ಸಾರಾಂಶ
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗುರುವಾರ ಆರಂಭಗೊಂಡ ಕಿರುಷಷ್ಠಿ ಸಾಂಸ್ಕೃತಿಕ ವೈಭವವು ಕಲಾಸಕ್ತರ ವಿಶೇಷ ಮನ್ನಣೆಗೆ ಪಾತ್ರವಾಯಿತು. ಪ್ರಥಮ ದಿನ ಶ್ರೀ ಕ್ಷೇತ್ರದ ಕಿರುಷಷ್ಠಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವು ಕಲಾಸಕ್ತರಿಗೆ ಕಲಾ ರಸದೌತಣವನ್ನು ನೀಡಿತು.ಸಿತಾರ್ ವಾದನ: ಆರಂಭದಲ್ಲಿ ಅಂಕುಶ್ ಎನ್. ನಾಯಕ್ ಬಳಗದಿಂದ ಸಿತಾರ್ ವಾದನ ನಡೆಯಿತು. ಇವರಿಗೆ ತಬಲದಲ್ಲಿ ವಿದ್ವಾನ್ ಆದರ್ಶ ಶೆಣೈ ಹಾಗೂ ಪಕ್ವಾಜ್‌ನಲ್ಲಿ ವಿದ್ವಾನ್ ಶ್ರೀದತ್ ಪ್ರಭು ಸಹಕರಿಸಿದರು. ನಂತರ ವಿದ್ವಾನ್ ಹರಿಪ್ರಸಾದ್ ಸುಬ್ರಹ್ಮಣ್ಯಂ ಕೊಚ್ಚಿನ್ ಇವರಿಂದ ಕೊಳಲು ವಾದನ ನೆರವೇರಿತು. ವಯೋಲಿನ್‌ನಲ್ಲಿ ವಿದ್ವಾನ್ ಮಾಂಜೂರ್ ರಂಜಿತ್, ಮೃದಂಗದಲ್ಲಿ ವಿದ್ವಾನ್ ಡಾ.ಕೆ. ಜಯಕೃಷ್ಣನ್, ಘಟಂನಲ್ಲಿ ವಿದ್ವಾನ್ ಮಾಂಜೂರ್ ಉಣ್ಣಿಕೃಷ್ಣನ್ ಹಿಮ್ಮೇಳ ಸಾಥ್ ನೀಡಿದ್ದರು. ಸ್ವರ ರಾಗ ಮಾಧುರ್ಯ: ನಂತರ ಡ್ಯಾನ್ಸ್ ಬೀಟ್ಸ್ ಬೆಳ್ಳಾರೆಯ ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ, ಕೈಕಂಬ ಶಾಖೆಯ ವಿದ್ಯಾರ್ಥಿಗಳಿಂದ ಜನಪದೀಯ ಮತ್ತು ಭಕ್ತಿ ಪ್ರಧಾನವಾದ ನೃತ್ಯಗಳು ನಡೆಯಿತು. ಅನೇಕ ದಾಸರ ಪದಗಳಿಗೆ ಮತ್ತು ಕೀರ್ತನೆಗಳಿಗೆ ಪುಟ್ಟ ಪುಟಾಣಿಗಳು ಸೇರಿದಂತೆ ಯುವ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ನೃತ್ಯರೂಪಕ ಪ್ರದರ್ಶನಗೊಂಡಿತು. ಬಳಿಕ ಮನೋಜ್ ಕುಮಾರ್ ಪೂಕುನ್ನತ್ ಪೊಯಿನಾಚಿ ಇವರಿಂದ ಸ್ವರ ರಾಗಂ ಆರ್ಕೆಸ್ಟ್ರಾ ನಡೆಯಿತು.
ಪ್ರಸಾದ ನೀಡಿ ಗೌರವ: ಕಲಾವಿದರನ್ನು ಶಾಲು ಹೊದಿಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಈ ಸಂದರ್ಭ ಶ್ರೀ ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಪವನ್ ಎಂ.ಡಿ., ಅಚ್ಯುತ ಗೌಡ ಬಳ್ಪ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್ ಉಪಸ್ಥಿತರಿದ್ದರು. ಶ್ರೀ ದೇವಳದ ಕೆ.ಎಂ.ಗೋಪಿನಾಥ್ ನಂಬೀಶ, ರಾಜಲಕ್ಷ್ಮೀ ಶೆಟ್ಟಿಗಾರ್, ಶಿವಸುಬ್ರಹ್ಮಣ್ಯ ಭಟ್, ಮಹೇಶ್ ಕುಮಾರ್.ಎಸ್, ವಿಶ್ವನಾಥ್, ಕುಮಾರ ಕೆ.ಕೆ, ಯೋಗೀಶ್ ಎಂ. ವಿಟ್ಲ, ನಿತೀನ್ ನೂಚಿಲ, ಅಶೋಕ್ ಅತ್ಯಡ್ಕ, ಸದಾನಂದ ಕಾರ್ಜ, ಪವನ್‌ಕುಮಾರ್, ದೇವಿದಾಸ್ ಸಹಕರಿಸಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.ಕುಕ್ಕೆಯಲ್ಲಿ ಇಂದು: ಜ.೪ರಂದು ಶನಿವಾರ ಸಂಜೆ ೫ ಗಂಟೆಯಿಂದ ನೇಹಾ ರಕ್ಷಿತ್ ಮಂಗಳೂರು ಇವರಿಂದ ಭಾವ-ಭಕ್ತಿ ಸಂಚನ ನಡೆಯಲಿದೆ. ಬಳಿಕ ವಿದ್ವಾನ್ ವಿಠಲ ರಾಮಮೂರ್ತಿ ಚೈನ್ನೈ ಅವರಿಂದ ವಯೋಲಿನ್ ವಾದನ ನೆರವೇರಲಿದೆ. ವಯಲೀನ್ ವಿದ್ವಾನ್ ಶ್ರೀಹರಿ ವಿಠಲ್, ಮೃದಂಗ ವಿದ್ವಾನ್ ಬೆಂಗಳೂರು ಪ್ರವೀಣ್, ಘಟಂ ಡಾ.ವಿ. ಸುರೇಶ್ ಚೆನ್ನೈ ಸಹಕಾರ ನೀಡಲಿದ್ದಾರೆ.
ನಂತರ ವಿದ್ವಾನ್ ಹರಿಕೃಷ್ಣನ್ ಎರ್ನಾಕುಲಂ ಇವರಿಂದ ಕರ್ನಾಟಕ ಶಾಶ್ತ್ರೀಯ ಸಂಗೀತ ನೆರವೇರಲಿದೆ. ವಯೋಲಿನ್ ಆದರ್ಶ ಅಜಯ್ ಕುಮಾರ್, ಮೃದಂಗ ವಿದ್ವಾನ್ ಡಾ.ಕೆ. ಜಯಕೃಷ್ಣನ್, ಮೌರ್ಸಿಂಗ್ ವಿದ್ವಾನ್ ವೇಳಿನೇಲಿ ರಮೇಶ್ ಸಹಕಾರ ನೀಡಲಿದ್ದಾರೆ. ಬಳಿಕ ಶ್ರೀದೇವಿ ಮಹಿಳಾ ಯಕ್ಷ ತಂಡ ಪುತ್ತೂರು ಇವರಿಂದ ಮಾತೃ ದರ್ಶನ ಷಣ್ಮುಖ ವಿಜಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.