ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಜ.14ರಂದು 12ನೇ ಕೃಷಿ ಸಂಕ್ರಾಂತಿ ಹಾಗೂ ರಾಷ್ಟ್ರೀಯ ಬಸವ ಕೃಷಿ ಪಂಡಿತ ಪ್ರಶಸ್ತಿಯನ್ನು ಸಾಧಕರಿಗೆ ನೀಡಿ, ಗೌರವಿಸಲಾಗುವುದು ಎಂದು ಶ್ರೀಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 12ನೇ ಕೃಷಿ ಸಂಕ್ರಾಂತಿ ಜೊತೆಗೆ ಮೀಸಲಾತಿ ಪಾದಯಾತ್ರೆಯ ತೃತೀಯ ವರ್ಷಾಚರಣೆಯೂ ಅದೇ ದಿನ ಆಗಲಿದ್ದು, ಸಮಾರಂಭದ ನಂತರ 2 ಎ ಮೀಸಲಾತಿ ಹಾಗೂ ಓಬಿಸಿ ಮೀಸಲಾತಿ ಚಳವಳಿಗಾರರ ಪಂಚ ಸಂಗಮ ಸಭೆ ಕರೆದಿದ್ದು, ಆ ಸಭೆಯಲ್ಲಿ ಹೋರಾಟದ ಬಗ್ಗೆ ಚರ್ಚಿಸಿ, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ, ಕೇಂದ್ರದ ಓಬಿಸಿ ಪಟ್ಟಿಗೆ ಸೇರ್ಪಡೆ ವಿಚಾರವಾಗಿ ನಾವು ಚರ್ಚೆ ಮಾಡಲಿದ್ದೇವೆ. ಜ.20 ಒಳಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ, ಮೀಸಲಾತಿ ಬಗ್ಗೆ ಸ್ಪಷ್ಟತೆ ನೀಡುವ ಭರವಸೆ ನೀಡಿದ್ದರು. ಆದರೆ, ತಿಂಗಳುಗಳೇ ಕಳೆದರೂ ಮುಖ್ಯಮಂತ್ರಿಗಳಿಂದ ಯಾವುದೇ ಸ್ಪಷ್ಟವಾದ ನಿರ್ಣಯವೂ ಪ್ರಕಟವಾಗಿಲ್ಲ ಎಂದು ದೂರಿದರು.
ಮುಖ್ಯಮಂತ್ರಿಗಳಿಗೆ ಸಮಾಜದಿಂದ ಸ್ಪಷ್ಟ ಸಂದೇಶ ನೀಡುವಂತಹ ಹೋರಾಟವನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುವುದು. ಮೀಸಲಾತಿಗಾಗಿ ಸರ್ಕಾರದ ವಿರುದ್ಧ ಪಂಚಮಸಾಲಿ ಸಮಾಜದ ಹೋರಾಟ ಮುಂದುವರಿಯಲಿದೆ.
ಕೂಡಲ ಸಂಗಮದ ಕೃಷಿ ಸಂಕ್ರಾಂತಿ ದಿನ ನಡೆಯುವ ಸಭೆಯಲ್ಲೇ ದಾವಣಗೆರೆಯಲ್ಲಿ ಆಯೋಜಿಸುವ ಸಮಾವೇಶದ ಬಗ್ಗೆಯೂ ಸಮಾಜದ ಮುಖಂಡರು, ಸಮಾಜ ಬಾಂಧವರೊಂದಿಗೆ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.
ಹನ್ನೆರಡನೇ ಶತಮಾನದ ಬದಲಾವಣೆಯ ಹರಿಕಾರರಾದ ಮಹಾ ಮಾನವತಾವಾದಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರಾಗಿ ಘೋಷಿಸಬೇಕೆಂಬುದಾಗಿ ನಾವು ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಈಗಾಗಲೇ ಎಲ್ಲಾ ರಾಜ್ಯಗಳಲ್ಲೂ ಅಲ್ಲಿನ ದಾರ್ಶನಿಕರ ಸಾಂಸ್ಕತಿಕ ನಾಯಕರೆಂಬುದಾಗಿ ಘೋಷಿಸಿದ್ದಾರೆ ಎಂದರು.
ಹರಿಹರ ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಸಮಾಜದ ಮುಖಂಡರಾದ ಅಶೋಕ ಗೋಪನಾಳ, ಈಶ್ವರಪ್ಪ, ವಕೀಲ ಎಚ್.ಎಸ್.ಯೋಗೇಶ ಇತರರಿದ್ದರು. ಇಂದು ಮೋಟೆಬೆನ್ನೂರು ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ
ಪಂಚಮಸಾಲಿ 2 ಎ ಮೀಸಲಾತಿ, ಎಲ್ಲಾ ಲಿಂಗಾಯತ ಒಳ ಪಂಗಡ ಕೇಂದ್ರದ ಓಬಿಸಿಗೆ ಒತ್ತಾಯ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗಾಗಿ ಹಾವೇರಿ ಜಿಲ್ಲೆ ಮೋಟೆಬೆನ್ನೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜ.12ರಂದು ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ ನಡೆಸುವುದಾಗಿ ಕೂಡಲ ಸಂಗಮ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಅನುಷ್ಠಾನ ಹಾಗೂ ಲಿಂಗಾಯತ ಉಪ ಸಮಾಜಗಳಿಗೆ ಕೇಂದ್ರದ ಒಬಿಸಿ ಮೀಸಲಾತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಆರಂಭವಾಗುವ ಹೋರಾಟದ ಎರಡನೇ ಭಾಗ ಇದು ಎಂದರು.
ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವನಗೌಡ ಆರ್.ಪಾಟೀಲ ಯತ್ನಾಳ್, ಡಾ.ವಿಜಯಾನಂದ ಕಾಶೆಪ್ಪನವರ್, ಲಕ್ಷ್ಮೀ ಹೆಬ್ಬಾಳಕರ್, ಅರವಿಂದ ಬೆಲ್ಲದ್, ವಿನಯ್ ಕುಲಕರ್ಣಿ, ಎಚ್.ಎಸ್.ಶಿವಶಂಕರ್ ಸೇರಿದಂತೆ ಅನೇಕ ಮುಖಂಡರ ನೇತೃತ್ವದಲ್ಲಿ ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.