ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ಅಂಗವಾಗಿ ಬುಧವಾರ ಬ್ರಹ್ಮರಥೋತ್ಸವ ನೆರವೇರಿತು. ಭಕ್ತರ ಜಯಘೊಷದೊಂದಿಗೆ ಬುಧವಾರ ಬೆಳಗ್ಗೆ 7.29ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೂಢರಾದರು

ಸುಬ್ರಹ್ಮಣ್ಯ: ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ಅಂಗವಾಗಿ ಬುಧವಾರ ಬ್ರಹ್ಮರಥೋತ್ಸವ ನೆರವೇರಿತು. ಭಕ್ತರ ಜಯಘೊಷದೊಂದಿಗೆ ಬುಧವಾರ ಬೆಳಗ್ಗೆ 7.29ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೂಢರಾದರು.

ಶ್ರೀ ದೇವರ ಚಂಪಾಷಷ್ಠಿ ಮಹಾರಥೋತ್ಸವ

 ಬಳಿಕ ಶ್ರೀ ದೇವರ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಸಹಸ್ರಾರು ಭಕ್ತರ ಜಯಘೋಷದ ಪರಾಕಿನ ನಡುವೆ ಶ್ರೀ ದೇವರ ಬ್ರಹ್ಮರಥೋತ್ಸವ ಸುಸಂಪನ್ನವಾಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಉತ್ಸವದ ವೈದಿಕ ವಿದಿವಿಧಾನ ನೆರವೇರಿಸಿದರು.

ಅನೇಕ ಮುಖಂಡರ ಉಪಸ್ಥಿತಿ

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ,ಎಸ್‌ಪಿ ಡಾ.ಅರುಣ್ ಕುಮಾರ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಎಸ್.ಜೆ.ವೈ.ರಾಜ್, ಬ್ರಹ್ಮರಥ ಸೇವಾಕತೃ ಅಜಿತ್ ಶೆಟ್ಟಿ ಕಡಬ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರವಿಶಂಕರ ಶೆಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿ ಕಡಬ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಲ್ಲಿಕಾ ಪಕ್ಕಳ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.