ಕನ್ನಡಪ್ರಭ ವಾರ್ತೆ ಆನವಟ್ಟಿ

ಇಲ್ಲಿನ ಕೋಟೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ನೂತನ ಕಟ್ಟಡ ಕಾಮಗಾರಿ ಮುಗಿದು, ಬಸ್‌ ಬಂದು ಹೋಗುವ ರಸ್ತೆ ನಿರ್ಮಾಣಕ್ಕೆ ಅನುದಾನದ ಕೊರತೆಯಿಂದ, ಬಸ್‌ ನಿಲ್ದಾಣ ಉದ್ಘಾಟನೆಗೊಳ್ಳದೆ ಪಾಳು ಬಿದ್ದಿದೆ.

ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿ ಯೋಜನೆಗೆ ಪೂರ್ಣ ಪ್ರಮಾಣದ ಅನುದಾನ ಇಲ್ಲದೆ, ಕೆವಲ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುದಾನ ಒದಗಿಸಿ, ಬಿಜೆಪಿ ಸರ್ಕಾರದಲ್ಲಿ ಆರಂಭಿಸಿದ್ದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಅನುದಾನದ ಕೊರತೆಯಿಂದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡು ಎರಡು ವರ್ಷ ಕಳೆದಿದೆ.

ಹುಬ್ಬಳ್ಳಿ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಬಸ್‌ಗಳ ಓಡಾಟ ಹೆಚ್ಚುತ್ತವೆ. ಮತ್ತು ಆನವಟ್ಟಿ ಸುತ್ತಲು ಪ್ರದೇಶ ಹಳ್ಳಿಗಳಿಗೆ ಬಸ್‌ ಬರುತ್ತವೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಉದ್ಯೋಗ ಮಾಡುವವರಿಗೆ, ವ್ಯಾಪಾರ ಮಾಡುವವರಿಗೆ ಎಲ್ಲರಿಗೂ ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್‌ಗಳು ಸಿಗುತ್ತವೆ ಎಂದು ಗ್ರಾಮೀಣ ಭಾಗದ ಜನರು ನಂಬಿಕೊಂಡಿದ್ದರು.

ಪ್ರಯಾಣಿಕರಿಗೆ ಸೇವೆ ಒದಗಿಸಬೇಕಾಗಿದ್ದ ಬಸ್‌ ನಿಲ್ದಾಣ, ಪಾಳು ಬಿದ್ದು ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ. ಸಾರ್ವಜನಿಕರ ತೆರೆಗೆ ಹಣದಿಂದ ನಿರ್ಮಾಣ ಮಾಡುವ ಕಾಮಗಾರಿಗಳನ್ನು ಅರ್ಧಂಬರ್ಧ ಮಾಡದೆ, ಪೂರ್ಣ ಕಾಮಗಾರಿಗೆ ಆಗುವಷ್ಟು ಹಣ ಒದಗಿಸಿ, ನಿಗದಿತ ಅವಧಿ ಒಳಗೆ ಪೂರ್ಣ ಮಾಡಿ ಅದರ ಸದ್ಬಳಕೆ ನೇರವಾಗಿ ಸಾರ್ವಜನಿಕರಿಗೆ ಆಗುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.


ಆನವಟ್ಟಿಯಲ್ಲಿ ಸರ್ಕಾರಿ ಬಸ್‌ ನಿಲ್ದಾಣ ಇಲ್ಲದೆ ಇರುವುದರಿಂದ, ಬಹುತೇಕ ಬಸ್‌ಗಳು ಖಾಸಗಿ ನಿಲ್ದಾಣದ ಒಳಗೆ ಹೋಗದೆ, ಬಸ್‌ ನಿಲ್ದಾಣದಿಂದ ದೂರದಲ್ಲಿ ವಾಹನವನ್ನು ನಿಲ್ಲಿಸುತ್ತಾರೆ. ಬಸ್‌ನಲ್ಲಿ ಸೀಟು ಹಿಡಿಯುವುದಕ್ಕಾಗಿ ಪ್ರಯಾಣಿಕರು ಓಡಿ-ಓಡಿ ಹೋಗಿ ಬಸ್‌ ಹತ್ತಬೇಕು. ಕೆಲವೊಂದು ಸಲ ಬಸ್‌ ನಿಲ್ಲಿಸುವುದೇ ಇಲ್ಲ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಮೊದಲು ಸರ್ಕಾರಿ ಬಸ್‌ ನಿಲ್ದಾಣ ತೆರೆಯಿರಿ ಎಂದು ಪ್ರಯಾಣಿಕರು ಒತ್ತಾಯಿಸುತ್ತಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಪಾದಚಾರದ ಮೂಲಕ ಅಥವಾ ಆಟೋ ಮುತಾಂದ ವಾಹನದಲ್ಲಿ ನೂಕುನುಗ್ಗಲಿನಲ್ಲಿ ಪಟ್ಟಣಕ್ಕೆ ಹೋಗಬೇಕು. ಇದನ್ನು ತಪ್ಪಿಸಿ, ಬಸ್‌ ನಿಲ್ದಾಣ ಪ್ರಾರಂಭಿಸಿ ಗ್ರಾಮೀಣ ಪ್ರದೇಶಗಳಿಗೆ, ಶಾಲಾ ಸಮಯಕ್ಕೆ ಬಸ್‌ಗಳನ್ನು ಬಿಡಿ.

ಸುರೇಶ್‌ ಸಮನವಳ್ಳಿ ಕೃಷಿಕ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂದುವರಿದ ಕಾಮಗಾರಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಮಧು ಬಂಗಾರಪ್ಪ 2.49 ಕೋಟಿ ಅನುದಾನ ಮಂಜೂರು ಮಾಡಿಸಿದ್ದು, ಬಸ್‌ ಬಂದು, ಹೋಗುವ ನಿಲ್ದಾಣ ಸುತ್ತಲೂ ಕಾಂಕ್ರೀಟ್‌ ಕಾಮಗಾರಿ ಶೀಘ್ರ ಪ್ರಾರಂಭವಾಗುತ್ತದೆ. ಸರ್ಕಾರಿ ಬಸ್‌ ನಿಲ್ದಾಣ ಉದ್ಘಾಟನೆ ದಿನವೇ, ಪಕ್ಕದ ಜಾಗದಲ್ಲಿ ಖಾಸಗಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಅನೀಶ್‌ ಪಾಟೀಲ್‌ ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ.

ಸಚಿವರಿಗೆ ಜನ ಸಾಮಾನ್ಯರ ಮೇಲೆ ಅಪಾರ ಕಾಳಜಿ ಇದೆ. ಈಗಾಗಲೆ ಕೆಲವು ಹಳ್ಳಿಗಳಿಗೆ ಸರ್ಕಾರಿ ಬಸ್‌ ಬಿಟ್ಟಿದ್ದಾರೆ. ಅಕ್ಕಪಕ್ಕದಲ್ಲೆ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ನಿಲ್ದಾಣಕ್ಕೆ ಆದ್ಯತೆ ನೀಡಿರುವುದು ಪ್ರಯಾಣಿಕ ದೃಷ್ಟಿಯಿಂದ ಅನುಕೂಲ.

ಸುರೇಶ್‌ ಮಾಸಾಲ್ತಿ ಗ್ರಾಮಸ್ಥ.