ಸಾರಾಂಶ
ಸ್ಥಳೀಯ ಪಟ್ಟಣ ಪಂಚಾಯತಿಯನ್ನು ಪುರಸಭೆ ಮಾಡುವ ಕನಸಿದೆ ಎಂದು ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ ಹೇಳಿದರು.
ಪಪಂ ಬಜೆಟ್ ಪೂರ್ವಭಾವಿ ಸಾರ್ವಜನಿಕ ಸಭೆಯಲ್ಲಿ ಪಪಂ ಮುಖ್ಯಾಧಿಕಾರಿಕನ್ನಡಪ್ರಭ ವಾರ್ತೆ ಕುಕನೂರು
ಸ್ಥಳೀಯ ಪಟ್ಟಣ ಪಂಚಾಯತಿಯನ್ನು ಪುರಸಭೆ ಮಾಡುವ ಕನಸಿದೆ ಎಂದು ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ ಹೇಳಿದರು.ಪಟ್ಟಣದ ಪಪಂ ಆವರಣದಲ್ಲಿ ಜರುಗಿದ ಪಪಂ ಬಜೆಟ್ ಪೂರ್ವಭಾವಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕುಕನೂರು ಪಟ್ಟಣದ ಜನಸಂಖ್ಯೆ 30 ಸಾವಿರದ ಸಮೀಪದಲ್ಲಿದೆ. ಪಕ್ಕದ ದ್ಯಾಂಪೂರು, ಹರಿಶಂಕರಬಂಡಿ ಗ್ರಾಮಗಳನ್ನು ಕುಕನೂರು ಪಟ್ಟಣಕ್ಕೆ ಒಳಪಡಿಸಿಕೊಂಡು ಕುಕನೂರನ್ನು ಪುರಸಭೆ ಮಾಡುವ ಕನಸು ಕಂಡಿದ್ದೇವೆ ಎಂದರು.
ಪಟ್ಟಣದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಬಜೆಟ್ ನಿರ್ಮಿಸುತ್ತಿದ್ದು, ಸರ್ಕಾರದಿಂದ ₹10 ಕೋಟಿ ಅನುದಾನದ ನೀರೀಕ್ಷೆ ಹಾಗೂ ತೆರಿಗೆಗಳಿಂದ ₹80 ಲಕ್ಷದ ಬಜೆಟ್ ನಿರ್ಮಿಸುವ ತಯಾರಿ ನಡೆಯುತ್ತಿದೆ. ಶಾಲಾ ಆವರಣಗಳ ಅಭಿವೃದ್ಧಿ, ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಪಟ್ಟಣದ ಎಸ್.ಎಫ್.ಎಸ್ ಶಾಲೆಯಿಂದ ಸಂಗೋಳ್ಳಿ ರಾಯಣ್ಣ ರಸ್ತೆಯವರೆಗೂ ಜಿಗ್ ಜಾಗ್ ಮಾದರಿಯಲ್ಲಿ ಬೀದಿ ದೀಪ ಅಳವಡಿಸಲಾಗುವುದು. ಪಟ್ಟಣದ 835 ವಿದ್ಯುತ್ ಕಂಬಗಳಿಗೆ ನೂತನ ದೀಪ ಅಳವಡಿಕೆ ಕಾರ್ಯ ಮಾಡಲಾಗುವುದು. ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಅನುದಾನ ನೀಡಲಾಗುವುದು. ಕಸ ಸಂಗ್ರಹಣಕ್ಕಾಗಿ ನೂತನ 4 ವಾಹನ ಖರೀದಿ ಮಾಡಲಾಗುವುದು. ಪತ್ರಕರ್ತರಿಗೆ, ಪೌರಕಾರ್ಮಿಕರಿಗೆ ಭೂಮಿ ಸಿಕ್ಕರೆ ನಿವೇಶನ ಒದಗಿಸಲಾಗುವುದು. ಶಾಸಕ ಬಸವರಾಜ ರಾಯರಡ್ಡಿ ಅವರ ಆಸೆಯಂತೆ ಸ್ವೀಮ್ಮಿಂಗ್ ಫುಲ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಪಟ್ಟಣ ಬೆಳೆಯುತ್ತಿದ್ದು ಪುರಸಭೆ ಮಾಡುವ ಕನಸು ಇದೆ ಎಂದರು.ಸಾರ್ವಜನಿಕರಾದ ಮಲ್ಲಿಕಾರ್ಜುನ ಕೂಡ್ಲೂರು, ಲಕ್ಷ್ಮಣ ಕಾಳಿ, ವೀರಯ್ಯ ತೋಂಟದಾರ್ಯಮಠ, ಪಪಂ ಸದಸ್ಯ ಗುದ್ನೇಪ್ಪ ನೋಟಗಾರ ವಿವಿಧ ಕಾರ್ಯ ಕೈಗೊಳ್ಳುವ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು.
ಪಪಂ ಅಧ್ಯೆಕ್ಷೆ ಲಲಿತಮ್ಮ ಯಡಿಯಾಪೂರ, ಪಪಂ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್, ಸ್ಥಾಯಿ ಸಮಿತಿ ಅಧ್ಯಕ್ಷ ನೂರುದ್ದೀನಸಾಬ್ ಗುಡಿಹಿಂದಲ್, ಪಪಂ ಸಿಬ್ಬಂದಿ, ಸಾರ್ವಜನಿಕರಿದ್ದರು.