ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಣಂಬೂರು ಕೆಐಒಸಿಎಲ್‌ನಿಂದ (ಕೂಳೂರಿನಿಂದ) ಬೈಕಂಪಾಡಿವರೆಗೆ ಸುಮಾರು ೪ ಕಿ.ಮೀ. ಉದ್ದ ಎಲಿವೇಟೆಡ್ ಹೆದ್ದಾರಿ ನಿರ್ಮಾಣವಾಗಲಿದ್ದು, ಡಿಪಿಆರ್ ಹಂತದಲ್ಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ನವಮಂಗಳೂರು ಬಂದರು ಪ್ರಾಧಿಕಾರದ ವತಿಯಿಂದ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಮುಂದಿನ ಹಂತದಲ್ಲಿ ಬಿ.ಸಿ. ರೋಡ್- ಮುಕ್ಕ ನಡುವೆ ಈಗ ಇರುವ ಚತುಷ್ಪಥ ರಸ್ತೆಯನ್ನು 6 ಪಥಕ್ಕೆ ವಿಸ್ತರಿಸಲಾಗುವುದು. ನಗರ ಪ್ರದೇಶಗಳಲ್ಲಿ ಈ ಹೆದ್ದಾರಿಯನ್ನು ಎಲಿವೇಟೆಡ್ ಹೈವೇ ಆಗಿ ಅಭಿವೃದ್ಧಿಪಡಿಸಿದರೆ, ಉಳಿದೆಡೆ ಅಗಲೀಕರಣ ಮಾಡಲಾಗುವುದು ಎಂದು ವಿವರಿಸಿದರು.ಭೂಸ್ವಾಧೀನ ಸಮಸ್ಯೆ ಇತ್ಯರ್ಥ: ಬಿಕರ್ನಕಟ್ಟೆ- ಸಾಣೂರು ನಡುವಿನ ಹೆದ್ದಾರಿ ಕಾಮಗಾರಿ ಶೇ.30ರಷ್ಟು ಮುಗಿದಿದೆ. ಬಿಕರ್ನಕಟ್ಟೆಯ ಒಂದು ಗ್ರಾಮದ ಭೂಸ್ವಾಧೀನ ಸಮಸ್ಯೆ ಹೊರತುಪಡಿಸಿದರೆ ಉಳಿದ ಕಡೆಯ ಸಮಸ್ಯೆ ಮುಗಿದಿದೆ. ಕುಡುಪು ದೇವಾಲಯದವರೆಗೆ ಕಾಮಗಾರಿ ನಡೆಯುತ್ತಿದೆ ಎಂದು ನಳಿನ್ ಕುಮಾರ್ ಹೇಳಿದರು.ಬಿ.ಸಿ.ರೋಡ್- ಅಡ್ಡಹೊಳೆ ಹೆದ್ದಾರಿ: ಬಿ.ಸಿ. ರೋಡ್- ಅಡ್ಡಹೊಳೆ ನಡುವಿನ ಹೆದ್ದಾರಿ ಕಾಮಗಾರಿಯಲ್ಲಿ ಬಿ.ಸಿ.ರೋಡ್- ಪೆರಿಯಶಾಂತಿ ಮಧ್ಯೆಯ 48 ಕಿ.ಮೀ. ಉದ್ದದ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಕಾಮಗಾರಿಯ ಶೇ.40ರಷ್ಟು ಮುಗಿದಿದೆ. ಕಲ್ಲಡ್ಕ ಮೇಲ್ಸೇತುವೆ, ಪಾಣೆಮಂಗಳೂರು ಹಾಗೂ ಉಪ್ಪಿನಂಗಡಿ ಸೇತುವೆ ಕಾಮಗಾರಿಗೆ ಸ್ವಲ್ಪ ಸಮಯ ಹಿಡಿಯಿತು. ಉಳಿದಂತೆ ಪೆರಿಯಶಾಂತಿ- ಅಡ್ಡಹೊಳೆಯ 15 ಕಿ.ಮೀ. ರಸ್ತೆಯ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು.ಚಾರ್ಮಾಡಿ ರಸ್ತೆ: ಬಿ.ಸಿ.ರೋಡ್ ಪೂಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ಪೂಂಜಾಲಕಟ್ಟೆ- ಚಾರ್ಮಾಡಿ ಕಾಮಗಾರಿ ಶೇ.20ರಷ್ಟು ಮುಗಿದಿದ್ದು, ಪ್ರಗತಿಯಲ್ಲಿದೆ. ಚಾರ್ಮಾಡಿ ಘಾಟ್ ಅಗಲೀಕರಣಕ್ಕೆ ಶಿಲಾನ್ಯಾಸ ಆಗಿದ್ದು, ಮುಂದಿನ ಹಂತದಲ್ಲಿ ಆ ಕಾಮಗಾರಿಯೂ ನಡೆಯಲಿದೆ ಎಂದು ವಿವರಿಸಿದರು.ನಂತೂರು ಫ್ಲೈಓವರ್: ನಂತೂರು ಹಾಗೂ ಕೆಪಿಟಿ ಮೇಲ್ಸೇತುವೆ ಕಾಮಗಾರಿಗಳಿಗೆ ಟೆಂಡರ್ ಆಗಿದೆ. ಆದರೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ, ಅದು ತೆರವಾದ ಕೂಡಲೆ ಕಾಮಗಾರಿ ಶುರುವಾಗಲಿದೆ ಎಂದು ನಳಿನ್ ಕುಮಾರ್ ತಿಳಿಸಿದರು.