ಸಾರಾಂಶ
‘ಕುಮಾರವ್ಯಾಸ ಜನಸಾಮಾನ್ಯರ ಕವಿ । ಯಗಟಿಯಲ್ಲಿ ಕುಮಾರವ್ಯಾಸ ಜಯಂತಿ
ಕನ್ನಡಪ್ರಭ ವಾರ್ತೆ, ಕಡೂರುಜನಸಾಮಾನ್ಯರಿಗೆ ಅರ್ಥವಾಗುವಂತೆ ನಾಡಿನ ಭಾಷೆಯಲ್ಲಿ ಮಹಾಭಾರತವನ್ನು ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾ ಮಂಜರಿಯನ್ನು ನಿರರ್ಗಳತೆಯಿಂದ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಹೇಳಿದರು.
ತಾಲೂಕಿನ ಯಗಟಿ ಗ್ರಾಮದಲ್ಲಿ ಭಾನುವಾರ ಗದುಗಿನ ವೀರನಾರಾಯಣ ಸ್ವಾಮಿ ದೇವಸ್ಥಾನ ಟ್ರಸ್ಟ್ ನಿಂದ ಏರ್ಪಡಿಸಿದ್ದ ಕುಮಾರವ್ಯಾಸ ಜಯಂತಿಯಲ್ಲಿ ಮಾತನಾಡಿದರು. ಮಹಾಭಾರತ ಮತ್ತು ರಾಮಾಯಣ ಎರಡೂ ಮಹಾಕಾವ್ಯಗಳು ಭಾರತೀಯ ಜನಜೀವನ ಪಾಲಿಗೆ ಮಾರ್ಗದರ್ಶಕ ಗ್ರಂಥಗಳಾಗಿ ಮಹೋನ್ನತ ಪಾತ್ರವಹಿಸಿವೆ.ಮಹಾಭಾರತವನ್ನು ಅನೇಕ ಭಾಷೆಗಳಲ್ಲಿ ಬಹಳಷ್ಟು ಕವಿಗಳು ತಮ್ಮದೇ ದೃಷ್ಟಿಕೋನದಡಿ ಕಾವ್ಯವಾಗಿ ರಚಿಸಿದ್ದಾರೆ. ಅದರಲ್ಲೂ ಕನ್ನಡಿಗ ಕುಮಾರವ್ಯಾಸನ ವರ್ಣನಾ ಶೈಲಿ ಮನನೀಯವಾಗಿದೆ. ಕುಮಾರವ್ಯಾಸನ ವಂಶಸ್ಥರು ನಮ್ಮ ತಾಲೂಕಿನಲ್ಲಿ ನೆಲೆಸಿ ಪ್ರತಿ ವರ್ಷ ಜಯಂತಿ ಹಮ್ಮಿಕೊಂಡು ಕಾವ್ಯದ ಮಹತ್ವ ಸಾರುತ್ತಿರುವುದು ಶ್ಲಾಘನೀಯ ಎಂದರು.ಕುಮಾರವ್ಯಾಸನ ಕಥಾ ಮಂಜರಿಯಲ್ಲಿ ಮಾನವ ಸಹಜ ಗುಣ ದೋಷಗಳಿಂದ ಕೂಡಿದ ಪಾತ್ರಗಳು ಜನಸಾಮಾನ್ಯರಿಗೆ ಹತ್ತಿರವಾಗಿದ್ದವು. ಮಾನವೀಯ ಮೌಲ್ಯಗಳು ಅಡಕವಾಗಿರುವ ಕಾವ್ಯದಲ್ಲಿ ಶ್ರೀಕೃಷ್ಣನೇ ನಾಯಕ. ಕಾವ್ಯದ ಮೂಲಕ ಯುದ್ಧ ಪಾತ್ರಗಳ ನಿರ್ವಹಣೆಯಲ್ಲಿ ಪಾಲ್ಗೊಳ್ಳುವ ಪಾತ್ರಗಳ ಸನ್ನಿವೇಶದ ಚಿತ್ರಣವನ್ನು ಆತ ಕಟ್ಟಿಕೊಡುವ ಪರಿ ಅನನ್ಯ. ಧರ್ಮ ಸಂಸ್ಥಾಪನೆಯೇ ಇದರ ನಾಯಕನ ಉದ್ದೇಶವಾಗಿದೆ ಎಂದರು.ಮಾಜಿ ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ನಮ್ಮ ಪೂರ್ವಿಕ ಮಹಾಕವಿ ಕುಮಾರವ್ಯಾಸ ಬರೆದ ಕಾವ್ಯಕ್ಕೆ 575 ವರ್ಷ ಗಳು ಸಂದಿವೆ. ಇದರ ಆಚರಣೆ ಜೊತೆಗೆ ಭಾರತ ಗಣರಾಜ್ಯವಾಗಿ 76 ವರ್ಷ ಸಂದಿರುವುದು ಯೋಗಾಯೋಗವೇ ಆಗಿದೆ. ಜಗತ್ತಿನಲ್ಲಿ ಯಾವುದೂ ಹೊಸತಿಲ್ಲ. ಬದುಕಿನ ಸಮಗ್ರ ಚಿತ್ರಣದ ಸಾರಾಂಶ ಸಾರುವ ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿ ಜಗತ್ತಿನ ಎಲ್ಲ ವಿಷಯಗಳನ್ನು ಒಳಗೊಂಡ ಕಾವ್ಯದ ಅಮೃತಸುಧೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಟ್ರಸ್ಟ್ ಅಧ್ಯಕ್ಷ ಅನಂತರಾಮಯ್ಯ, ಕಾರ್ಯದರ್ಶಿ ವೈ.ಟಿ. ರಮೇಶ್, ವೈ.ಎಸ್. ರವಿಪ್ರಕಾಶ್, ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಜಿಗಣೇಹಳ್ಳಿ ನೀಲಕಂಠಪ್ಪ, ಬಿದರೆ ಜಗದೀಶ್, ಕಂಸಾಗರ ರೇವಣ್ಣ, ಚೇತನ್ ಕೆಂಪರಾಜ್ ಮತ್ತಿತರಿದ್ದರು.-- ಬಾಕ್ಸ್ ಸುದ್ದಿ---ನಡುಗನ್ನಡ ಕಾವ್ಯಲೋಕದಲ್ಲಿ ಅತ್ಯಂತ ವಿಶಿಷ್ಟ ಸ್ಥಾನಕುಮಾರವ್ಯಾಸನ ಕಾವ್ಯ ನಡುಗನ್ನಡ ಕಾವ್ಯಲೋಕದಲ್ಲಿ ಅತ್ಯಂತ ವಿಶಿಷ್ಟ ಸ್ಥಾನ ಪಡೆದಿದೆ ಎಂದು ಗಮಕಿ, ವ್ಯಾಖ್ಯಾನಕಾರ ಡಾ.ಎ.ವಿ ಪ್ರಸನ್ನ ತಿಳಿಸಿದರು.ಕರ್ಣಾಟ ಭಾರತ ಕಥಾ ಮಂಜರಿ ಕರ್ಣ ಪರ್ವದ ಐದನೇ ಸಂಧಿ ದುರ್ಯೋಧನ ಮತ್ತು ಶಲ್ಯನ ನಡುವಿನ ಕುರುಕ್ಷೇತ್ರ ಯುದ್ಧದ 11ನೇ ದಿನದ ಪ್ರಸಂಗಗಳ ಗಮಕ ವಾಚನ ವ್ಯಾಖ್ಯಾನಿಸಿ ಕನ್ನಡ ಕಾವ್ಯಗಳಿಗೆ ಅಲಂಕಾರವೆನಿಸಿದ ಕರ್ಣಾಟ ಭಾರತ ಕಥಾ ಮಂಜರಿಯನ್ನು ರಚಿಸಿದ ಗದುಗಿನ ವೀರನಾರಣಪ್ಪ ನಿಸ್ಸಂಶಯವಾಗಿ ಕನ್ನಡದ ನಡುಗನ್ನಡ ಕಾಲದ ಮೇರು ಪರ್ವತವಾಗಿದ್ದಾರೆ. ಸೋತಾಗ ಮತ್ತೊಬ್ಬರನ್ನು ಹೊಣೆಯಾಗಿಸುವ, ಗೆದ್ದಾಗ ಸ್ವ ಪ್ರಶಂಸೆ ಮಾಡಿಕೊಳ್ಳುವ ಮಾನವ ಸಹಜ ಗುಣಗಳು ಕರ್ಣನಲ್ಲೂ ಇತ್ತು. ಸಮಯಕ್ಕೆ ಅನುಗುಣವಾಗಿ ಬದಲಾಗುವ ಕೌಶಲ್ಯ ಗುಣಗಳು ದುರ್ಯೋಧನ ನಲ್ಲಿದ್ದವು. ನಮ್ಮ ಜವಾಬ್ದಾರಿಯನ್ನು ಮತ್ತೊಬ್ಬರ ಮೇಲೆ ಹಾಕುವ ಈ ಪರಿಪಾಠ ಪ್ರಸ್ತುತ ರಾಜಕಾರಣಿಗಳಲ್ಲಿ, ರಾಜಕೀಯ ಪಕ್ಷಗಳಲ್ಲಿ ಕಾಣಬಹುದಾಗಿದೆ. ಕುಮಾರವ್ಯಾಸನ ಕಾವ್ಯದಲ್ಲಿ ಇಂದಿನ ಪ್ರಸ್ತುತತೆಗೆ ಸಮೀಕರಿಸಲು ಸಾಕಷ್ಟು ಉದಾಹರಣೆ ಗಳು ಕಾಣಬಹುದಾಗಿದೆ. ಕಾವ್ಯ ರಚನೆ, ಕಲ್ಪನೆ, ಕಥಾವಸ್ತು, ಉಪಮೆಗಳು, ವರ್ಣನಾ ಚಾತುರ್ಯ ಕನ್ನಡ ನಡುಗನ್ನಡ ಕಾವ್ಯಲೋಕದಲ್ಲಿ ಅತ್ಯಂತ ವಿಶಿಷ್ಠ ಸ್ಥಾನ ಪಡೆದಿದೆ ಅಧರ್ಮ ವಿದ್ದಡೆಗೆ ಸದಾಕಾಲ ಗೆಲುವು ಸಾಧ್ಯವಿಲ್ಲ. ಧರ್ಮ ಇದ್ದಡೆಗೆ ವಿಜಯವೇ ಅಂತಿಮ ಸಾಧ್ಯತೆ ಎಂಬುದರ ಬಗ್ಗೆ ವರ್ಣಿಸಿರುವುದು ಕುಮಾರವ್ಯಾಸನ ಕಾವ್ಯದ ವಿಶೇಷತೆಗೆ ಸಾಕ್ಷಿ. ಎಂಬುದನ್ನು ಸಮೀಕರಿಸಿ ವ್ಯಾಖ್ಯಾನಿಸಿದರು. ಗಮಕಿ ನಿರ್ಮಲಾ ಪ್ರಸನ್ನ ಗಮಕವಾಚನ ನೆರವೇರಿಸಿಕೊಟ್ಟರು.26ಕೆಕೆಡಿಯು3.ಕಡೂರು ತಾಲೂಕಿನ ಯಗಟಿ ಗ್ರಾಮದ ಗದುಗಿನ ವೀರನಾರಾಯಣ ಸ್ವಾಮಿ ದೇವಸ್ಥಾನ ಟ್ರಸ್ಟ್ ನಿಂದ ನಡೆದ ಕುಮಾರವ್ಯಾಸ ಜಯಂತಿಯಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಅವರಿಗೆ ಕರ್ಣಾಟ ಭಾರತ ಕಥಾ ಮಂಜರಿ ಕಾವ್ಯದ ಪ್ರತಿಯನ್ನು ಮಾಜಿ ಶಾಸಕ ವೈ.ಎಸ್.ವಿ. ದತ್ತ ನೀಡಿ ಗೌರವಿಸಿದರು. ಭಂಡಾರಿ ಶ್ರೀನಿವಾಸ್, ಬಿದರೆ ಜಗದೀಶ್, ರವಿಪ್ರಕಾಶ್, ಅನಂತರಾಮಯ್ಯ, ವೈಟಿ. ರಮೇಶ್, ಕಂಸಾಗರ ರೇವಣ್ಣ ಮತ್ತಿತರರು ಇದ್ದರು.