ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿಯ ದಿನವಾದ ಶುಕ್ರವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವವು ಭಕ್ತಿ ಸಡಗರದಿಂದ ನೆರವೇರಿತು.

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿಯ ದಿನವಾದ ಶುಕ್ರವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವವು ಭಕ್ತಿ ಸಡಗರದಿಂದ ನೆರವೇರಿತು. ಸಹಸ್ರಾರು ಸಂಖ್ಯೆಯ ಭಕ್ತರ ಪರಾಕುಗಳೊಂದಿಗೆ ತಳಿರು, ತೋರಣ, ಸೀಯಾಳ, ಅಡಿಕೆ, ಬಾಳೆ, ಬಾಳೆಗೊನೆ ಮತ್ತು ವಿದ್ಯುತ್ ಅಲಂಕಾರದ ರಥದಲ್ಲಿ ಶ್ರೀ ದೇವರ ಉತ್ಸವ ನೆರವೇರಿತು. ರಥಾರೋಹಣದ ಬಳಿಕ ಶ್ರೀ ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ದೇವರಿಗೆ ಪೂಜೆ ನೆರವೇರಿಸಿದರು. ನಂತರ ಶ್ರೀ ದೇವಳದ ರಥಬೀದಿಯಲ್ಲಿ ಶ್ರದ್ಧಾ ಭಕ್ತಿಯಿಂದ ರಥೋತ್ಸವ ನೆರವೇರಿತು. ಬಳಿಕ ಸವಾರಿ ಮಂಟಪದ ಕಿರುಷಷ್ಠಿ ಕಟ್ಟೆಯಲ್ಲಿ ದೇವರಿಗೆ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಆಕರ್ಷಕ ಸುಡುಮದ್ದುಗಳು ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿತು. ಸಂಗೀತ ಪ್ರೀಯ ಷಣ್ಮುಖ ಕುಕ್ಕೆ ಸುಬ್ರಹ್ಮಣ್ಯನು ಸಂಗೀತ ಪ್ರಿಯನಾಗಿರುವುದರಿಂದ ರಥೋತ್ಸವದ ಬಳಿಕ ನಡೆದ ಒಳಾಂಗಣ ಉತ್ಸವದಲ್ಲಿ ಸಂಗೀತಮಯ ಉತ್ಸವದ ಸುತ್ತುಗಳು ನೆರವೇರಿತು. ಶ್ರೀಲಂಕಾ, ತಮಿಳುನಾಡು, ಕೇರಳ, ಮೈಸೂರು, ಶ್ರೀ ರಂಗಪಟ್ಟಣ ಮೊದಲಾದ ಪ್ರದೇಶಗಳ ಕಲಾವಿದರಿಂದ ಸ್ಯಾಕ್ಸೋಪೋನ್, ನಾದಸ್ವರ, ತವಿಲ್, ಬ್ಯಾಂಡ್ ಮೊದಲಾದ ಸಂಗೀತ ವಾದ್ಯಗಳ ಉತ್ಸವಗಳ ಸುತ್ತುಗಳು ಭಕ್ತಾಧಿಗಳನ್ನು ಭಾವಪರವಶವಾಗುವಂತೆ ಮಾಡಿತು. ಕೇರಳ ಶೈಲಿಯ ಚೆಂಡೆ ವಾದನದ ಕೂಡಾ ನಡೆಯಿತು. ಆರಂಭದಲ್ಲಿ ವಿಶೇಷವಾಗಿ ಶ್ರೀ ದೇವರಿಗೆ ಬೆಳ್ಳಿ ರಥೋತ್ಸವ ನೆರವೇರಿತು.ಅವಳಿ ಉತ್ಸವ: ಈ ದಿನ ಕಿರುಷಷ್ಠಿ ಉತ್ಸವದ ಸಂದರ್ಭ ಶ್ರೀ ದೇವರಿಗೆ ಅವಳಿ ಉತ್ಸವ ನಡೆಯುವುದು ವಿಶೇಷ.ಆರಂಭದಲ್ಲಿ ಕಿರುಷಷ್ಠಿ ರಥೋತ್ಸವದ ಬಳಿಕ ವಿವಿಧ ಸಂಗೀತ ಸುತ್ತುಗಳು ನೆರವೇರಿತು. ಬಳಿಕ ಮಾಮೂಲಿನಂತೆ ಶ್ರೀ ದೇವರ ರಾತ್ರಿ ಮಹಾಪೂಜೆ ನಡೆದು ನಂತರ ಪ್ರತಿನಿತ್ಯದಂತೆ ಶ್ರೀ ದೇವರ ಬಂಡಿ ಮತ್ತು ಪಾಲಕಿ ಉತ್ಸವ ಮತ್ತು ಸಂಗೀತ ಸುತ್ತುಗಳು ನೆರವೇರಿತು. ಅಲ್ಲದೆ ಒಳಾಂಗಣದಲ್ಲಿ ಶ್ರೀ ದೇವರಿಗೆ ಮಂಟಪ ಪೂಜೆ ನಡೆಯಿತು. ಈ ಸಂದರ್ಭ ಬಾರ್ಕೂರು ಮಹಾ ಸಂಸ್ಥಾನಂನ ಡಾ.ವಿಶ್ವ ಸಂತೋಷ ಭಾರತೀ ಸ್ವಾಮೀಜಿ, ಶಾಸಕಿ ಭಾಗೀರಥಿ ಮುರುಳ್ಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ಎಸ್. ಇಂಜಾಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರಾಜಗುರು ದ್ವಾರಕನಾಥ್ ಗುರೂಜಿ, ರವಿಶಂಕರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಎಸ್.ಜೆ.ವೈ.ರಾಜು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ ನೆಕ್ರಾಜೆ, ಅಜಿತ್ ಪಾಲೇರಿ,ಡಾ.ರಘು, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಸೌಮ್ಯ ಭರತ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಸತೀಶ್ ಕೂಜುಗೋಡು, ಪವನ್ ಎಂ.ಡಿ, ಅಚ್ಯುತ ಗೌಡ, ದೇವಳದ ಅಧೀಕ್ಷಕ ಕೆ.ಎಂ.ಗೋಪಿನಾಥ್ ನಂಬೀಶ, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ ಶ್ರೀ ದೇವಳದ ಸಿಬ್ಬಂದಿ ಮತ್ತು ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.