ಸಾರಾಂಶ
ಗಿರೀಶ್ ಗರಗ
ಬೆಂಗಳೂರು : ಬಸ್ ಪ್ರಯಾಣ ದರ ಹೆಚ್ಚಳ ಮಾಡುವಂತೆ ಸಾರಿಗೆ ನಿಗಮಗಳ ಆಡಳಿತ ಮಂಡಳಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿಗಳು ಸಭೆ ನಡೆಸಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಶಕ್ತಿ ಯೋಜನೆ ಜಾರಿ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಪ್ರಯಾಣಿಕರ ಮತ್ತು ಆದಾಯದಲ್ಲಿ ಹೆಚ್ಚಳವಾಗಿದೆ. ಆದರೂ, ಸಿಬ್ಬಂದಿ ವೇತನ, ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ನಿಗಮಗಳು ಆರ್ಥಿಕವಾಗಿ ಸದೃಢಗೊಳ್ಳಲು ಪರದಾಡುತ್ತಿವೆ. ಹೀಗಾಗಿ ಶೇ.15ರಿಂದ 20ರಷ್ಟು ದರ ಹೆಚ್ಚಳ ಮಾಡಬೇಕು ಎಂದು ಸರ್ಕಾರಕ್ಕೆ ಸಲ್ಲಿಸುವ ಪ್ರಸ್ತಾವನೆಯಲ್ಲಿ ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.ಡೀಸೆಲ್, ಬಿಡಿ ಭಾಗಗಳ ದರ ಹೆಚ್ಚಳ, ಸಿಬ್ಬಂದಿ ವೇತನ ಹೆಚ್ಚಳ ಸೇರಿದಂತೆ ವರ್ಷದಿಂದ ವರ್ಷಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಖರ್ಚು ಹೆಚ್ಚುತ್ತಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾದ ಪರಿಣಾಮ ಕಳೆದ 5 ವರ್ಷಗಳಲ್ಲಿ ನಿಗಮಗಳ ಸಾಲ ಮತ್ತು ಹೊಣೆಗಾರಿಗೆ 4 ಸಾವಿರ ಕೋಟಿ ರು.ಗೂ ಹೆಚ್ಚಿಗೆಯಾಗಿದೆ. ಅದರ ಜತೆಗೆ ಪ್ರಯಾಣಿಕರ ಬೇಡಿಕೆಗನುಗುಣವಾಗಿ ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ.
ಅದಕ್ಕೆ ತಕ್ಕಂತೆ ನಿಗಮಗಳ ಆದಾಯದಲ್ಲಿ ಹೆಚ್ಚಳವಾಗಿಲ್ಲ. ಹೀಗಾಗಿಯೇ ಇದೀಗ ಬಸ್ ಪ್ರಯಾಣ ದರ ಹೆಚ್ಚಳ ಮಾಡುವಂತೆ ನಿಗಮಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಒಂದೊಂದೇ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿವೆ. ಕೆಲ ದಿನಗಳ ಹಿಂದಷ್ಟೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಕೆಎಸ್ಸಾರ್ಟಿಸಿ ಕೂಡ ಪ್ರಯಾಣ ದರ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿದೆ.
ಶೇ.15-20 ಪ್ರಯಾಣ ದರ ಹೆಚ್ಚಳಕ್ಕೆ ಕೋರಿಕೆ:
ಕಳೆದ ಎರಡ್ಮೂರು ವರ್ಷಗಳ ಹಿಂದೆಯೇ ಸಾರಿಗೆ ನಿಗಮಗಳು ಪ್ರಯಾಣ ದರ ಹೆಚ್ಚಳಕ್ಕೆ ಮನವಿ ಸಲ್ಲಿಸಿದ್ದವು. ಆದರೆ, ಸರ್ಕಾರ ಅದಕ್ಕೆ ಅನುಮತಿಸಿರಲಿಲ್ಲ. ಇದೀಗ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜು. 12ರಂದು ನಡೆದ ಕೆಎಸ್ಸಾರ್ಟಿಸಿ ಆಡಳಿತ ಮಂಡಳಿ ಸಭೆಯಲ್ಲಿ ನಿಗಮದ ಲಾಭ, ನಷ್ಟದ ಬಗ್ಗೆ ಚರ್ಚೆ ನಡೆಸಲಾಗಿದ್ದು, ಪ್ರಯಾಣ ದರ ಶೇ. 15ರಿಂದ 20ರಷ್ಟು ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ವಾಯುವ್ಯ ಸಾರಿಗೆ ನಿಗಮವೂ ಅಷ್ಟೇ ಪ್ರಮಾಣದ ದರ ಹೆಚ್ಚಳಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ.
ಸಿಎಂ ನಿರ್ಧಾರಕ್ಕೆ ಬಿಟ್ಟಿರುವ ನಿಗಮಗಳು:
ಸಾರಿಗೆ ನಿಗಮಗಳು ಸಲ್ಲಿಸಿರುವ ಪ್ರಯಾಣ ದರ ಹೆಚ್ಚಳದ ಪ್ರಸ್ತಾವನೆಗೆ ಅನುಮೋದಿಸುವ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಡಲಾಗಿದೆ. ನಿಗಮಗಳು ಸಲ್ಲಿಸಿರುವ ಪ್ರಸ್ತಾವನೆ ಕುರಿತು ಈಗಾಗಲೇ ಸಿಎಂ ಗಮನಕ್ಕೂ ತರಲಾಗಿದ್ದು, ಇನ್ನು 10ರಿಂದ 15 ದಿನಗಳೊಳಗೆ ಸಿಎಂ ಸಭೆ ನಡೆಸುವ ಸಾಧ್ಯತೆಗಳಿವೆ. ಒಂದು ವೇಳೆ ಸಿಎಂ ಸಭೆಯಲ್ಲಿ ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿಸದಿದ್ದರೆ, ನಿಗಮಗಳಿಗೆ ಹೆಚ್ಚುವರಿ ಸಹಾಯಧನ ನೀಡುವಂತೆ ಕೋರಲು ನಿಗಮಗಳ ಅಧ್ಯಕ್ಷರು ನಿರ್ಧರಿಸಿದ್ದಾರೆ.
ನಿಗಮಗಳು ವೇತನ ಹೆಚ್ಚಳ ಮಾಡಬೇಕು
2020ರ ವೇಳೆಗೆ ಡೀಸೆಲ್ ಬೆಲೆ ಪ್ರತಿ ಲೀ.ಗೆ 61 ರು. ಆಸುಪಾಸಿನಲ್ಲಿತ್ತು. ಇದೀಗ ಪ್ರತಿ ಲೀ.ಗೆ 89 ರು.ಗೆ ತಲುಪಿದೆ. ಅಂದರೆ ನಾಲ್ಕು ವರ್ಷಗಳಲ್ಲಿ 27 ರು. ಹೆಚ್ಚಳವಾಗುವಂತಾಗಿದೆ. ಅಲ್ಲದೆ, ಕಳೆದ ನಾಲ್ಕು ವರ್ಷಗಳ ಹಿಂದೆ ಸಿಬ್ಬಂದಿ ವೇತನ ಸೇರಿದಂತೆ ಇನ್ನಿತರ ಭತ್ಯೆ ಶೇ. 20ರಷ್ಟು ಹೆಚ್ಚಳವಾಗಿದೆ. ಜತೆಗೆ ಬಿಡಿ ಭಾಗಗಳ ದರ ಹೆಚ್ಚಳ, ಟೋಲ್ ಶುಲ್ಕಗಳ ಹೆಚ್ಚಳ ಹೀಗೆ ಬೆಲೆ ಏರಿಕೆಯು ನಿಗಮಗಳನ್ನು ಆರ್ಥಿಕವಾಗಿ ಕುಗ್ಗಿಸುತ್ತಿವೆ.
ಅದರ ನಡುವೆಯೇ ಕಳೆದ ತಿಂಗಳು ರಾಜ್ಯ ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದು, ನಿಗಮಗಳಿಗೆ ಪ್ರತಿದಿನ ತಲಾ 4ರಿಂದ 6 ಕೋಟಿ ರು.ಗೂ ಹೆಚ್ಚಿನ ವೆಚ್ಚವಾಗುತ್ತಿದೆ. ಅಲ್ಲದೆ, ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಿಗಮಗಳ ನೌಕರರ ವೇತನ ಹೆಚ್ಚಳ ಮಾಡಬೇಕಿದೆ. ಈ ವರ್ಷದ ಅಂತ್ಯ ಅಥವಾ 2025ರ ಆರಂಭದಲ್ಲಿ ಈ ಕುರಿತು ನಿರ್ಧಾರ ಪ್ರಕಟಿಸಬೇಕಿದೆ. ಒಂದು ವೇಳೆ ಸಿಬ್ಬಂದಿ ವೇತನ ಹೆಚ್ಚಾದರೆ ಎಲ್ಲ ನಾಲ್ಕೂ ನಿಗಮಗಳಿಗೆ ವಾರ್ಷಿಕ ತಲಾ 300ರಿಂದ 500 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ. ಹೀಗಾಗಿ ಸಾರಿಗೆ ನಿಗಮಗಳು ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಪ್ರಯಾಣ ದರ ಹೆಚ್ಚಳ ಮಾಡಬೇಕಾದ ಅನಿವಾರ್ಯತೆಯಿದೆ.----
ಶಕ್ತಿ ಯೋಜನೆ ಪರಿಹಾರ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ
ಸಾರಿಗೆ ನಿಗಮಗಳು ಶಕ್ತಿ ಯೋಜನೆ ಅಡಿ ಮಾಡಲಾಗಿರುವ ವೆಚ್ಚದ ಪರಿಹಾರ ಮೊತ್ತ ರಾಜ್ಯ ಸರ್ಕಾರದಿಂದ ಈವರೆಗೆ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. 2023ರ ಜೂ. 11ರಿಂದ 2024ರ ಜೂನ್ ಅಂತ್ಯದವರೆಗೆ ಸಾರಿಗೆ ನಿಗಮಗಳಿಗೆ 5,866.97 ಕೋಟಿ ರು. ಪರಿಹಾರ ನೀಡಬೇಕಿತ್ತು. ಆದರೆ, ಜೂನ್ ಅಂತ್ಯದವರೆಗೆ ರಾಜ್ಯ ಸರ್ಕಾರ 4,453.50 ಕೋಟಿ ರು. ನೀಡಿದ್ದು, ಇನ್ನೂ 1,413.47 ಕೋಟಿ ರು. ಪಾವತಿಸಬೇಕಿದೆ.-----