ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ವತಿಯಿಂದ ಮಂಚೇಗೌಡನ ಕೊಪ್ಪಲಿನ ಕಲೆಮನೆ ಸಭಾಂಗಣದಲ್ಲಿ 50ನೇ ಅಂತಾರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವಕ್ಕೆ ಶನಿವಾರ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಚಾಲನೆ ನೀಡಿದರು.ನಂತರ ಶ್ರೀಗಳು ಮಾತನಾಡಿ, ಸಂಗೀತ, ನೃತ್ಯ, ಸಾಹಿತ್ಯ ಒಂದಕ್ಕೊಂದು ಮಿಳಿತವಾಗಿರುತ್ತದೆ. ಈ ಪ್ರಕಾರಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದರು.
ಡಾ.ಕೆ. ಕುಮಾರ್ ಅವರು ಕಳೆದ ಮೂರು ದಶಕಗಳಿಗೂ ಮಿಗಿಲಾಗಿ ನೃತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಅಪಾರ ಸಾಧನೆ ಮಾಡಿದ್ದಾರೆ. ಜೊತೆಗೆ ಕೇಂದ್ರವನ್ನು ಸ್ಥಾಪಿಸಿ, ನೂರಾರು ಮಂದಿಗೆ ನೃತ್ಯ ತರಬೇತಿಯನ್ನು ನೀಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ
ಕಾ. ತ. ಚಿಕ್ಕಣ್ಣ- ಸಾಹಿತ್ಯ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್- ಜಾನಪದ, ಕೊಯಮತ್ತೂರಿನ ಪಳನಿಯಪ್ಪನ್ ಪಿಳ್ಳೈ- ನೃತ್ಯ, ಬೆಂಗಳೂರಿನ ಸಂಸ್ಕೃತಿ ದ ಟೆಂಪಲ್ ಆರ್ಟ್ ಸಂಸ್ಥಾಪಕಸತ್ಯನಾರಾಯಣ ರಾಜು- ನೃತ್ಯ, ಜೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಸುಗಮ ಸಂಗೀತ ಗಾಯಕ ಪ್ರೊ. ಎಸ್ ಮಲ್ಲಣ್ಣ- ಸುಗಮ ಸಂಗೀತ, ಬೆಂಗಳೂರಿನ ರಸಿಕ ಡ್ಯಾನ್ಸ್ ಅಕಾಡೆಮಿ ಸಂಸ್ಥಾಪಕೀಇ ಮಂಜುಳಾ ವಿಶ್ವನಾಥ್- ನೃತ್ಯ.
ಬೆಂಗಳೂರಿನ ಶಿವಶಕ್ತಿ ನಾಟ್ಯ ಶಾಲೆಯ ಸಂಸ್ಥಾಪಕಿ ಶ್ರದ್ಧಾ ಶಿವಪ್ರಕಾಶ್- ನೃತ್ಯ ಅವರಿಗೆ ಕಲೆಮನೆ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸನ್ಮಾನಿತರ ಪರವಾಗಿ ಕಾ.ತ. ಚಿಕ್ಕಣ್ಣ, ಗೊಲ್ಲಹಳ್ಳಿ ಶಿವಪ್ರಸಾದ್, ಸತ್ಯನಾರಾಯಣರಾಜು ಮಾತನಾಡಿ, ಡಾ.ಕೆ. ಕುಮಾರ್ ಅವರ ಪರಿಶ್ರಮವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಕಲೆಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.ಕೇಂದ್ರದ ಸಂಸ್ಥಾಪಕ ಡಾ.ಕೆ. ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, 2021 ರ ಸೆಪ್ಟಂಬರ್ನಲ್ಲಿ ಪ್ರಾರಂಭವಾದ ಕಲೆಮನೆ ಉತ್ಸವವು ಸತತವಾಗಿ ನಡೆಯುತ್ತಾ 50 ತಿಂಗಳನ್ನು ಪೂರೈಸಿದೆ.ದೇಶ- ವಿದೇಶಗಳ ಒಂಭತ್ತು ಸಾವಿರ ಮಂದಿ ಪಾಲ್ಗೊಂಡಿದ್ದಾರೆ. ಸುಮಾರು 300 ಸಾಧಕರನ್ನು ಗುರುತಿಸಿ, ಗೌರವಿಸಲಾಗಿದೆ. ಸಂಗೀತ, ನೃತ್ಯ ಕಾರ್ಯಕ್ರಮಗಳು, ಸ್ಪರ್ಧೆಗಳು, ಕಾರ್ಯಾಗಾರಗಳು, ಉಪನ್ಯಾಸಗಳನ್ನು ನಡೆಸಲಾಗಿದೆ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿದ್ದರು. ಕೇಂದ್ರದ ಅಧ್ಯಕ್ಷೆ ಡಾ.ಜಿ. ಮಾಲತಿ, ಖಜಾಂಚಿ ಕೆ.ಎಂ. ಲೇಖಾ, ಜಂಟಿ ಕಾರ್ಯದರ್ಶಿ ಕೆ.ಎಂ. ನಿಧಿ, ಆನಂದ್ ಮೊದಲಾದವರು ಇದ್ದರು.ನಂತರ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ, ಪಳನಿಯಪ್ಪನ್ ಪಿಳ್ಳೈ ಮತ್ತು ಶಿಷ್ಯರಿಂದ ಭರತನಾಟ್ಯ, ಮಂಜುಳಾ ವಿಶ್ವನಾಥ್ ಮತ್ತು ಶಿಷ್ಯರಿಂದ ಭರತನಾಟ್ಯ, ಶ್ರದ್ಧಾ ಶಿವಪ್ರಕಾಶ್ ಶಿಷ್ಯರಿಂದ ಭರತನಾಟ್ಯ ಪ್ರದರ್ಶಿಸಿದರು. ಡಾ.ಕೆ. ಕುಮಾರ್ ಅವರು ಕೂಡ ಭರತನಾಟ್ಯ ಪ್ರದರ್ಶನ ನೀಡಿದರು.