ಸಾರಾಂಶ
ಹಳ್ಳಿ ಹೈದನ ಹಾಡಿಗೆ ಮನಸೋತ ಯುವಕರು । ಕಡು ಬಡತನದಲ್ಲಿ ಬೆಳೆದ ಯುವ ಪ್ರತಿಭೆ
ಶಿವಮೂರ್ತಿ ಇಟಗಿಕನ್ನಡಪ್ರಭ ವಾರ್ತೆ ಯಲಬುರ್ಗಾಹಳ್ಳಿ ಸೊಗಡಿನ ಜನಪದ ಹಾಡುಗಳ ಮೂಲಕ ಸಂಗೀತ ಕ್ಷೇತ್ರದಲ್ಲಿ ಸದ್ದಿಲ್ಲದೇ ತನ್ನದೇ ಹೆಸರು ಮಾಡುತ್ತಿರುವ ಅಪ್ಪಟ್ಟ ಗ್ರಾಮೀಣ ಪ್ರತಿಭೆ ಯುವಕ ಮೈಲಾರಪ್ಪ ಮಡಿವಾಳರ ಜನಪದ ಅಭಿಮಾನಿಗಳ ಪಾಲಿಗೆ ಹೀರೋ ಆಗಿ ಹೊರ ಹೊಮ್ಮುತ್ತಿದ್ದಾರೆ.
ತಾಲೂಕಿನ ಕುಡಗುಂಟಿ ಗ್ರಾಮದ ಮೈಲಾರಪ್ಪ ಮಡಿವಾಳರ ಬದಾಮಿಯ ವೀರಪುಲಕೇಶಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಕೂಲಿ-ನಾಲಿ ಮಾಡಿ ಬದುಕು ಕಟ್ಟಿಕೊಂಡ ಮೈಲಾರಪ್ಪ ಕಡು ಬಡತನದಲ್ಲಿ ಬೆಳೆದ ಯುವ ಪ್ರತಿಭೆ. ಕೂಲಿ ಅರಸಿ ನಗರ ಪ್ರದೇಶಗಳಿಗೆ ಗುಳೆ ಹೋದ ಮೈಲಾರಪ್ಪ ಹಾಡುತ್ತಲೆ ಗಾಯಕನಾಗಿದ್ದಾರೆ. ರಂಗಭೂಮಿ ನಾಟಕಗಳಲ್ಲಿ ಹಿನ್ನೆಲೆ ಗಾಯಕನಾಗಿ ಹೆಚ್ಚು ಹಾಡು ಆಡಿದ್ದಾರೆ. ಗದಗದ ಪುಟ್ಟರಾಜ ನಾಟ್ಯ ಸಂಘದಲ್ಲಿಯೂ ಕೆಲಸ ಮಾಡಿದ್ದಾರೆ. ಇಂದು ರಾಜ್ಯಾದ್ಯಂತ ಎಲ್ಲರ ಮನೆ ಮಾತಾಗಿದ್ದಾರೆ.ಸ್ವರಚಿತ ಹಾಡುಗಾರ:
ಮೈಲಾರಪ್ಪ ಇತ್ತೀಚೆಗೆ ಮ್ಯೂಸಿಕ್ ಮೈಲಾರಿ ಎಂದೇ ಹೆಸರು ವಾಸಿಯಾಗಿದ್ದಾರೆ. ೧೦೦ಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ರಚಿಸಿ, ತನ್ನದೇ ಆದ ಸಂಗೀತ ನಿದೇರ್ಶನದಲ್ಲಿ ಹಾಡಿದ್ದಾರೆ. ಸಂಗೀತವನ್ನೇ ತನ್ನ ಜೀವನದ ಉಸಿರಾಗಿಸಿಕೊಂಡ ಮೈಲಾರಿ ಎಲ್ಲ ಕ್ಷೇತ್ರದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.ಜಾತ್ರೆ-ಮದುವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡುವ ಮೂಲಕ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಮೈಲಾರಿಗೆ ಅಣ್ಣಿಗೇರೆಯ ಪಂಚಾಕ್ಷರಿ ಅಜ್ಜನವರು, ರಂಗಭೂಮಿ ಕಲೆಯಲ್ಲಿ ಕೈಹಿಡಿದು ನಡೆಸಿದ ಪರಮನಹಟ್ಟಿಯ ಶಿವಶಂಕರ ಗಣವಾರಿ, ಗಜೇಂದ್ರಗಡದ ಮಂಗಳಮುಖಿ ಪಲ್ಲವಿ ಸಂಗೀತದ ಗುರು ಆಗಿದ್ದಾರೆ.
ಹಲವು ಪ್ರಶಸ್ತಿಗಳು:ಸಂಗೀತ ಗಾಯಕ ಮೈಲಾರಿಯ ಪ್ರತಿಭೆ ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಆಂಧ್ರಪ್ರದೇಶದ ಶ್ರೀಶೈಲಂ ಗಡಿನಾಡು ಗಾನರತ್ನ, ಸಿದ್ಧಾರೂಢ ರಾಷ್ಟ್ರಪ್ರಶಸ್ತಿ, ಮಡಿವಾಳ ಮಾಚಿದೇವ ರಾಜ್ಯ ಪ್ರಶಸ್ತಿ, ರಾಷ್ಟ್ರಮಟ್ಟದ ಕಲಾರತ್ನ ಪ್ರಶಸ್ತಿ, ಚಾಲುಕ್ಯ ವಿಕ್ರಮಾದಿತ್ಯ ಸೇರಿ ಅನೇಕ ಪ್ರಶಸ್ತಿ ದೊರೆತಿವೆ.
ಅಭಿಮಾನಿಗಳಿಂದ ಮೆಚ್ಚುಗೆ:ಮೂಲತ ಕುಡಗುಂಟಿ ಗ್ರಾಮದ ಮೈಲಾರಪ್ಪರ ಸಂಗೀತ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಯುವಕರು ಹಾಗೂ ಅಭಿಮಾನಿಗಳೇ ಉತ್ತರ ಕರ್ನಾಟಕದ ಟ್ರೆಂಡಿಂಗ್ ಸ್ಟಾರ್ ಮ್ಯೂಸಿಕ್ ಮೈಲಾರಿ ಎಂದು ಬಿರುದು ನೀಡಿದ್ದಾರೆ. ಬಾಳು ಬೆಳಗುಂದಿ, ಮಾಳು ನಿಪನಾಳ ಅವರ ತಂಡದಲ್ಲಿ ಮೈಲಾರಿ ಗುರುತಿಸಿಕೊಂಡಿದ್ದಾನೆ.
ಕೃಷಿ ಕೆಲಸಕ್ಕೂ ಸೈ:ಬರೀ ಹಾಡುಗಾರಿಕೆ ಅಷ್ಟೇ ಸಿಮೀತವಲ್ಲ, ಬಿಡುವಿನ ಅವಧಿಯಲ್ಲಿ ಕೃಷಿ ಜಮೀನುಗಳಲ್ಲಿ ಕೆಲಸ ಮಾಡುವ ಕೃಷಿ ಚಟುವಟಿಕೆಗಳಲ್ಲೂ ಮೈಲಾರಿ ತೊಡಗಿಸಿಕೊಂಡಿದ್ದಾರೆ.