ರಶ್‌ ತಪ್ಪಿಸಲು ಕೆಎಸ್ಸಾರ್ಟಿಸಿಯಿಂದ ಮತ್ತಷ್ಟು ಬಸ್‌

| Published : Jun 11 2024, 01:33 AM IST / Updated: Jun 11 2024, 11:35 AM IST

KSRTC Bus

ಸಾರಾಂಶ

 ಕೆಎಸ್‌ಆರ್‌ಟಿಸಿ 300ಕ್ಕೂ ಹೆಚ್ಚಿನ ಹೊಸ ಮಾರ್ಗಗಳಲ್ಲಿ ಮತ್ತು ಹಳೇ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ ಸೇವೆ ಆರಂಭಿಸಲು ನಿರ್ಧರಿಸಿದೆ.

 ಬೆಂಗಳೂರು :  ‘ಶಕ್ತಿ’ ಯೋಜನೆ ಜಾರಿ ನಂತರ ಹಲವು ಮಾರ್ಗಗಳಲ್ಲಿ ಬಸ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ಅದರಿಂದ ವಿದ್ಯಾರ್ಥಿಗಳು ಸೇರಿ ಇನ್ನಿತರ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ ಎಂಬ ದೂರಿಗೆ ಪರಿಹಾರ ಎನ್ನುವಂತೆ ಕೆಎಸ್‌ಆರ್‌ಟಿಸಿ 300ಕ್ಕೂ ಹೆಚ್ಚಿನ ಹೊಸ ಮಾರ್ಗಗಳಲ್ಲಿ ಮತ್ತು ಹಳೇ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ ಸೇವೆ ಆರಂಭಿಸಲು ನಿರ್ಧರಿಸಿದೆ.

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಅದರ ಪರಿಣಾಮ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೀಗಾಗಿ ಪ್ರಯಾಣಿಕರು ಹೆಚ್ಚಿರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅದರಂತೆ ಕಳೆದೊಂದು ವರ್ಷದಿಂದೀಚೆಗೆ ಕೆಎಸ್ಸಾರ್ಟಿಸಿಯಲ್ಲಿ 200ಕ್ಕೂ ಹೆಚ್ಚಿನ ಶೆಡ್ಯೂಲ್‌ (ಸುತ್ತುವಳಿ)ಗಳನ್ನು ಹೆಚ್ಚಿಸಲಾಗಿದೆ. ಆದರೂ, ಶಾಲೆ-ಕಾಲೇಜುಗಳಿರುವ ಮಾರ್ಗಗಳಲ್ಲಿ ಬಸ್‌ಗಳ ಸಂಖ್ಯೆ ಕೊರತೆಯಾಗಿ, ವಿದ್ಯಾರ್ಥಿಗಳಿಂದ ಸಾಕಷ್ಟು ದೂರುಗಳು ಬಂದಿವೆ. ಆ ದೂರುಗಳಿಗೆ ಪರಿಹಾರ ಎನ್ನುವಂತೆ ಈ ವರ್ಷ 300ಕ್ಕೂ ಹೆಚ್ಚಿನ ಹೊಸ ಮತ್ತು ಹಳೇ ಮಾರ್ಗಗಳಲ್ಲಿ ಬಸ್‌ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

500 ಹೊಸ ಬಸ್‌ಗಳ ನಿಯೋಜನೆ:

ಬಸ್‌ಗಳ ಅವಶ್ಯಕತೆ ಇರುವ ಹಾಗೂ ಶಾಲೆ-ಕಾಲೇಜುಗಳು ಹೆಚ್ಚಿರುವ ಮಾರ್ಗಗಳನ್ನು ಗುರುತಿಸಿರುವ ಕೆಎಸ್ಸಾರ್ಟಿಸಿ ಅಲ್ಲಿಗೆ ಹೆಚ್ಚುವರಿ ಅಥವಾ ಹೊಸದಾಗಿ ಬಸ್‌ ಸೇವೆ ಆರಂಭಿಸಲು ನಿರ್ಧರಿಸಿದೆ. ಅದರಂತೆ ಈಗಾಗಲೇ ಹೊಸ ಮಾರ್ಗ ಮತ್ತು ಹೆಚ್ಚುವರಿ ಬಸ್‌ಗಳ ಅವಶ್ಯಕತೆ ಇರುವ 300ಕ್ಕೂ ಹೆಚ್ಚಿನ ಮಾರ್ಗಗಳನ್ನು ಗುರುತಿಸಲಾಗಿದೆ. ಆ ಮಾರ್ಗಗಳಲ್ಲಿ ಸೇವೆ ನೀಡಲು ಸದ್ಯ ಕೆಎಸ್ಸಾರ್ಟಿಸಿಗೆ ಸೇರ್ಪಡೆಯಾಗಿರುವ 814 ಬಸ್‌ಗಳ ಪೈಕಿ 500 ಬಸ್‌ಗಳನ್ನು ನಿಯೋಜಿಸಲಾಗುತ್ತಿದೆ. ಅದರ ಜತೆಗೆ ಹೊಸದಾಗಿ ನೇಮಕವಾಗುತ್ತಿರುವ 2,500 ಚಾಲಕ ಕಂ ನಿರ್ವಾಹಕರಲ್ಲಿ 2 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ಹೊಸ ಮಾರ್ಗದಲ್ಲಿ ಸೇವೆಗಾಗಿ ನೇಮಿಸಲು ನಿರ್ಧರಿಸಲಾಗಿದೆ.

3 ತಿಂಗಳಲ್ಲಿ ಸೇವೆ ಆರಂಭ:

ಸದ್ಯ ಕೆಎಸ್ಸಾರ್ಟಿಸಿ ವಿಭಾಗೀಯ ಮಟ್ಟದಲ್ಲಿ ಗುರುತಿಸಲಾಗಿರುವ ಹೊಸ ಮಾರ್ಗಗಳಲ್ಲಿ ಮುಂದಿನ 3 ತಿಂಗಳಲ್ಲಿ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಅದರ ಜತೆಗೆ ಇನ್ನೂ ಯಾವುದಾದರೂ ಮಾರ್ಗಗಳಲ್ಲಿ ಬಸ್ ಸೇವೆ ಅವಶ್ಯಕತೆಯಿದೆಯೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಮುಂದಿನ 3 ತಿಂಗಳಲ್ಲಿ ಹೆಚ್ಚುವರಿ ಮಾರ್ಗಗಳನ್ನು ಗುರುತಿಸಿದರೆ, ಅಲ್ಲಿಯೂ ಬಸ್‌ ಸೇವೆ ಆರಂಭಿಸುವ ಬಗ್ಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಬಸ್‌ಗಳ ಕೊರತೆ ನೀಗಿಸಲು ಕ್ರಮ

ಕೆಎಸ್ಸಾರ್ಟಿಸಿ ವ್ಯಾಪ್ತಿಯಲ್ಲಿ ಬಸ್‌ಗಳ ಕೊರತೆ ನೀಗಿಸುವ ಸಲುವಾಗಿ ಹೊಸ ಬಸ್‌ ಖರೀದಿಸಲಾಗಿದೆ. ಸದ್ಯ 814 ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಅದರ ಜತೆಗೆ 977 ಹಳೇ ಬಸ್‌ಗಳನ್ನು ಪುನಶ್ಚೇತನಗೊಳಿಸಲಾಗಿದೆ. ಹೀಗೆ ಹೊಸ ಬಸ್‌ಗಳ ಖರೀದಿ ಜತೆಗೆ ಮತ್ತಷ್ಟು ಹಳೇ ಬಸ್‌ಗಳನ್ನು ಪುನಶ್ಚೇತನಗೊಳಿಸಲು ನಿಗಮ ನಿರ್ಧರಿಸಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ 100 ಪಲ್ಲಕ್ಕಿ ಸ್ಲೀಪರ್‌ ಬಸ್‌ಗಳ ಸೇರ್ಪಡೆಗೆ ಸರ್ಕಾರ ಅನುಮತಿ ನೀಡಿದ್ದು, ಅದಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗೆಯೇ, 20 ಐರಾವತ, 20 ಅಂಬಾರಿ ಉತ್ಸವ ಬಸ್‌ಗಳ ಖರೀದಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗೆ ಸಾಮಾನ್ಯ ಸಾರಿಗೆ ಬಸ್‌ಗಳ ಜತೆಗೆ ಪ್ರೀಮಿಯಂ ಸೇವೆ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲು ನಿಗಮ ಯೋಜನೆ ರೂಪಿಸಿದೆ.ಕೋಟ್‌

ಶಾಲೆ-ಕಾಲೇಜುಗಳಿರುವ ಮಾರ್ಗಗಳಲ್ಲಿ ಬಸ್‌ಗಳ ಕೊರತೆ ನೀಗಿಸಲು 500 ಬಸ್‌ಗಳನ್ನು ನಿಯೋಜಿಸಲಾಗುತ್ತಿದೆ. ಅದರ ಜತೆಗೆ ಹೊಸದಾಗಿ 300ಕ್ಕೂ ಹೆಚ್ಚಿನ ಮಾರ್ಗಗಳನ್ನು ಗುರುತಿಸಲಾಗಿದ್ದು, ಮುಂದಿನ 3 ತಿಂಗಳಲ್ಲಿ ಆ ಮಾರ್ಗಗಳಲ್ಲಿ ಬಸ್‌ ಸೇವೆ ಆರಂಭಿಸಲಾಗುವುದು. ಹಳೇ ಮಾರ್ಗಗಳಲ್ಲಿ ಅಗತ್ಯವಿದ್ದರೆ ಹೆಚ್ಚುವರಿ ಬಸ್‌ ಸೇವೆ ಆರಂಭಿಸಲಾಗುತ್ತದೆ.

ಅನ್ಬುಕುಮಾರ್‌, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ