ಕಲಬುರಗಿ ನಗರ ಪೊಲೀಸ್‌ ಆಯುಕ್ತರಾಗಿ 2011ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದುವರೆಗೂ ಕಲಬುರಗಿ ಪೊಲೀಸ್‌ ಆಯುಕ್ತರಾಗಿದ್ದ ಡಾ. ಶರಣಪ್ಪ ಢಗೆ ಇವರನ್ನು ರೈಲ್ವೆ ಡಿಐಜಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಕಲಬುರಗಿ ಆಯುಕ್ತರಾಗಿ ನೇಮಕವಾಗುವ ಮುನ್ನ ಕಲದೀಪ್‌ ಕುಮಾರ್‌ ಜೈನ್‌ ಇವರು ಬೆಂಗಳೂರು ನಗರ ಜಂಟಿ ಪೊಲೀಸ್‌ ಕಮೀಶ್ನರ್‌ ಆಗಿದ್ದರು.

ಕನ್ನಡಪ್ರಭ ವಾರ್ತೆ ಕಲಬುರಗಿ

2024ರ ಆ. 22ರಂದು ಡಾ. ಶರಣಪ್ಪ ಢಗೆ ಕಲಬುರಗಿಗೆ ಆಯುಕ್ತರಾಗಿ ವರ್ಗವಾಗಿ ಬಂದಿದ್ದರು. ಅಂದಿನಿಂದ ಹತ್ತು ಹಲವು ದಿಟ್ಟ ಹಾಗೂ ಖಡಕ್‌ ಕ್ರಮಗಳೊಂದಿಗೆ ಜನಮನಕ್ಕೆ ತುಂಬ ಹತ್ತಿರವಾಗಿದ್ದ ಡಾ. ಢಗೆಯವರು ನಗರ ಪೊಲೀಸಿಂಗ್‌ನಲ್ಲಿ ಹಲವು ಮಹತ್ವದ ಬದಲಾವಣೆಗಳಿಗೂ ಕಾರಣರಾಗಿದ್ದರು.

ಕಲುರಗಿ ಅಡ್ಡಾದಿಡ್ಡಿ ಟ್ರಾಫಿಕ್‌ಗೆ ಮೂಗುದಾರ ಹಾಕುವ ದಿಟ್ಟ ಸಂಕಲ್ಪದಿಂದ ಕಾರ್ಯಪ್ರವೃತ್ತರಾಗಿದ್ದ ಡಾ. ಶರಣಪ್ಪ ಢಗೆ ಅವರು ಎಐ ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ ಕೆಮೆರಾಗಳು, ಎಐ ಆಧಾರಿತ ಸಂಚಾರ ಸುಗಮಗೊಳಿಸುವ ಸಂಕೇತ ದೀಪಗಳ ವ್ಯವಸ್ಥೆ, ಹಲವು ತಂತ್ರಜ್ಞಾನ ಆದಾರಿತ ಸವಲತ್ತುಗಳಿಗೂ ನಗರದಲ್ಲಿ ಕಾರಣರಾದವರು. ಇದರಿಂದಾಗಿ ಅದೆಷ್ಟೋ ಮಟ್ಟಿಗೆ ಸಂಚಾರ ಸಮಸ್ಯೆ ವಾಸಿಯಾಗಿತ್ತು.

ಜನಸ್ನೇಹಿ ಪೊಲೀಸಿಂಗ್‌ಗೂ ಹೆಚ್ಚಿನ ಒತ್ತು ನೀಡಿದ್ದ ಡಾ. ಶರಣಪ್ಪ ಅವರು, ನಗರ ಸಂಚಾರದಲ್ಲಿಯೂ ಭಾರಿ ಬದಲಾವಣೆ, ಸಂಚಾರ ಮೂಲ ಸೌಕರ್ಯ ವೃದ್ಧಿಗೂ ಶ್ರಮಿಸಿದ್ದರು. ಅವರ ಈ ಶ್ರಮ, ಯೋಜನೆಗಳ ಫಲವಾಗಿಯೇ ಕಲಬುರಗಿ ನಗರದಲ್ಲಿಂದೂ ಹಲವು ಪ್ರಮುಖ ವೃತ್ತ, ರಸ್ತೆಗಳಲ್ಲಿ ಸಂಚಾರ ಸಂಬಂಧಿ ಅನೇಕ ಮೂಲ ಸವಲತ್ತುಗಳು ಅಭಿವೃದ್ಧಿ ಕಂಡಿದ್ದವು.

ಕಲಬುರಗಿಯಲ್ಲಿ ವಿನೂತವಾಗಿ ಬಿಟ್ ಪೊಲೀಸ್, ಇ-ಚಲನ್ ಪಾವತಿ, ಮನೆ ಮನೆಗೆ ಪೊಲೀಸ್ ಭೇಟಿ, ಜನಸ್ನೇಹಿ ಆಡಳಿತ‌ ಹೀಗೆ ಅನೇಕ ಸುಧಾರಣಾ ಕ್ರಮ ಕೈಗೊಂಡು ಡಾ. ಶರಣಪ್ಪ ಜನನಿತರಾಗಿದ್ದನ್ನು ಜನ ಸ್ಮರಿಸುತ್ತಾರೆ.

ಡಾ. ಶರಣಪ್ಪ ಢಗೆ ಮೂಲತಃ ಕಲಬುರಗಿ ಜಿಲ್ಲೆಯ ಆಳಂದದ ಖಜೂರಿ ಗ್ರಾಮದವರಾಗಿದ್ದರು. ಇದೇ ಕಾರಣಕ್ಕೆ ಕಲಬುರಗಿ ಜನತೆ ಅವರನ್ನು ತಮ್ಮ ಮನೆ ಮಗನ ರೀತಿ ಸ್ವಾಗತಿಸಿ ಸಹಕರಿಸಿದ್ದರಿಂದ ಅವರು ಇಲ್ಲಿನ ಪೊಲೀಸಿಂಗ್‌ಗೆ ಹೊಸ ರೂಪ ಕೊಡುವಲ್ಲಿ ಯಶ ಕಂಡರು ಎನ್ನಬಹುದು.

ಹೊಸತಾಗಿ ಕಲಬುರಗಿ ನಗರಕ್ಕೆ ಆಗಮಿಸುತ್ತಿರುವ ಕುಲದೀಪ್ ಕುಮಾರ್ ಜೈನ್ ಅವರು ಇಲ್ಲಿ ಉತ್ತಮ ಪೊಲೀಸಿಂಗ್‌ ವ್ಯವಸ್ಥೆ ರೂಪಿಸುವ ಮೂಲಕ ಜನಮನ ಗೆಲ್ಲುವರೆ? ಎಂಬುದನ್ನು ಕಾದು ನೋಡಬೇಕಿದೆ.

ಕಲಬುರಗಿ ರಾಜ್ಯದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತವರು ಜಿಲ್ಲೆ, ಕಲಬುರಗಿ ನಗರದಲ್ಲಿ ಪೊಲೀಸ್‌ ಕೆಲಸ ಇಡೀ ರಾಜ್ಯವೇ ಗಮನವಿಟ್ಟು ನೋಡುತ್ತಿರುವ ಈ ಸಂದರ್ಭದಲ್ಲಿ ಜೈನ್‌ ಅವರು ಇಲ್ಲಿಗೆ ನೂತನ ಕಮಿಶ್ನರ್‌ ಆಗಿ ಬಂದಿದ್ದಾರೆ. ಪೊಲೀಸಿಂಗ್‌ ಇನ್ನಷ್ಟು ಸುದಾರಣೆ ಕಾಣಲಿ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ.