ಸವಣೂರು: ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ಒತ್ತಡ ಹಾಗೂ ಕರ್ತವ್ಯ ಬದಲಾವಣೆ ಬೇಡಿಕೆಗೆ ಸ್ಪಂದನೆ ಸಿಗದ ನೋವಿನ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ನೌಕರನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬಸ್ ನಿಲ್ದಾಣದ ಆವರಣದಲ್ಲಿರುವ ಇಂಧನ ಶಾಖೆಯ ಕೊಠಡಿಯಲ್ಲಿ ಭಾನುವಾರ ನಡೆದಿದೆ.ಸವಣೂರು ಪಟ್ಟಣದ ಗೌಡ್ರ ಓಣಿಯ ಮಹದೇವಪ್ಪ ಫಕೀರಪ್ಪ ಎರೇಸೀಮಿ (49) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಹಾವೇರಿ ವಿಭಾಗೀಯ ನೌಕರರ ಸಂಘದ ಉಪಾಧ್ಯಕ್ಷರಾಗಿ, ಸವಣೂರ ಬಸ್ ಘಟಕದ ಚಾಲಕ ಬೋಧಕರಾಗಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಅಧಿಕಾರಿಗಳ ಆದೇಶದ ಮೇಲೆ ನಿಗಮದ ಇಂಧನ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಅವರ ಪತ್ನಿ ಲಕ್ಷ್ಮೀ ಎರೇಸೀಮಿ ನೀಡಿದ ದೂರಿನ ಪ್ರಕಾರ, ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಹಣಕಾಸಿನ ಸಂಕಷ್ಟದಿಂದಾಗಿ ಮಹದೇವಪ್ಪ ಅವರು ಚಾಲಕರ ಹುದ್ದೆಗೆ ವರ್ಗಾವಣೆ ಮಾಡಬೇಕೆಂದು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಇಂಧನ ಶಾಖೆಯಲ್ಲಿಯೇ ಮುಂದುವರಿಯಬೇಕು ಎಂಬ ಉತ್ತರ ಸಿಕ್ಕ ಹಿನ್ನೆಲೆಯಲ್ಲಿ ಅವರು ಮನಸ್ಸಿನಲ್ಲಿ ಬೇಸರಗೊಂಡಿದ್ದರು ಎನ್ನಲಾಗಿದೆ.

ಫೆ.22ರ ಮುಂಜಾನೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆ ನಡುವಿನ ಅವಧಿಯಲ್ಲಿ ಶಹರದ ಬಸ್ ನಿಲ್ದಾಣದಲ್ಲಿರುವ ಇಂಧನ ಶಾಖೆಯ ಕೊಠಡಿಯಲ್ಲಿ ಕಬ್ಬಿಣದ ಆ್ಯಂಗ್ಲರ್‌ಗೆ ಪ್ಲಾಸ್ಟಿಕ್ ಹಗ್ಗ ಕಟ್ಟಿ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪತ್ನಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಲಾಗಿದೆ.


ಕುಟುಂಬದ ಮುಖ್ಯಸ್ಥರಾಗಿದ್ದ ಮಹದೇವಪ್ಪ ಅವರ ಅಗಲಿಕೆಯಿಂದ ಕುಟುಂಬದ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.