ಕೂಡುಮಂಗಳೂರು: ಸಂವಿಧಾನ ಜಾಗೃತಿ ಜಾಥಾಕ್ಕೆ ಪೂರ್ಣಕುಂಭ ಸ್ವಾಗತ

| Published : Feb 09 2024, 01:45 AM IST / Updated: Feb 09 2024, 03:43 PM IST

ಕೂಡುಮಂಗಳೂರು: ಸಂವಿಧಾನ ಜಾಗೃತಿ ಜಾಥಾಕ್ಕೆ ಪೂರ್ಣಕುಂಭ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾ.ಪಂ. ಅಧ್ಯಕ್ಷ ಭಾಸ್ಕರ್ ನಾಯಕ್, ರಥದಲ್ಲಿ ಡಾ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸುವ ಮೂಲಕ ಸಂವಿಧಾನ ಜಾಗೃತಿ ರಥವನ್ನು ಸ್ವಾಗತಿಸಿದರು. ಕಳಶ ಹೊತ್ತ ಆಶಾ ಕಾರ್ಯಕರ್ತೆಯರು ರಥಕ್ಕೆ ಪೂರ್ಣಕುಂಭ ಸ್ವಾಗತ ನೀಡಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭಾರತೀಯ ಸಂವಿಧಾನದ ಪೀಠಿಕೆ ಮತ್ತು ಸಂವಿಧಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಸಂಬಂಧ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ಗ್ರಾ.ಪಂ. ಅಧ್ಯಕ್ಷ ಭಾಸ್ಕರ್ ನಾಯಕ್, ರಥದಲ್ಲಿ ಡಾ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸುವ ಮೂಲಕ ಸಂವಿಧಾನ ಜಾಗೃತಿ ರಥವನ್ನು ಸ್ವಾಗತಿಸಿದರು. 

ಕಳಶ ಹೊತ್ತ ಆಶಾ ಕಾರ್ಯಕರ್ತೆಯರು ರಥಕ್ಕೆ ಪೂರ್ಣಕುಂಭ ಸ್ವಾಗತ ನೀಡಿದರು.ಸಂವಿಧಾನ ಪೀಠಿಕೆಯ ಪ್ರಸ್ತಾವನೆಯನ್ನು ಓದಿ ಅದರ ಮಹತ್ವ ಕುರಿತು ಮಾತನಾಡಿದ ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ, ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ ಭಾರತ. 

ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ನಡೆಸಿ, ದೇಶಕ್ಕೆ ಹೊಂದುವಂತೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನವನ್ನು ಅರಿತುಕೊಳ್ಳುವುದರಿಂದ ದೇಶಕ್ಕೆ ಒಳಿತಾಗುತ್ತದೆ. ಯುವ ಪೀಳಿಗೆ ಸಂವಿಧಾನದ ಬಗ್ಗೆ ಜ್ಞಾನ ಹೊಂದುವುದು ಅತೀ ಅವಶ್ಯಕ ಎಂದರು.

ಗ್ರಾ.ಪಂ. ಅಧ್ಯಕ್ಷ ಡಿ.ಭಾಸ್ಕರ್ ನಾಯಕ್ ಮಾತನಾಡಿ, ಸಂವಿಧಾನವು ನಮ್ಮ ದೇಶದ ಸರ್ವೊಚ್ಛ ಕಾನೂನಾಗಿದ್ದು, ಇದರ ಅಡಿಯಲ್ಲಿ ಇತರೆ ಎಲ್ಲ ಕಾನೂನುಗಳು ಬರುತ್ತಿವೆ. 

ಸಂವಿಧಾನದ ಅಡಿಯಲ್ಲಿ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದರು.

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಸಂವಿಧಾನ ಪೀಠಿಕೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಜನ ಸಮುದಾಯಕ್ಕೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಜಾಗೃತಿ ಜಾಥಾಕ್ಕೆ ಎಲ್ಲೆಡೆ ಸಂಭ್ರಮದಿಂದ ಸ್ವಾಗತಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ನಾವೆಲ್ಲರೂ ಸಂವಿಧಾನವನ್ನು ಪಾಲಿಸುವ ಮೂಲಕ ರಾಷ್ಟ್ರದ ಸಮಗ್ರತೆ ಹಾಗೂ ಏಕತೆಯನ್ನು ಎತ್ತಿಹಿಡಿಯಬೇಕು ಎಂದರು.

ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಡಾ.ಬಸಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ, ಗ್ರಾ.ಪಂ. ಸದಸ್ಯರಾದ ಜೆ.ಫಿಲೋಮಿನಾ, ಖತಿಜಾ, ಈರಯ್ಯ, ಚಂದ್ರಶೇಖರ್, ಪಿಡಿಒ ಎಂ.ಆರ್.ಸಂತೋಷ್, ಸಿಬ್ಬಂದಿ ಎಂ.ಎಲ್.ಅವಿನಾಶ್, ಉಪನ್ಯಾಸಕರು, ವಿವಿಧ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ನಾಗರಿಕರು ಇದ್ದರು.

ಸಂವಿಧಾನ ಜಾಗೃತಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳು ಭಾಷಣ, ಹಾಡು, ಲಾವಣಿ ನಡೆಸಿಕೊಟ್ಟರು.ಸಂವಿಧಾನ ಜಾಗೃತಿಗೆ ಸಂಬಂಧಿಸಿದಂತೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಭಾರತವನ್ನು ಸದೃಢಗೊಳಿಸುವಲ್ಲಿ ಸಂವಿಧಾನ ಕುರಿತಂತೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.ಇದೇ ವೇಳೆ ಸಂವಿಧಾನದ ಮಹತ್ವ ಕುರಿತು ವಿಡಿಯೋ ಪ್ರದರ್ಶಿಸಲಾಯಿತು.

ಇದಕ್ಕೂ ಮೊದಲು ಕೂಡಿಗೆ ವೃತ್ತದಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನಕ್ಕೆ ತೆರಳಿದ ರಥದೊಂದಿಗೆ ಶಿಕ್ಷಕರು, ವಿದ್ಯಾರ್ಥಿಗಳು ಜಾಥಾ ನಡೆಸಿದರು.