ಉಜ್ಜಯಿನಿ ಮಹಾಪೀಠಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ

| Published : Aug 28 2024, 12:48 AM IST

ಸಾರಾಂಶ

ಉಜ್ಜಯನಿ ಮಹಾಪೀಠದ ಭಕ್ತರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಶಾಸಕರ ಮೂಲಕ ಹಲವಾರು ಬಾರಿ ರಾಜ್ಯ ಸಾರಿಗೆ ನಿಗಮಕ್ಕೆ ಮನವಿ ಮಾಡಲಾಗಿತ್ತು

ಭದ್ರಾವತಿ: ಬಹು ವರ್ಷಗಳ ಬೇಡಿಕೆಯಂತೆ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಉಜ್ಜನಿ ಗ್ರಾಮದ ಉಜ್ಜಯಿನಿ ಮಹಾಪೀಠಕ್ಕೆ ಇಲ್ಲಿನ ಕರ್ನಾಟಕ ರಸ್ತೆ ಸಾರಿಗೆ ಘಟಕದಿಂದ ನೂತನ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಂಗಳವಾರ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಯಿತು.

ಉಜ್ಜಯನಿ ಮಹಾಪೀಠದ ಭಕ್ತರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಶಾಸಕರ ಮೂಲಕ ಹಲವಾರು ಬಾರಿ ರಾಜ್ಯ ಸಾರಿಗೆ ನಿಗಮಕ್ಕೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ನಗರದಿಂದ ಬೆಳಗ್ಗೆ ೭ ಗಂಟೆ ಬಸ್ ಹೊರಡಲಿದ್ದು, ಚನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ ಮಾರ್ಗವಾಗಿ ಉಜ್ಜಯಿನಿ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ ೨ ಗಂಟೆಗೆ ಪುನಃ ಭದ್ರಾವತಿಗೆ ಹಿಂದಿರುಗಲಿದೆ.

ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗೂ ಸಾರಿಗೆ ನಿಗಮಕ್ಕೆ ಸದಾ ಕಾಲ ಉಜ್ಜಯಿನಿ ಮಹಾಪೀಠದ ಜಗದ್ಗುರುಗಳ ಆಶೀರ್ವಾದವಿರಲಿ ಹಾಗೂ ಭಕ್ತರು ಇದರ ಸದುಪಯೋಗಪಡೆದುಕೊಳ್ಳಬೇಕೆಂದರು. ನಗರಸಭೆ ನೂತನ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯ ಬಿ.ಕೆ ಮೋಹನ್, ಸುದೀಪ್ ಕುಮಾರ್, ಸೂಡಾ ಸದಸ್ಯ ಎಚ್. ರವಿಕುಮಾರ್, ಮುಖಂಡರಾದ ಸಿದ್ದಲಿಂಗಯ್ಯ, ಬಿ.ಕೆ ಜಗನ್ನಾಥ್, ಲಕ್ಷ್ಮಣ್(ಆಟೋ), ಶ್ರೀನಿವಾಸ್ ಹಾಗು ಕರ್ನಾಟಕ ರಸ್ತೆ ಸಾರಿಗೆ ಘಟಕದ ಅಧಿಕಾರಿಗಳು, ಸಿಬ್ಬಂದಿ ಇದ್ದರು.