ಸಾರಾಂಶ
ಚಿಕ್ಕಮಗಳೂರು : ಹೊಲಿಗೆ ಕಾರ್ಮಿಕರ ಹಿತರಕ್ಷಣೆಗಾಗಿ ರಾಜ್ಯ ಟೈಲರ್ಸ್ ಮಂಡಳಿ ರಚಿಸಬೇಕು ಎಂದು ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ (ಕೆಎಸ್‌ಟಿಎ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಮಿತಿ ಸಹಯೋಗದಲ್ಲಿ ನಗರದ ಶ್ರೀರಾಮ ದೇವಸ್ಥಾನದ ಜಾನಕಿ ಸಭಾಂಗಣದಲ್ಲಿ ನಡೆದ ರಾಜ್ಯ ಸಮಿತಿ ಸಾಮಾನ್ಯಸಭೆಯಲ್ಲಿ ಮುಖಂಡರು ಒತ್ತಾಯಿಸಿದರು.
ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಎಸ್‌ಟಿಎ ಕೇಂದ್ರ ಸಮಿತಿ ಅಧ್ಯಕ್ಷ ಬಿ.ಎ.ನಾರಾಯಣ, ಹೊಲಿಗೆ ಕಾರ್ಮಿಕರಲ್ಲಿ ಬಹುತೇಕರು ಮಹಿಳೆಯರಿದ್ದಾರೆ. ಅವರ ಹಿತರಕ್ಷಣೆಗೆ ಸರ್ಕಾರ ಮುಂದಾಗಬೇಕು. ವಿಶೇಷವಾಗಿ ಹೆರಿಗೆ ಭತ್ಯೆ, ಆರೋಗ್ಯ ಸೌಕರ್‍ಯ, ವಿಧವಾ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲು ಅನುಕೂಲವಾಗುವಂತೆ ಟೈಲರ್ಸ್ ಮಂಡಳಿ ರಚನೆಗೊಳ್ಳಬೇಕೆಂದು ಹೇಳಿದರು.
60 ವರ್ಷ ದಾಟಿದ ಹೊಲಿಗೆ ಕಾರ್ಮಿಕರಿಗೆ ದೃಷ್ಟಿದೋಷ ಸಹಜವಾಗಿ ಬರುತ್ತದೆ. ದೀರ್ಘಕಾಲದ ಕಾರ್ಯ ನಿರ್ವಹಣೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಕುಗ್ಗಿರುತ್ತದೆ. ಜೀವನಪೂರ್ತಿ ಅಂದ ಚಂದದ ವಸ್ತ್ರವಿನ್ಯಾಸದಲ್ಲಿ ತೊಡಗಿಸಿ ಕೊಂಡವರ ಬದುಕು ಅಸಹನೀಯವಾಗಬಾರದು. ಕಟ್ಟಡ ಕಾರ್ಮಿಕ ಮಂಡಳಿ ಮಾದರಿಯಲ್ಲೆ ಹೊಲಿಗೆ ಕಾರ್ಮಿಕರ ನೆರವಿ ಗಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಮಂಡಳಿ ರಚಿಸಬೇಕೆಂಬುದು ಬಹು ದಿನಗಳ ಬೇಡಿಕೆ ಎಂದ ನಾರಾಯಣ್, ರಾಜ್ಯದಲ್ಲಿ 1.2 ಲಕ್ಷ ಕ್ಕೂ ಅಧಿಕ ಹೊಲಿಗೆ ಕಾರ್ಮಿಕರು ಕೆಎಸ್‌ಟಿಎಯಲ್ಲಿ ಸದಸ್ಯತ್ವ ಹೊಂದಿದ್ದಾರೆ ಎಂದರು.
1999 ರಲ್ಲಿ ಮಂಗಳೂರಿನಲ್ಲಿ ನೋಂದಣಿಯಾದ ಕೆಎಸ್‌ಟಿಎ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಘಟಕಗಳನ್ನು ಹೊಂದಿದೆ. ಪ್ರತಿ ಸದಸ್ಯರಿಂದ ₹45 ಸದಸ್ಯತ್ವ ಶುಲ್ಕ ಸಂಗ್ರಹಿಸುತ್ತಿದ್ದು ಅದರಲ್ಲಿ ಕೇವಲ ₹8 ಮಾತ್ರ ರಾಜ್ಯ ಸಂಘ ಪಡೆದು ಉಳಿದ ಹಣವನ್ನು ತಾಲೂಕು ಮತ್ತು ಜಿಲ್ಲಾ ಸಂಘಕ್ಕೆ ಬಿಟ್ಟು ಕೊಡುತ್ತಿದೆ. ಶುಲ್ಕ ಹಾಗೂ ದಾನಿಗಳ ನೆರವಿನೊಂದಿಗೆ ಮಂಗಳೂರಿನಲ್ಲಿ ನಾಲ್ಕು ಅಂತಸ್ತಿನ ಬೃಹತ್ ಕಟ್ಟಡ ಕಟ್ಟಿದೆ. ಶ್ರಮಿಕರ ಪ್ರತಿ ಪೈಸೆಯೂ ಸದ್ವಿನಿಯೋಗಗೊಳ್ಳುತ್ತಿದೆ ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್‍ಯದರ್ಶಿ ಪ್ರಜ್ವಲಕುಮಾರ್ ಮಾತನಾಡಿ, ಹೊಲಿಗೆ ಕಾರ್ಮಿಕರ ಹಿತರಕ್ಷಣೆಗೆ ನಿರಂತರ ಶ್ರಮಿಸ ಲಾಗುತ್ತಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಮುಖ್ಯಮಂತ್ರಿಗಳು ಹಾಗೂ ಹಲವು ಸಚಿವರನ್ನು ಆಹ್ವಾನಿಸಿ ಸದಸ್ಯರ ಬೇಡಿಕೆಗಳನ್ನು ಮನವರಿಕೆ ಮಾಡಲಾಗಿದೆ. ಆದರೆ ಈವರೆಗೂ ಅವು ಈಡೇರಿಲ್ಲ ಎಂದು ವಿಷಾದಿಸಿ ಮುಂಬರುವ ದಿನಗಳಲ್ಲಿ ಸರ್ಕಾರ ಕ್ರಮಕೈಗೊಳ್ಳುತ್ತದೆಂಬ ಭರವಸೆ ಇದೆ ಎಂದರು.ರಾಜ್ಯ ಉಪಾಧ್ಯಕ್ಷ ಸಯ್ಯದ್ ರೆಹಮಾನ್ ಮಾತನಾಡಿ, ಟೈಲರ್‌ಗಳು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತರಾಗಬೇಕು. ಒಕ್ಕೊರಲಿನ ಧ್ವನಿಗೆ ಬಲ ಬರುತ್ತದೆ. ಕ್ಷೇತ್ರಮಟ್ಟದಲ್ಲಿ ಸಂಘ ಬಲಪಡಿಸಬೇಕು. ಗುರುತಿನ ಚೀಟಿ ಗಳ ಸಮರ್ಪಕ ಹಂಚಿಕೆಯಾಗಬೇಕು ಎಂದ ಅವರು, ರಾಜ್ಯ ಸರ್ಕಾರ ಹೊಲಿಗೆ ಕಾರ್ಮಿಕರ ಹಿತರಕ್ಷಣೆಗೆ ರಾಜ್ಯ ಮಟ್ಟದಲ್ಲಿ ಪ್ರತ್ಯೇಕವಾಗಿ ಟೈಲರ್ ಮಂಡಳಿ ರಚಿಸಬೇಕೆಂಬ ನಿರ್ಣಯ ಮಂಡಿಸಿದ್ದು ಸಭೆ ಅನುಮೋದಿಸಿತು.
ಸಭೆಯಲ್ಲಿ ರಾಜ್ಯ ಸಂಘದ ಖಜಾಂಚಿ ರಾಮಣ್ಣ, ಉಪಾಧ್ಯಕ್ಷ ಸುರೇಶ್ ಸಾಲ್ಯಾನ, ಹಾಸನ ಜಿಲ್ಲಾಧ್ಯಕ್ಷ ಎಂ.ಕೃಷ್ಣಪ್ಪ, ಮಾಜಿ ರಾಜ್ಯ ಕಾರ್‍ಯದರ್ಶಿ ಹಾಸನ ಮಲ್ಲಿಕಾರ್ಜುನ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಯಪುರ ಸುರೇಂದ್ರ, ಪ್ರಧಾನ ಕಾರ್‍ಯದರ್ಶಿ ಎ.ವಿ.ಬಾಲಕೃಷ್ಣ, ಖಜಾಂಚಿ ಎಂ.ಸೌಮ್ಯ, ಮಂಗಳೂರು ಜಿಲ್ಲಾಧ್ಯಕ್ಷೆ ವಿದ್ಯಾಶೆಟ್ಟಿ, ಚಿಕ್ಕಮಗಳೂರು ಕ್ಷೇತ್ರ ಸಮಿತಿ ಪ್ರಧಾನ ಕಾರ್‍ಯದರ್ಶಿಎಚ್.ಶಶಿಧರ್, ಖಜಾಂಚಿ ಚಂದ್ರಕುಮಾರ್, ಮೂಡಿಗೆರೆ ಕ್ಷೇತ್ರ ಕಾರ್‍ಯದರ್ಶಿ ಸತೀಶ್, ತರೀಕೆರೆ ಕ್ಷೇತ್ರ ಸಮಿತಿ ಅಧ್ಯಕ್ಷ ರಮೇಶ್, ಶೃಂಗೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎನ್.ಜಿ.ರವೀಂದ್ರ, ಕಡೂರು ಕ್ಷೇತ್ರ ಸಮಿತಿ ಅಧ್ಯಕ್ಷೆ ಕುಮಾರಿ ಉಪಸ್ಥಿತರಿದ್ದರು.