ಕುಕ್ಕೆ ಸುಬ್ರಹ್ಮಣ್ಯ: ಜ.2ರಿಂದ ಕಿರುಷಷ್ಠಿ ಸಾಂಸ್ಕೃತಿಕ ವೈಭವ, ರಥೋತ್ಸವ

| Published : Dec 31 2024, 01:01 AM IST

ಕುಕ್ಕೆ ಸುಬ್ರಹ್ಮಣ್ಯ: ಜ.2ರಿಂದ ಕಿರುಷಷ್ಠಿ ಸಾಂಸ್ಕೃತಿಕ ವೈಭವ, ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.೨ ರಿಂದ ೫ ರ ತನಕ ಕಿರುಷಷ್ಠಿ ಮಹೋತ್ಸವ, ಧಾರ್ಮಿಕ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಜ.೫ರಂದು ಸಂಜೆ ೬.೩೦ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ ಮತ್ತು ಕುಕ್ಕೆ ಬೆಡಿ ನೆರವೇರಲಿದೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.೨ ರಿಂದ ೫ ರ ತನಕ ಕಿರುಷಷ್ಠಿ ಮಹೋತ್ಸವ, ಧಾರ್ಮಿಕ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಜ.೫ರಂದು ಸಂಜೆ ೬.೩೦ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ ಮತ್ತು ಕುಕ್ಕೆ ಬೆಡಿ ನೆರವೇರಲಿದೆ.

ಕಿರುಷಷ್ಠಿ ಸಾಂಸ್ಕೃತಿಕ ವೇದಿಕೆಯಲ್ಲಿ ಜ.೨ರಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಲ ಮತ್ತು ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ ಮುಖ್ಯಅತಿಥಿಗಳಾಗಿದ್ದಾರೆ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಮಾರಂಭದ ಬಳಿಕ ಅಂಕುಶ್‌ ಎನ್‌. ನಾಯಕ್ ಬಳಗದಿಂದ ಸೀತಾರ್ ವಾದನ ನಡೆಯಲಿದೆ. ನಂತರ ವಿದ್ವಾನ್ ಹರಿಪ್ರಸಾದ್ ಸುಬ್ರಹ್ಮಣ್ಯಂ ಕೊಚ್ಚಿನ್ ಇವರಿಂದ ಕೊಳಲು ವಾದನ ನೆರವೇರಲಿದೆ. ನಂತರ ಡ್ಯಾನ್ಸ್ ಬೀಟ್ಸ್ ಬೆಳ್ಳಾರೆ ತಂಡದಿಂದ ನೃತ್ಯ ಸಂಭ್ರಮ, ಮನೋಜ್ ಕುಮಾರ್ ಪೂಕುನ್ನತ್ ಪೊಯಿನಾಚಿ ಇವರಿಂದ ಸ್ವರ ರಾಗಂ ಆರ್ಕೆಸ್ಟ್ರಾ ನಡೆಯಲಿದೆ.

ಜ.೩ರಂದು ನಟರಾಜ್ ಎಂಟರ್‌ಟೇನರ್ಸ್‌ ಅವರಿಂದ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಸಂಜೆ ರಾತ್ರಿ ೭ ರಿಂದ ೧೦ ರ ತನಕ ನಡೆಯಲಿದೆ.ಈ ಮೊದಲು ಸಂಜೆ ೫ ರಿಂದ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇವರಿಂದ ನೃತ್ಯ ಸಂಭ್ರಮ, ಮೂಡುಬಿದಿರೆಯ ಶ್ರೀ ಆರಾಧನಾ ನೃತ್ಯ ಕೇಂದ್ರದ ಗುರು ವಿದುಷಿ ಸುಖದಾ ಬರ್ವೆ ಇವರ ಶಿಷ್ಯರಿಂದ ನೃತ್ಯ ಸಿಂಚನ ನೆರವೇರಲಿದೆ.

ಜ.೪ರಂದು ಸಂಜೆ ಗಂಟೆ ೫ರಿಂದ ನೇಹಾ ರಕ್ಷಿತ್ ಮಂಗಳೂರು ಇವರಿಂದ ಭಾವ-ಭಕ್ತಿ ಸಂಚನ ನಡೆಯಲಿದೆ. ಬಳಿಕ ವಿದ್ವಾನ್ ವಿಠಲ ರಾಮಮೂರ್ತಿ ಚೆನ್ನೈ ಇವರಿಂದ ವಯಲೀನ್ ವಾದನ ನೆರವೇರಲಿದೆ.

ಜ.೫ರಂದು ಸಂಜೆ ಕಿರುಷಷ್ಠಿ ರಥೋತ್ಸವ ನಡೆಯಲಿದೆ. ಅಂದು ೪.೩೦ರಿಂದ ವಿಶ್ವ ದಾಖಲೆ ಮಾಡಿದ ಯೋಗಪಟು ಗೌರಿತಾ ಕೆ.ಜಿ ಇವರಿಂದ ಯೋಗ ನೃತ್ಯ ನಡೆಯಲಿದೆ. ನಂತರ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯರಿಂದ ಸನಾತನ ನೃತ್ಯಾಂಜಲಿ ಪ್ರದರ್ಶಿತವಾಗಲಿದೆ. ನಂತರ ಅವನಿ ನಾಯಕ್ ಪುತ್ತೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನೆರವೇರಲಿದೆ.

...........................

ಚಂಪಾಷ್ಠಿಯಂದು ಉತ್ಸವಾದಿಗಳ ಮೂಲಕ ಶ್ರೀ ದೇವರ ಸೇವೆ ನೆರವೇರಿದರೆ ಕಿರುಷಷ್ಠಿ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಗವಂತನ ಆರಾಧನೆ ಮಾಡುವುದು ಇಲ್ಲಿನ ವಿಶೇಷ. ಶ್ರೇಷ್ಠ ಕಲಾವಿದರು ತಮ್ಮ ಪ್ರತಿಭೆಯನ್ನು ಈ ಕಾರ್ಯಕ್ರಮದಲ್ಲಿ ಸಾದರಪಡಿಸಲಿದ್ದಾರೆ.

-ಜುಬಿನ್ ಮೊಹಾಪಾತ್ರಾ, ಆಡಳಿತಾಧಿಕಾರಿ.

......................

ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಬೇಕಾದ ಸಿದ್ಧತೆಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ. ಧಾರ್ಮಿಕ ಉಪನ್ಯಾಸ, ಕೊಳಲು ವಾದನ, ವಯಲೀನ್ ವಾದನ, ನೃತ್ಯ, ಸಂಗೀತ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಭಕ್ತಿಗಾನ, ಯಕ್ಷಗಾನ, ಸೇರಿದಂತೆ ೪ ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

- ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿ.