ಸಾರಾಂಶ
ಹಾಕಿ ಟೂರ್ನಿಯ ರೂಪುರೇಷೆ, ಸಂಘಟನೆ, ಸಮಿತಿ ರಚನೆಗೆ ಸಂಬಂಧಿಸಿದಂತೆ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಚಂದ್ರಕಾಂತ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಟೂರ್ನಿಯನ್ನು ಜನರ ಸಹಭಾಗಿತ್ವದಲ್ಲಿ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಸಂಘಟಿಸುವ ಕುರಿತು ನಿರ್ಧರಿಸಲಾಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ , ಸ್ಥಳೀಯ ಗ್ರಾಮ ಪಂಚಾಯತಿಗಳು
ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ಸಹಯೋಗದೊಂದಿಗೆ ಕೂಡಿಗೆಯ ಸರ್ಕಾರಿ ಕ್ರೀಡಾಶಾಲೆಯ ಹಾಕಿ ಟರ್ಫ್ ಮೈದಾನದಲ್ಲಿ ಜ.3ರಿಂದ 17 ವರ್ಷದೊಳಗಿನ ಬಾಲಕಿಯರ ರಾಷ್ಟ್ರೀಯ ಹಾಕಿ ಟೂರ್ನಿ ಸಂಘಟಿಸಲು ಪೂರ್ವಭಾವಿ ಸಭೆ ನಡೆಯಿತು.ಹಾಕಿ ಟೂರ್ನಿಯ ರೂಪುರೇಷೆ, ಸಂಘಟನೆ, ಸಮಿತಿ ರಚನೆಗೆ ಸಂಬಂಧಿಸಿದಂತೆ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಚಂದ್ರಕಾಂತ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಟೂರ್ನಿಯನ್ನು ಜನರ ಸಹಭಾಗಿತ್ವದಲ್ಲಿ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಸಂಘಟಿಸುವ ಕುರಿತು ನಿರ್ಧರಿಸಲಾಯಿತು.ರಾಷ್ಟ್ರೀಯ ಹಾಕಿ ಟೂರ್ನಿ ಸಂಘಟನೆ ಹಾಗೂ ರೂಪುರೇಷೆ ಕುರಿತು ಮಾಹಿತಿ ನೀಡಿದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ, ಟೂರ್ನಿಯ ಸಂಚಾಲಕ ಡಾ. ಸದಾಶಿವಯ್ಯ ಎಸ್.ಪಲ್ಲೇದ್, ಟೂರ್ನಿಯನ್ನು ಕೂಡಿಗೆಯ ಸರ್ಕಾರಿ ಕ್ರೀಡಾ ಶಾಲೆಯ ಟರ್ಫ್ ಮೈದಾನ ಸೇರಿದಂತೆ ಜಿಲ್ಲೆಯ ಇತರೆ ಟರ್ಫ್ ಮೈದಾನಲ್ಲಿ ಏಕಕಾಲದಲ್ಲಿ ಆರು ದಿನಗಳ ಕಾಲ ಲೀಗ್ ಮಾದರಿಯಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.ಜಿಲ್ಲೆಗೆ ಲಭಿಸಿರುವ ರಾಷ್ಟ್ರೀಯ ಹಾಕಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು, ಕ್ರೀಡಾ ಹಾಗೂ ಇನ್ನಿತರ ಸಂಘಟನೆಗಳು, ಶಿಕ್ಷಕರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಸಮುದಾಯ ಒಳಗೊಂಡಂತೆ ಸ್ವಾಗತ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳನ್ನು ರಚಿಸುವ ಕುರಿತು ನಿರ್ಣಯಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಎಂ.ಚಂದ್ರಕಾಂತ್ ಮಾತನಾಡಿ, ಕ್ರೀಡಾ ಜಿಲ್ಲೆ ಎನಿಸಿರುವ ಕೊಡಗು ಜಿಲ್ಲೆಯಲ್ಲಿ ರಾಷ್ಟ್ರೀಯ ಹಾಕಿ ಪಂದ್ಯಾವಳಿವನ್ನು ಸಂಘಟಿಸಲು ಲಭಿಸಿರುವ ಅವಕಾಶ ಬಳಸಿಕೊಂಡು ಉತ್ತಮ ಸಂಘಟನೆ ಮೂಲಕ ಹಾಕಿ ಕ್ರೀಡೆಯ ಹಿರಿಮೆಯನ್ನು ದೇಶದಲ್ಲಿ ಎತ್ತಿ ಹಿಡಿಯುವ ರೀತಿಯಲ್ಲಿ ಯಶಸ್ವಿಯಾಗಿ ಸಂಘಟಿಸಲು ನಾಗರಿಕರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ಹಾಕಿ ಟೂರ್ನಿ ಹಾಗೂ ಕ್ರೀಡೆಯ ತವರಾದ ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಸಂಘಟನೆಗೊಳ್ಳುತ್ತಿರುವ ಬಾಲಕಿಯರ ಹಾಕಿ ಟೂರ್ನಿಯ ಯಶಸ್ವಿ ಸಂಘಟನೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಹಾಗೂ ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಸ್ವಾಗತ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳ ರಚನೆ ಮೂಲಕ ಸಂಘಟಿಸುವ ಕುರಿತು ಸಲಹೆ ನೀಡಿದರು.ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್, ಟೂರ್ನಿಯ ಯಶಸ್ವಿ ಸಂಘಟನೆ, ಕ್ರೀಡಾಪಟುಗಳಿಗೆ ಉತ್ತಮ ಆತಿಥ್ಯ ವ್ಯವಸ್ಥೆ ಹಾಗೂ ವಿವಿಧ ಉಪ ಸಮಿತಿಗಳ ಜವಾಬ್ದಾರಿ ಹಂಚಿಕೆ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸುವ ಕುರಿತು ಮಾಹಿತಿ ನೀಡಿದರು.ಕೂಡುಮಂಗಳೂರು ಗ್ರಾ.ಪಂ.ಅಧ್ಯಕ್ಷ ಡಿ.ಭಾಸ್ಕರ್ ನಾಯಕ್ ಹಾಗೂ ಕೂಡಿಗೆ ಗ್ರಾ.ಪಂ.ಅಧ್ಯಕ್ಷ ಕೆ.ಟಿ.ಗಿರೀಶ್, ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರೂ ಆದ ಕ್ರೀಡಾ ಪಂದ್ಯಾವಳಿಯ ಸಹ ಸಂಚಾಲಕಬಿ.ಟಿ.ಪೂರ್ಣೇಶ್, ಕೂಡಿಗೆ ಸರ್ಕಾರಿ ಕ್ರೀಡಾಶಾಲೆಯ ಮುಖ್ಯೋಪಾಧ್ಯಾಯ ಬಿ.ಟಿ.ದೇವಕುಮಾರ್,ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಸಿಆರ್‌ಪಿ ಕೆ.ಶಾಂತಕುಮಾರ್, ಪಿಡಿಓ ಗಳಾದ ಎಂ.ಆರ್.ಸಂತೋಷ್, ಸಿ.ಎಸ್. ಮಂಜುಳಾ, ತಾಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವಿ.ಬಸಪ್ಪ, ಗ್ರಾ.ಪಂ.ಸದಸ್ಯರಾದ ಟಿ.ಪಿ.ಹಮೀದ್, ಫಿಲೋಮಿನಾ, ವಿವಿಧ ಸಂಘಟನೆಗಳ ಪ್ರಮುಖರಾದ ಪಳಂಗಪ್ಪ, ಎನ್.ಕೆ.ಮೋಹನ್ ಕುಮಾರ್, ಕೆ.ಕೆ.ನಾಗರಾಜಶೆಟ್ಟಿ, ಪೀಟರ್, ಎಂ.ಎನ್.ಮೂರ್ತಿ, ಸೋಮಶೇಖರ್, ರಘು, ಕೆ.ಕೆ.ನಟೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್, ರತೀಶ್, ಸುಂದರ್, ಮತ್ತಿತರರು ಇದ್ದರು.