಗುತ್ತಿದೆ. ತಕ್ಷಣವೇ ಗುತ್ತಿಗೆ ಪಡೆದ ಸಂಸ್ಥೆಯ ಪ್ರಮುಖರು ಸ್ಥಳಕ್ಕಾಗಮಿಸುವಂತೆ ಪಟ್ಟು ಹಿಡಿದು ಚಾಲಕರು ತೀವ್ರ ಆಕ್ರೋಶ ಹೊರಗೆಡವಿದರು.

ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪುತ್ತೂರು ವಿಭಾಗದ ಮಡಿಕೇರಿ ವಿಭಾಗೀಯ ತಾಂತ್ರಿಕ ಅಧಿಕಾರಿ ನಂದ ಕುಮಾರ್, ಚಾಲಕರ ಸಮಸ್ಯೆ ಆಲಿಸಿದರು. ಚಾಲಕರನ್ನು ಗುತ್ತಿಗೆ ಪಡೆದಿದ್ದ ಸಂಸ್ಥೆಯ ಗುತ್ತಿಗೆ ಅವಧಿ ಮುಗಿದ ಕಾರಣ ಬೇರೊಂದು ಸಂಸ್ಥೆ ಇದೀಗ ಚಾಲಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿದೆ. ಇದು ಸಮಸ್ಯೆಗೆ ಕಾರಣವಾಗಿದೆ. ಈ ಕುರಿತು ನಿಗಮದ ಉನ್ನತ ಅಧಿಕಾರಿಗಳು, ಡಿಪೋ ಮ್ಯಾನೇಜರ್ ಹಾಗೂ ಗುತ್ತಿಗೆದಾರ ಸಂಸ್ಥೆಯೊಂದಿಗೆ ಚರ್ಚೆ ನಡೆಸಿ ವೇತನ ವಿಳಂಬ, ಹಾಜರಾತಿ ಸೇರಿದಂತೆ ಮತ್ತಿತ್ತರ ಸಮಸ್ಯೆಗಳ ಪರಿಹಾರಕ್ಕೆ ತುರ್ತು ಕ್ರಮವಹಿಸುವುದಾಗಿ ಭರವಸೆ ನೀಡಿದರು. ರಾಜ್ಯ ರಸ್ತೆ ಸಾರಿಗೆ ನಿಗಮ ಸಾರ್ವಜನಿಕರ ಸೇವೆಗೆ ನಿಯೋಜಿತವಾಗಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಚಾಲಕರು ಪ್ರತಿಭಟನೆ ಕೈಬಿಟ್ಟರು.

ಈ ಸಂದರ್ಭ ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕದ ಸಹಾಯಕ ನಿಯಂತ್ರಣ ಮೇಲ್ವಿಚಾರಣೆ ಅಧಿಕಾರಿ ಈರಸಪ್ಪ, ನಗರ ಠಾಣಾಧಿಕಾರಿ ಲೋಕೇಶ್ ಹಾಜರಿದ್ದರು.