ಕನ್ನಡಪ್ರಭ ವಾರ್ತೆ ಬನ್ನೂರು
ಮುಂಬರುವ 2028ಕ್ಕೆ ಮೈತ್ರಿಕೂಟದಿಂದ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಾರೆಂದು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಪಟ್ಟಣದ ಹಾಲಿನ ಡೈರಿ ಮುಂಭಾಗದ ಆವರಣದಲ್ಲಿ ಹಮ್ಮಿಕೊಳ್ಳಲಾದ ಜನರೊಂದಿಗೆ ಜನತಾದಳ- ಜೆಡಿಎಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬನ್ನೂರು ದೇವೇಗೌಡರ ಕಾಲದಿಂದಲೂ ಜೆಡಿಎಸ್ ನ್ನು ಕೈ ಹಿಡಿದ ಪಕ್ಷವಾಗಿದೆ. ಹಿಂದಿನ ಚುನಾವಣೆಯಲ್ಲಿ ಬಲಿಷ್ಟ ನಾಯಕನನ್ನು ಸೋಲಿಸಿ ಜೆಡಿಎಸ್ ಬಾವುಟವನ್ನು ಮೊದಲ ಬಾರಿಗೆ ಹಾರಿಸಿದ ಕೀರ್ತಿ ನೀಡಿದ ಭಾಗವಾಗಿದ್ದು, ಈ ಭಾಗದಿಂದಲೇ ಜೆಡಿಎಸ್ ಕಹಳೆ ಮೊಳಗಲಿದೆ ಎಂದರು.ಕಾಂಗ್ರೆಸ್ ಸರ್ಕಾರ 4 ಲಕ್ಷ ಸಾಲ ಹೊರಿಸಿದೆ:
ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದ ರೈತರ ಸಾವಿರಾರು ಕೋಟಿ ರು. ಗಳನ್ನು ಮನ್ನಾ ಮಾಡಿ ಮೈಸೂರಿನಲ್ಲಿಯೇ 400 ಕೋಟಿ ಸಾಲವನ್ನು ವಿವಿಧ ಬ್ಯಾಂಕು, ಸಹಕಾರಿ ಸಂಘಗಳಲ್ಲಿ ಮನ್ನಾ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ 4 ಲಕ್ಷ ಸಾಲವನ್ನು ರಾಜ್ಯದ ಜನತೆ ಮೇಲೆ ಹೊರಿಸಿದ್ದಾರೆಂದು ಸರ್ಕಾರವನ್ನು ದೂಷಿಸಿದರು.
ತಾವು ರಂಗಚಾರಿಹುಂಡಿ, ರಂಗಸಮುದ್ರ ಭಾಗದಿಂದ ಬರುತ್ತಿದ್ದ ಸಂದರ್ಭದಲ್ಲಿ ಜನರು ತೋರಿಸಿದ ಪ್ರೀತಿಯನ್ನು ಎಂದಿಗೂ ಮೆರೆಯುವುದಿಲ್ಲ. ಇಷ್ಟೊಂದು ಪ್ರೀತಿ ತೋರಿಸುವ ನಿಮಗೆ ನಾವು ಕೃತಜ್ಞರೆಂದು ತಿಳಿಸಿದರು. ಇಲ್ಲಿನ ಜನಸಾಗರ ಸೋಡಿದರೆ ಮತ್ತೊಮ್ಮೆ ಜೆಡಿಎಸ್ ಅಶ್ವಿನ್ ಕುಮಾರ್ ಅವರನ್ನು ಬಲಿಷ್ಟ ರಾಜಕಾರಣಿ ಎದುರು ಮತ್ತೊಮ್ಮೆ ಗೆಲ್ಲಿಸುತ್ತೀರಿ ಎನ್ನುವ ಭರವಸೆ ತಮಗೆ ಇದೆ ಎಂದರು.
ಮಾಜಿ ಶಾಸಕ ಎಂ. ಅಶ್ವಿನ್ ಕುಮಾರ್ ಮಾತನಾಡಿ, ತಾವು ಮೊದಲಿಗೆ ಜಿಲ್ಲಾ ಪಂಚಾಯ್ತಿ ಚುನಾವಣೆ ಎದುರಿಸಲು ಕುಮಾರಸ್ವಾಮಿಯವರ ಆಶೀರ್ವಾದವೇ ಮುಖ್ಯಮಾಗಿತ್ತು. ಅಲ್ಲಿಂದ ನೇರ ಶಾಸಕನಾಗಿ ಎದುರಾಳಿಯ ವಿರುದ್ಧ 28 ಸಾವಿರ ಮತಗಳ ಅಂತರದಿಂದ ವಿಜಯಶಾಲಿಯಾದೆ. ಇದು ಇಂದಿಗೂ ಅವರಿಗೆ (ಎಚ್.ಸಿ. ಮಹದೇವಪ್ಪ) ಅರಗಿಸಿಕೊಳ್ಳಲು ಆಗುತ್ತಿಲ್ಲ. ಯಾವುದೇ ಸಭೆ ಸಮಾರಂಭದಲ್ಲೂ ಅದನ್ನು ಜಪ ಮಾಡುತ್ತಲೇ ಇರುತ್ತಾರೆ. ಈಚೆಗೆ ನಡೆದ ಕಾರ್ಯಕ್ರಮ ಒಂದರಲ್ಲೂ ಅದನ್ನು ನೆನಪಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಪುನರಾವರ್ತನೆ ಮಾಡುತ್ತೀರಿ ಎನ್ನುವ ಭರವಸೆ ತಮಗೆ ಇದೆ ಎಂದರು.ಶಾಸಕ ಹರೀಶ್ ಗೌಡ ಮಾತನಾಡಿ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅಲ್ಪಾವಧಿಯಲ್ಲೇ 26 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿ ರೈತರ ಆಸರೆಯಾದರು. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರ ಆಡಳಿತ ನೋಡುವ ಭಾಗ್ಯವಿದೆ. 2 ಬಾರಿ ಸಚಿವ 4 ಬಾರಿ ಶಾಸಕರಾಗಿರುವ ಪ್ರಭಾವಿ ರಾಜಕಾರಣಿ ವಿರುದ್ಧ ಅಶ್ವಿನ್ ಕುಮಾರ್ ಅವರಿಗೆ ಗೆಲುವು ತಂದು ಕೊಟ್ಟಿದ್ದೀರಾ ಅದನ್ನು ಮತ್ತೇ ಮಾಡುತ್ತೀರಿ ಎನ್ನುವ ಆಶಾಭಾವನೆ ನನಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೆಗೌಡ, ವಿವೇಕಾನಂದ, ಮಾಜಿ ಶಾಸಕ, ಸಚಿವ ಸಾ.ರಾ. ಮಹೇಶ್, ಮಾಜಿ ಶಾಸಕ ಮಹದೇವ್, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ, ಚಿನ್ನಸ್ವಾಮಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೈ.ಎಸ್. ರಾಮಸ್ವಾಮಿ, ಚಿಕ್ಕಜವರಪ್ಪ, ಮಹದೇವಸ್ವಾಮಿ, ಪುರಸಭೆಯ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಪುರಸಭಾ ಮಾಜಿ ಸದಸ್ಯ ಮುರಳೀಧರ್, ಸೌಮ್ಯ, ಶೋಭಾ ಸತೀಶ್, ಡಾ. ಮಹೇಂದ್ರ ಸಿಂಗ್ ಕಾಳಪ್ಪ, ಜಯರಾಮ್, ನಾರಾಯಣಸ್ವಾಮಿ, ಶಿವಕುಮಾರ್, ಜೆಡಿಎಸ್ ಕಾರ್ಯಕರ್ತರು, ವಿವಿಧ ಗ್ರಾಮದ ಜೆಡಿಎಸ್ ಮುಖಂಡರು ಇದ್ದರು.