ಆ.5ರಿಂದ ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರ

| Published : Jul 29 2025, 01:00 AM IST

ಸಾರಾಂಶ

ಆಗಸ್ಟ್ 5 ರಿಂದ ಸಾರಿಗೆ ನೌಕರರು ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ, ಅನಿರ್ದಿಷ್ಠಾವಧಿ ಮುಷ್ಕರ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಎಚ್.ಎಸ್.ಮಂಜುನಾಥ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಕೆ.ಎಸ್.ಆರ್.ಟಿ.ಸಿ ನೌಕರರಿಗೆ ಬರಬೇಕಾದ 38 ತಿಂಗಳ ಹಿಂಬಾಕಿಯನ್ನು ಸರಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ನಿಯಮದಂತೆ 2024 ರ ಜನವರಿ 1 ರಂತೆ ವೇತನ ಪರಿಷ್ಕರಣೆ ಬಾಕಿ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು 2025 ರ ಆಗಸ್ಟ್ 5 ರಿಂದ ಸಾರಿಗೆ ನೌಕರರು ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ, ಅನಿರ್ದಿಷ್ಠಾವಧಿ ಮುಷ್ಕರ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಎಚ್.ಎಸ್.ಮಂಜುನಾಥ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020 ರ ಜನವರಿ 1 ರಂದು ಅಂದಿನ ಬಿಜೆಪಿ ಸರಕಾರ ಒಡಂಬಡಿಕೆಯಂತೆ ವೇತನ ಪರಿಷ್ಕರಣೆ ನಡೆಸಿ ಶೇ. 15ರಷ್ಟು ವೇತನ ಹೆಚ್ಚಳ ಮಾಡಲು ಒಪ್ಪಿಗೆ ನೀಡಿತ್ತು. ಆದರೆ ಆ ಸರಕಾರ ಇರುವವರೆಗೂ ಇದನ್ನು ಜಾರಿಗೆ ತರಲಿಲ್ಲ. ತದನಂತರ ಬಂದ ಕಾಂಗ್ರೆಸ್ ಸರಕಾರ ವೇತನ ಪರಿಷ್ಕರಣೆಯನ್ನು ಜಾರಿಗೆ ತಂದರು, ಅದುವರೆಗಿನ ಸುಮಾರು 38 ತಿಂಗಳ ಹಿಂಬಾಕಿ 1800 ಕೋಟಿ ರು.ಗಳನ್ನು ಇದುವರೆಗೂ ನೌಕರರಿಗೆ ನೀಡಿಲ್ಲ. ಸರಕಾರದ ಈ ಧೋರಣೆಯನ್ನು ಖಂಡಿಸಿ ಹಲವು ಬಾರಿ ಮನವಿ ನೀಡಿದರೂ ಇಲ್ಲ ಸಲ್ಲದ ಸಬೂಬು ಹೇಳಿ ಮುಂದೂಡುತ್ತಲೇ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರ, ಜುಲೈ 4 ರಂದು ನಡೆದ ತ್ರಿಪಕ್ಷಿಯ ಸಭೆಯಲ್ಲಿ ಹಿಂಬಾಕಿ ನೀಡಲು ಸಾಧ್ಯವಿಲ್ಲ ಎಂಬ ಮಾತು ಹೇಳಿದೆ. ಇದನ್ನು ನೌಕರರ ಒಕ್ಕೂಟ ಖಂಡಿಸುತ್ತದೆ. ಕರೋನ ಸಂದರ್ಭದಲ್ಲಿಯೂ ಹಗಲು, ಇರುಳು ಎನ್ನದೆ, ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಇದರಿಂದ ನಿಗಮಕ್ಕೂ ಒಳ್ಳೆಯ ಹೆಸರು ಬಂದಿದೆ. ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ ನಮ್ಮನ್ನು ಮಾತ್ರ ಮಲತಾಯಿ ಮಕ್ಕಳಂತೆ ನೋಡುತ್ತಿದ್ದಾರೆ ಎಂದು ಆರೋಪಿಸಿದರು.ತ್ರಿಪಕ್ಷಿಯ ಒಡಂಬಡಿಕೆಯಂತೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕೆ.ಎಸ್.ಆರ್.ಟಿ.ಸಿ. ನೌಕರರ ವೇತನ ಪರಿಷ್ಕರಣೆಯಾಗಬೇಕು. ಇದರ ಪ್ರಕಾರ 1-1-2024ಕ್ಕೆ ವೇತನ ಪರಿಷ್ಕರಣೆಯಾಗಬೇಕಿತ್ತು. ಕಳೆದ 18 ತಿಂಗಳಿನಿಂದ ಈಗ, ಆಗ, ಸಂಕ್ರಾತಿ ಕಳೆದು, ಯುಗಾದಿ ಕಳೆದು ಎಂದು ಮುಂದೂಡುತ್ತಲೇ ಬಂದಿದ್ದಾರೆ. ಸರಕಾರದ ಈ ಅಸಹಕಾರದ ನಡುವೆಯೂ ನಾವು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಎಲ್ಲಾ ಕೊರತೆಗಳ ನಡುವೆಯೂ ಯಶಸ್ವಿಗೊಳಿಸಿದ್ದೇವೆ. 500 ಕೋಟಿ ಮಹಿಳೆಯರು ಓಡಾಡಿದ್ದಾರೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಸರಕಾರ, ಕೆ.ಎಸ್.ಆರ್.ಟಿ.ಸಿ ನೌಕರರ ಮನವಿಗಳನ್ನು ಕಡೆಗಣಿಸಿದೆ ಎಂದರು.ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಎರಡು ಸಭೆಗಳಲ್ಲಿಯೂ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಸಿದ್ದರಾಮಯ್ಯ ಅವರು, 2025ರ ಜುಲೈ 4 ರಂದು ನಡೆದ ಸಭೆಯಲ್ಲಿ ಮಾತ್ರ ನಮ್ಮ ಮನವಿಯನ್ನು ಸರಾಸಗಟಾಗಿ ತಳ್ಳಿಹಾಕಿದ್ದಾರೆ. ಸರಕಾರಕ್ಕೆ ಆಗಸ್ಟ್ 4 ರವರೆಗೆ ಅವಕಾಶ ನೀಡುತ್ತೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಆಗಸ್ಟ್ 5 ರಿಂದ ಎಲ್ಲಾ ನೌಕರರು ತಮ್ಮ ಕೆಲಸವನ್ನು ಕೈಬಿಟ್ಟು ಮುಷ್ಕರ ನಡೆಸುತ್ತೇವೆ. ಸರಕಾರದ ಯಾವ ಎಸ್ಮಾ ಜಾರಿಗೂ ಹೆದರುವುದಿಲ್ಲ ಎಂದು ಎಐಟಿಯುಸಿಯ ಅಪ್ಸರ್ ಪಾಷ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ದೇವರಾಜು, ಪುಟ್ಟರಾಜು, ರಾಮಾಂಜನೇಯ, ಶಿವಶಂಕರ್, ಕುಂಭಯ್ಯ, ಅಬ್ದುಲ್, ಪುಟ್ಟರಾಜು, ಭೀಮಾನಾಯ್ಕ್, ನಟರಾಜು, ಷಮಿವುಲ್ಲಾ, ಹನುಮದಾಸ್ ,ಸುಬ್ರಮಣ್ಯ ಉಪಸ್ಥಿತರಿದ್ದರು.