ಸಾರಾಂಶ
ಮಂಗಳೂರಿನಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಅವರನ್ನು ಭೇಟಿ ಮಾಡಿ ಸಾರಿಗೆ ಸಚಿವರು ಹಾಗೂ ಕೇಂದ್ರ ಕಚೇರಿಯ ಅಧಿಕಾರಿಗಳ ನಡುವಿನ ಮಾತುಕತೆಯ ಪ್ರಸ್ತಾಪವನ್ನು ಕಾಸರಗೋಡಿನ ವಿಕಾಸ ಟ್ರಸ್ಟ್ ಇದರ ಅಧ್ಯಕ್ಷ ರವಿನಾರಾಯಣ ಗುಣಾಜೆ ಮಂಡಿಸಿದ್ದು, ಈ ಕುರಿತ ಬೇಡಿಕೆ ಈಡೇರುವ ಭರವಸೆ ದೊರೆತಿದೆ ಎಂದಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಕಾಸರಗೋಡು-ಮಂಗಳೂರು, ಕಾಸರಗೋಡು-ಬೆಂಗಳೂರು ನಡುವೆ ಶೀಘ್ರವೇ ಕೆಎಸ್‌ಆರ್‌ಟಿಸಿ ಬಸ್ ಸಂಚಾರದ ಬೇಡಿಕೆ ಈಡೇರಿಸಲು ಮಂಗಳೂರಿನ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಮ್ಮತಿ ವ್ಯಕ್ತಪಡಿಸಿದ್ದಾರೆ.ಸೋಮವಾರ ಮಂಗಳೂರಿನಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಅವರನ್ನು ಭೇಟಿ ಮಾಡಿ ಸಾರಿಗೆ ಸಚಿವರು ಹಾಗೂ ಕೇಂದ್ರ ಕಚೇರಿಯ ಅಧಿಕಾರಿಗಳ ನಡುವಿನ ಮಾತುಕತೆಯ ಪ್ರಸ್ತಾಪವನ್ನು ಕಾಸರಗೋಡಿನ ವಿಕಾಸ ಟ್ರಸ್ಟ್ ಇದರ ಅಧ್ಯಕ್ಷ ರವಿನಾರಾಯಣ ಗುಣಾಜೆ ಮಂಡಿಸಿದ್ದು, ಈ ಕುರಿತ ಬೇಡಿಕೆ ಈಡೇರುವ ಭರವಸೆ ದೊರೆತಿದೆ ಎಂದಿದ್ದಾರೆ.
ಇನ್ನೆರಡು ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ಕನಿಷ್ಠ 5 ಅಶ್ವಮೇಧ ಬಸ್ಸುಗಳನ್ನು ಮಂಗಳೂರು ವಿಭಾಗಕ್ಕೆ (ಈಗ ಕಾಸರಗೋಡು ಮಂಗಳೂರು ನಡುವೆ ಓಡಾಡುತ್ತಿರುವ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಬದಲಿಯಾಗಿ) ಒದಗಿಸುವಂತೆ ಪತ್ರ ಬರೆಯಲಾಗುವುದು. ಈ ಕುರಿತು ಕೆಎಸ್‌ಆರ್‌ಟಿಸಿ ಎಂಡಿ ಅವರನ್ನು ವಿಕಾಸ ಟ್ರಸ್ಟ್ ವತಿಯಿಂದ ಭೇಟಿಯಾಗಿ ಇದಕ್ಕೆ ಶೀಘ್ರ ಅನುಮತಿ ನೀಡುವಂತೆ ಒತ್ತಾಯಿಸಲಾಗುವುದು.ಕಾಸರಗೋಡು-ಮಂಗಳೂರು ನಡುವೆ ನಿತ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಕೇರಳ ಮತ್ತು ಕರ್ನಾಟಕ ಸಾರಿಗೆ ಸಂಸ್ಥೆಗಳ ಜಂಟಿ ಮಾಸಿಕ ಬಸ್ ಪಾಸ್ ಆರಂಭಿಸುವ ಕುರಿತು ಕೇರಳ ಸಾರಿಗೆ ಸಂಸ್ಥೆ ಜತೆ ಮಾತುಕತೆ ಪ್ರಗತಿಯಲ್ಲಿದೆ.
ಕೋವಿಡ್ ನಂತರ ಸ್ಥಗಿತವಾಗಿದ್ದ ಕಾಸರಗೋಡು-ಬೆಂಗಳೂರು (ಬದಿಯಡ್ಕ, ಪೆರ್ಲ, ವಿಟ್ಲ, ಪುತ್ತೂರು ಮಾರ್ಗವಾಗಿ) ರಾಜಹಂಸ ಬಸ್ ಸಂಚಾರವನ್ನು ಒಂದು ವಾರದೊಳಗೆ ಪುನರಾರಂಭಗೊಳಿಸುವ ವ್ಯವಸ್ಥೆ ಆಗಲಿದೆ.ಮುಂದಿನ ವರ್ಷ ನಡೆಯಲಿರುವ ಮಧೂರು ಬ್ರಹ್ಮಕಲಶ ಸಂದರ್ಭದಲ್ಲಿ ಮಂಗಳೂರು-ಕಾಸರಗೋಡು ಬಸ್ಸುಗಳನ್ನು ಮಧೂರು ದೇವಸ್ಥಾನದವರೆಗೆ ವಿಸ್ತರಿಸಿದಲ್ಲಿ ಭಕ್ತಾದಿಗಳಿಗೂ ಅನುಕೂಲ, ಸಂಸ್ಥೆಯ ಆದಾಯ ವೃದ್ಧಿಗೂ ಅನುಕೂಲ ಎಂಬ ವಿಷಯದಲ್ಲೂ ವಿಭಾಗೀಯ ನಿಯಂತ್ರಣಾಧಿಕಾರಿಗಳ ಸ್ಪಂದಿಸಿದ್ದಾರೆ ಎಂದರು.