ಕಲಬುರಗಿ ನಗರದಲ್ಲಿ ಇದೇ ನ. 20ರ ಶುಕ್ರವಾರ ಮುಖ್ಯ ರಸ್ತೆಯಲ್ಲಿರುವ ಪಂಡಿತ ರಂಗ ಮಂದಿರದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಸಾರ್ವಜನಿಕವಾಗಿ ಅದ್ಧೂರಿಯಾಗಿ ಆಚರಿಸಲು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟ ಮುಂದಾಗಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ನಗರದಲ್ಲಿ ಇದೇ ನ. 20ರ ಶುಕ್ರವಾರ ಮುಖ್ಯ ರಸ್ತೆಯಲ್ಲಿರುವ ಪಂಡಿತ ರಂಗ ಮಂದಿರದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಸಾರ್ವಜನಿಕವಾಗಿ ಅದ್ಧೂರಿಯಾಗಿ ಆಚರಿಸಲು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟ ಮುಂದಾಗಿದೆ.ಮೈಸೂರು ಹುಲಿ ಎಂದೇ ಹೆಸರಾಗಿದ್ದ ಟಿಪ್ಪು ಸುಲ್ತಾನ್ ಜನ್ಮದಿನೋತ್ಸವ ನಿಮಿತ್ತ ಈ ಉತ್ಸವ ಆಯೋಜಿಸಲಾಗುತ್ತಿದ್ದು, ಟಿಪ್ಪು ಕುರಿತಂತೆ ಸಮಾಜದಲ್ಲಿ ಹರಡುತ್ತಿರುವ ತಪ್ಪು ಕಲ್ಪನೆಗಳು, ತಪ್ಪು ವಿಚಾರಗಳಿಗೆಲ್ಲದಕ್ಕೂ ಉತ್ತರ ಹೇಳುವ ಪ್ರಯತ್ನ ಇದಾಗಿದೆ ಎಂದು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ನ್ಯಾಯವಾದಿ ಹಣಮಂತ ಯಳಸಂಗಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ, ನೀರಾವರಿ, ಆರ್ಥಿಕತೆ, ಆಡಳಿತ ಸೇರಿದಂತೆ ಹಲವು ರಂಗಗಳಲ್ಲಿ ಟಿಪ್ಪು ಕೊಡುಗೆ ಅಪಾರ, ಇವರದ್ದು ಸಾಮ್ರಾಜ್ಯ ವಿಸ್ತರಣೆಯೇ ಗುರಿಯಾಗಿರಲಿಲ್ಲ. ಜನಮುಖಿ ಆಡಳಿತ ನೀಡಿದ್ದರು. ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ಆದರೆ ಇವರನ್ನು ಹಿಂದೂ ವಿರೋಧಿ, ಹಿಂದುಗಳ ಹತ್ಯೆ ಮಾಡಿದ್ದಾರೆಂದು ಅನೇಕರು ತಪ್ಪು ವಿಚಾರಗಳನ್ನು ಹರಡುತ್ತಿದ್ದಾರೆ. ಇದಕ್ಕೆಲ್ಲ ಇತಿಹಾಸದ ಪುರಾವೆಗಳ ಮೂಲಕ ಉತ್ತರ ಹೇಳುವುದೇ ಉತ್ಸವದ ಗುರಿ ಎಂದು ಯಳಸಂಗಿ ಹೇಳಿದರು.ಇತಿಹಾಸಕಾರರು, ಸಂಶೋಧಕರಾದ ಪ್ರೊ. ಶಂಸೂನ್ ಇಸ್ಲಾಂ, ರಾಂ ಕುರಿಯನ್, ಟಿಪ್ಪು ವಂಶಜರು ಸೇರಿದಂತೆ ಅನೇಕರನ್ನು ಉತ್ಸವಕ್ಕೆ ಆಹ್ವಾನಿಸಲಾಗುತ್ತಿದ್ದು, ಅವರೆಲ್ಲರೂ ನಾಡಿಗೆ ಟಿಪ್ಪು ನೀಡಿದ ಕೊಡುಗೆ ಮೇಲೆ ಬೆಳಕು ಚೆಲ್ಲಲಿದ್ದಾರೆ. ಕೆಆರ್ಎಸ್ಗೂ ಟಿಪ್ಪು ನೀಲನಕಾಶೆ ಹಾಕಿದ್ದನ್ನು ಸ್ಮರಿಸಿದ ಯಳಸಂಗಿ ಈ ಬಗ್ಗೆಯೂ ಸಮಾರಂಭದಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಉತ್ತರಿಸಿದರು.
ಅಲ್ಪಸಂಖ್ಯಾತರಲ್ಲೇ ಅನೇಕ ಸಾಧಕರಿರುವಾಗ ವಿವಾದದ ವಸ್ತುವಾಗಿರುವ ಟಿಪ್ಪು ಜಯಂತಿಯನ್ನೇ ಯಾಕೆ ಮಾಡುತ್ತೀರಿ? ಅನೇಕ ಉತ್ತಮ ಕೆಲಸ ಮಾಡಿದ ಹೈದ್ರಾಬಾದ್ ನಿಜಾಂ ಅವರ ಜಯಂತಿ ಮಾಡಬಹುದಲ್ಲ ಎಂದು ಪತ್ರಕರ್ತರು ಗಮನ ಸೆಳೆದ ಪ್ರಶ್ನೆಗೆ ಸ್ಪಂದಿಸಿದ ಯಳಸಂಗಿ, ಹೈದ್ರಾಬಾದ್ ನಿಜಾಮನ ಸೇನಾನಾಯಕ ರಜಾಕರ ಕ್ರೂರಿಯಾಗಿದ್ದ. ನಿಜಾಮ ಬ್ರಿಟೀಷರಿಗೆ ಶರಣಾಗಿದ್ದ, ಟಿಪ್ಪು ಬ್ರಿಟೀಷರಿಗೆ ಸೆಡ್ಡು ಹೊಡೆದಿದ್ದ. ಹೀಗಾಗಿ ನಾವು ಟಿಪ್ಪು ಜಯಂತಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆಂದರು.ಡಾ. ಫಾರೂಕ್ ಮಣ್ಣೂರ, ಪವನ ಗೌಡ, ಅಮೀನ್ ನಿಂಬಾಳಕರ್, ದಲಿತ ಸೇನೆ ವಿದ್ಯಾರ್ಥಿ ಸಂಘಟನೆಯ ಕಪೀಲ್ ವಾಲಿ, ಸುಶೀಲ್ ಶಿಂಧೆ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.
ಟಿಪ್ಪುವನ್ನು ರಾಜಕೀಯ ದಾಳವಾಗಿಸಿಕೊಂಡ ಬಿಜೆಪಿ, ಕಾಂಗ್ರೆಸ್: ಹಿಂದಿನ ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಕೊಡಲಿಲ್ಲ. ಕಾಂಗ್ರೆಸ್ ಸರ್ಕಾರವೂ ಜಯಂತಿ ಆಚರಣೆಗೆ ಅವಕಾಶ ನೀಡಿರಲಿಲ್ಲ. ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಇದೇ ವಿಷಯವನ್ನು ವಿವಿಧ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಲು ಬಳಸುತ್ತಿವೆ, ಇದು ಖಂಡನೀಯ ವಿಚಾರ. ನಾವು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಂಘಟನೆಗಳವರು ಒಟ್ಟಿಗೆ ಸೇರಿಕೊಂಡು ಟಿಪ್ಪು ಜಯಂತಿಗೆ ಮುಂದಾಗಿದ್ದೇವೆ. ಟಿಪ್ಪು ಕುರಿತಾದ ತಪ್ಪು ಅಭಿಪ್ರಾಯಗಳನ್ನು ತೊಡೆದು ಹಾಕುವುದು ನಮ್ಮ ಉದ್ದೇಶ. ಬಿಜೆಪಿ, ಕಾಂಗ್ರೆಸ್ ಟಿಪ್ಪು ಜಯಂತಿ ವಿಚಾರದಲ್ಲಿ ರಾಜಕೀಯ ಲಾಭ ಪಡೆಯುವಲ್ಲಿ ಹವಣಿಸುತ್ತಿವೆ ಎಂದು ಹಣಮಂತ ಯಳಸಂಗಿ ವಿಷಾದಿಸಿದರು.