ಜೂ.15ರೊಳಗೆ 42ಕೋಟಿ ವೆಚ್ಚದ 100 ಬೆಡ್ ಆಸ್ಪತ್ರೆಯ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

| Published : May 08 2025, 12:35 AM IST

ಜೂ.15ರೊಳಗೆ 42ಕೋಟಿ ವೆಚ್ಚದ 100 ಬೆಡ್ ಆಸ್ಪತ್ರೆಯ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನಲ್ಲಿ ಸುಹಾಸ್ ಹತ್ಯೆಯ ನಂತರ ಬಿಜೆಪಿಯವರು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ, ಸುಹಾಸ್ ಮೇಲೆ ರೌಡಿಶೀಟರ್ ಮಾಡಿದ್ದು ಬಿಜೆಪಿ ಸರ್ಕಾರವೇ ವಿನಃ ನಾವಲ್ಲ, ನೀವೇ ರೌಡಿಶೀಟರ್ ಮಾಡಿ ಅನಂತರ ಮಹಾತ್ಮನನ್ನು ಮಾಡಲು ಹೋಗುತ್ತೀರಾ,

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ನೆಲಮಂಗಲ ತಾಲೂಕಿಗೆ 100 ಬೆಡ್ ಗಳುಳ್ಳ ಆಸ್ಪತ್ರೆ ಇಲ್ಲದಿರುವ ಬಗ್ಗೆ ಶಾಸಕ ಶ್ರೀನಿವಾಸ್ ತಿಳಿಸಿ, ಒತ್ತಾಯ ಮಾಡಿದ ನಂತರ ಬಜೆಟ್‍ನಲ್ಲಿ ಘೋಷಣೆ ಮಾಡಲಾಯಿತು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದು ಸುಮಾರು 42 ಕೋಟಿ ವೆಚ್ಚದಲ್ಲಿ 100 ಬೆಡ್ ಗಳುಳ್ಳ ತಾಲೂಕು ಆಸ್ಪತ್ರೆ ನಿರ್ಮಿಸಲಾಗುತ್ತದೆ. ಜೂ.14ರೊಳಗೆ ಗುದ್ದಲಿ ಪೂಜೆ ನೆರವೇರಿಸುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಟಿ.ಬೇಗೂರು ಗ್ರಾಮ ಸಮೀಪದ ಸರ್ಕಾರಿ ಜಾಗದಲ್ಲಿ 100 ಬೆಡ್ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

ನೆಲಮಂಗಲದಲ್ಲಿ ದಶಕಗಳ ಹಿಂದೆಯೇ 100 ಬೆಡ್ ಗಳುಳ್ಳ ಅತ್ಯುತ್ತಮ ಆಸ್ಪತ್ರೆ ನಿರ್ಮಾಣವಾಗಬೇಕಾಗಿತ್ತು, ಯಾವ ಕಾರಣಕ್ಕೆ ಆಗಿಲ್ಲ ಎಂಬುದು ಜನರಿಗೆ ತಿಳಿದಿದೆ. ಆದರೆ ನಮ್ಮ ಸರ್ಕಾರ ಜಾರಿಗೆ ಬಂದ 2 ತಿಂಗಳಲ್ಲಿಯೇ ಶಾಸಕ ಶ್ರೀನಿವಾಸ್ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಮನವಿ ಮಾಡಿದ್ದರು. ಅದರಂತೆ ಸಿದ್ದರಾಮಯ್ಯನವರು ಬಜೆಟ್‍ನಲ್ಲಿ ಘೋಷಣೆ ಸಹ ಮಾಡಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ತಿಂಗಳು ಭೂಮಿ ಪೂಜೆ ಮಾಡಲು ನಿರ್ಧಿರಿಸಿದ್ದು, ಸ್ಥಳ ಪರಿಶೀಲಿಸುವ ಉದ್ದೇಶದಿಂದ ಇಂದು ನೆಲಮಂಗಲಕ್ಕೆ ಭೇಟಿ ನೀಡಲಾಗಿದೆ ಎಂದರು.

ಉತ್ತಮ ಜಾಗ ಆಯ್ಕೆ:

ರಾಷ್ಟ್ರೀಯ ಹೆದ್ದಾರಿ ಸಮೀಪವೇ ಉತ್ತಮ ಜಾಗ ಆಯ್ಕೆ ಮಾಡಲಾಗಿದ್ದು, ಇದರಿಂದ ನೆಲಮಂಗಲದ ಕಸಬಾ, ತ್ಯಾಮಗೊಂಡ್ಲು, ದಾಬಸ್‍ಪೇಟೆ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಈಗ ನೀಡಿರುವ ಜಾಗದ ಜೊತೆಗೆ 2 ಎಕರೆ ಹೆಚ್ಚಿಗೆ ಜಾಗ ನೀಡಲು ತಿಳಿಸಲಾಗಿದೆ ಎಂದರು.

ಆಸ್ಪತ್ರೆಗೆ ಭೇಟಿ:

ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಹಾಗೂ ಶಾಸಕರು ಆಸ್ಪತ್ರೆಗಳ ಸೌಲಭ್ಯಗಳು, ಅಗತ್ಯತೆಗಳು, ವೈದ್ಯರ ಸಹಕಾರ, ರೋಗಿಗಳ ಸೌಕರ್ಯಗಳು ಎಲ್ಲವನ್ನು ಪರಿಶೀಲನೆ ಮಾಡಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ಸೋಲೂರು ವೈದ್ಯರಿಗೆ ಎಚ್ಚರಿಕೆ:

ಸೋಲೂರು ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ರಾತ್ರಿ ವೇಳೆ ವೈದ್ಯರ ಅನುಪಸ್ಥಿತಿಯನ್ನು ಮನಗಂಡು ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಪಕ್ಕದ ಆಸತ್ರೆ ಯಲ್ಲಿ ರೋಗಿಗಳು ಇಲ್ಲ ಎಂಬ ವೈದ್ಯರ ನಿರ್ಲಕ್ಷ್ಯದ ಮಾತು ಸರಿಯಿಲ್ಲ, ಪಡೆಯುವ ಸಂಬಳಕ್ಕೆ ಸರಿಯಾಗಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ನೆಲಮಂಗಲ ಜನರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯಗಳಿರುವ ಉತ್ತಮ ಆಸ್ಪತ್ರೆ ಇಲ್ಲದ ಬಗ್ಗೆ ಬಹಳ ಬೇಸರವಿತ್ತು, ನಾನು ಗೆದ್ದ ತಕ್ಷಣ ಸರ್ಕಾರಕ್ಕೆ ಮನವಿ ಮಾಡಿ ಆಸ್ಪತ್ರೆಯನ್ನು ಮಂಜೂರು ಮಾಡಿಸಲು ಪಟ್ಟ ಪರಿಶ್ರಮಕ್ಕೆ ಇಂದು ಸಚಿವರು ಬಂದು ಸ್ಥಳ ಪರಿಶೀಲನೆ ಮಾಡಿರುವುದು ಸಂತೋಷವಾಗಿದೆ. ಟಿ.ಬೇಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು.

ಬಿಜೆಪಿಯೇ ಸುಹಾಸ್ ನನ್ನು ರೌಡಿಶೀಟರ್ ಮಾಡಿದ್ದು :

ಮಂಗಳೂರಿನಲ್ಲಿ ಸುಹಾಸ್ ಹತ್ಯೆಯ ನಂತರ ಬಿಜೆಪಿಯವರು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ, ಸುಹಾಸ್ ಮೇಲೆ ರೌಡಿಶೀಟರ್ ಮಾಡಿದ್ದು ಬಿಜೆಪಿ ಸರ್ಕಾರವೇ ವಿನಃ ನಾವಲ್ಲ, ನೀವೇ ರೌಡಿಶೀಟರ್ ಮಾಡಿ ಅನಂತರ ಮಹಾತ್ಮನನ್ನು ಮಾಡಲು ಹೋಗುತ್ತೀರಾ, ದಲಿತರು ಹಾಗೂ ಮುಸ್ಲಿಂ ವ್ಯಕ್ತಿಗಳ ಹತ್ಯೆ ಮಾಡಿದ ಕೊಲೆ ಆರೋಪಿ ಸುಹಾಸ್‍ನನ್ನು ಕೊಲೆಗೈದ ಆರೋಪಿಗಳನ್ನು ಬಂಧನ ಮಾಡಿ ಕ್ರಮವಾಗುತ್ತದೆ ಎಂದು ಹೇಳಿದರು. ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಸೀಲ್ದಾರ್ ಅಮೃತ್ ಆತ್ರೇಶ್, ಎನ್ ಡಿಎ ಅಧ್ಯಕ್ಷ ನಾರಾಯಣಗೌಡ, ಡಿಎಚ್‍ಒ ಕೃಷ್ಣರೆಡ್ಡಿ, ಟಿಎಚ್‍ಒ ರವೀಂದ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜು, ಜಗದೀಶ್, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಎಂ.ಕೆ.ನಾಗರಾಜು ಸೇರಿ ಗ್ರಾಪಂ ಅಧ್ಯಕ್ಷರು, ಸದಸ್ಯರು, ಮುಖಂಡರು ಮತ್ತು ಕಾರ್ಯಕರ್ತರು, ಅಧಿಕಾರಿಗಳು ಉಪಸ್ಥಿತರಿದ್ದರು.