ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾದ ಘಟನೆ ತಾಲೂಕಿನ ಹೊಸರಿತ್ತಿಯಿಂದ ನೆಗಳೂರು ಕಡೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಗುರುವಾರ ಸಂಭವಿಸಿದೆ.
ಹಾವೇರಿಯಿಂದ ಕೋಡಬಾಳ ಮಾರ್ಗವಾಗಿ ಶಿರಹಟ್ಟಿಗೆ ಹೋಗುವ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನೆಗಳೂರು ಗ್ರಾಮದ ಸಮೀಪ ರಸ್ತೆಯಲ್ಲಿ ಅಡ್ಡ ಬಂದ ಎಮ್ಮೆಗಳನ್ನು ತಪ್ಪಿಸಲು ಹೋಗಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಚಾಲಕ ಹೇಳುತ್ತಾನೆ. ಹೊಸರಿತ್ತಿಯಿಂದ ನೆಗಳೂರ ಕಡೆಗೆ ಹೋಗುವಲ್ಲಿ ರಸ್ತೆ ಗುಂಡಿ ಬಿದ್ದ ಕಾರಣ ಮಣ್ಣನ್ನು ಮೇಲ್ಭಾಗದಲ್ಲಿ ಹಾಕಿಸಲಾಗಿದೆ. ಆದರೆ ಆ ಮಣ್ಣು ಸರಿಯಾಗಿ ಗಟ್ಟಿಯಾಗದ ಪರಿಣಾಮ ಚಾಲಕ ಬಸ್ಸನ್ನು ರಸ್ತೆ ಬದಿಗೆ ತೆಗೆದುಕೊಂಡಾಗ ಮಣ್ಣು ಏಕಾಏಕಿ ಕುಸಿದಿದ್ದರಿಂದ ಬಸ್ ಚಾಲಕನ ನಿಯಂತ್ರಣಕ್ಕೆ ಸಿಗದ ಪರಿಣಾಮ ಪಲ್ಟಿಯಾಗಿದೆ.ಬಸ್‌ನಲ್ಲಿದ್ದ ಚಾಲಕ, ನಿರ್ವಾಹಕ ಸೇರಿದಂತೆ ಒಂಭತ್ತು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳು ಪ್ರಯಾಣಿಕರು ಸಮೀಪದ ನೆಗಳೂರು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಗುತ್ತಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಊರುಗಳಿಗೆ ತೆರಳಿದ್ದಾರೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಕೋಟಾ ಬಸ್ ಸಂಚಾರ: ತಾಲೂಕಿನ ಗಡಿ ಭಾಗದಲ್ಲಿರುವ ಕೊಡಬಾಳ, ಮರಡೂರು, ಗೂಡೂರು, ಗುಡಿಸಲಕೊಪ್ಪ, ಹಾಲಗಿ, ಮರೋಳ ಹೀಗೆ ಅನೇಕ ಗ್ರಾಮಗಳ ಜನರು ಎರಡ್ಮೂರು ದಶಕಗಳಿಂದ ಕೆಎಸ್‌ಆರ್‌ಟಿಸಿ ಡಕೋಟಾ ಬಸ್‌ಗಳಲ್ಲಿಯೇ ಸಂಚರಿಸುತ್ತಿದ್ದಾರೆ. ಒಂದು ಟ್ರಿಪ್‌ಗೆ ಕನಿಷ್ಠ 100ರಿಂದ 120 ಪ್ರಯಾಣಿಕರು ಇರುತ್ತಾರೆ. ಗಡಿಭಾಗದ ಹಳ್ಳಿಗಳಿಗೆ ಜನರು ಜೋತುಬಿದ್ದು ಹೋಗುತ್ತಾರೆ. ಅವಧಿ ಮೀರಿ ಹಾಳಾದ ಬಸ್ಸುಗಳನ್ನೇ ಪುನಃ ಹಳ್ಳಿ ರಸ್ತೆಗೆ ಬಿಡುವುದರಿಂದ ಬಸ್ಸು ಯಾವಾಗ ಎಲ್ಲಿ ಕೆಟ್ಟು ನಿಲ್ಲುತ್ತೋ, ಯಾವಾಗ ಪಂಕ್ಚರ್ ಆಗುತ್ತೋ ಎಂಬುದು ಗೊತ್ತಾಗಲ್ಲ. ಈ ಬಗ್ಗೆ ಸಂಬಂಧಿಸಿದ ಸಾರಿಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗುತ್ತಿಲ್ಲ ಎಂದು ಈ ಭಾಗದ ಸಾರ್ವಜನಿಕರು ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಾವೇರಿ ತಾಲೂಕಿನ ಗಡಿಭಾಗದ ಹಳ್ಳಿಗಳಿಗೆ ಪ್ರತಿದಿನ ಬೆಳಗ್ಗೆ ಎರಡು ಹಾಗೂ ಸಂಜೆ ಎರಡು ಬಸ್ಸುಗಳು ಮಾತ್ರ ಸಂಚರಿಸುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಭಾಗಕ್ಕೆ ಗುಜರಿ ಬಸ್‌ಗಳನ್ನು ಬಿಡಲೇಬಾರದು. ಸುಸಜ್ಜಿತ ಬಸ್‌ಗಳು ಸಂಚರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಜತೆಗೆ ಸಂಬಂಧಿಸಿದ ಶಾಸಕರು ಹಾಗೂ ಅಧಿಕಾರಿಗಳು ಗಡಿಭಾಗದ ಹಳ್ಳಿಗಳೆಂದು ನಿರ್ಲಕ್ಷ್ಯ ವಹಿಸದೆ, ಹಾಳಾದ ರಸ್ತೆಗಳನ್ನು ಸುಸಜ್ಜಿತ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಲೋಕೇಶ ಕುಬಸದ ಒತ್ತಾಯಿದರು. ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಚಾಲಕ ಬಸ್ಸನ್ನು ಎಡಕ್ಕೆ ತಿರುವಿಸಿಕೊಂಡ ಪರಿಣಾಮ ಕೋಡಬಾಳ ಬಸ್ ಪಲ್ಟಿಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿ, ತನಿಖೆ ಮಾಡಿಸಲಾಗುತ್ತದೆ. ತಪ್ಪಿತಸ್ಥರ ವಿರುದ್ದ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಹಾವೇರಿ ವಿಭಾಗೀಯ ಸಂಚಾರಿ ಸಾರಿಗೆ ಅಧಿಕಾರಿ ಅಶೋಕ ಪಾಟೀಲ ಹೇಳಿದರು.