ಕುಮಾರಸ್ವಾಮಿಗೆ ಶೋಭೆ ತರುವುದಿಲ್ಲ

| Published : Jan 10 2025, 12:47 AM IST

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸರ್ಕಾರದ ಮೇಲೆ ಆರೋಪ ಮಾಡುವಾಗ ವಿನಾಕಾರಣ ನನ್ನ ಹೆಸರನ್ನು ಪ್ರಸ್ತಾಪ ಮಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ತುಮಕೂರು ಜಿಲ್ಲಾ ಗುತ್ತಿಗೆದಾರರ ಅಧ್ಯಕ್ಷ ಎ.ಡಿ.ಬಲರಾಮಯ್ಯ ತಿಳಿಸಿದರು.

ಕನ್ನಡಪ್ರಭವಾರ್ತೆ ಕೊರಟಗೆರೆ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸರ್ಕಾರದ ಮೇಲೆ ಆರೋಪ ಮಾಡುವಾಗ ವಿನಾಕಾರಣ ನನ್ನ ಹೆಸರನ್ನು ಪ್ರಸ್ತಾಪ ಮಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ತುಮಕೂರು ಜಿಲ್ಲಾ ಗುತ್ತಿಗೆದಾರರ ಅಧ್ಯಕ್ಷ ಎ.ಡಿ.ಬಲರಾಮಯ್ಯ ತಿಳಿಸಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಾನು ಈಗಿನ ಸರ್ಕಾರದ ವಿರುದ್ಧ ಎಲ್ಲಿಯೂ ಭ್ರಷ್ಟಾಚಾರ ಅಥವಾ ಪರ್ಸೆಂಟೇಜ್ ಎನ್ನುವ ವಿಷಯವನ್ನು ಆರೋಪವನ್ನು ಎಲ್ಲಿಯೂ ಮಾಡಿಲ್ಲ ಈ ಹಿಂದೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಜಲಜೀವನ ಮಿಷನ್ ಕಾಮಗಾರಿ ಸಂಬಂಧ ಗುತ್ತಿಗೆದಾರರಿಂದ ಸಂಬಂಧಿಸಿದ ಇಲಾಖೆಯ ಎಂಜಿನಿಯರ್‌ಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದ ಹಿನ್ನೆಲೆಯಲ್ಲಿ ನಾನು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷನಾಗಿ ಎಂಜಿನಿಯರ್‌ಗಳ ವಿರುದ್ಧ ಹೇಳಿಕೆ ನೀಡುವ ಸಲುವಾಗಿ ಸಂಘದ ಕಚೇರಿಯಲ್ಲಿ ನಿರ್ದಿಷ್ಟವಾಗಿ ಚಿಕ್ಕನಾಯಕನಹಳ್ಳಿಯ ಪ್ರಕರಣವನ್ನು ಖಂಡಿಸಿರುತ್ತೇನೆ, ಆಗ ಸರ್ಕಾರವು ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿರುತ್ತೇನೆ. ನಾನು ಎಲ್ಲಿಯೂ ಇದುವರೆಗೂ ಈಗಿನ ರಾಜ್ಯ ಸರ್ಕಾರದ ಬಗ್ಗೆಯಾಗಲಿ ಇಲಾಖೆ ಬಗ್ಗೆಯಾಗಲಿ ಭ್ರಷ್ಟಾಚಾರ ಮತ್ತು ಪರ್ಸೆಂಟೇಜ್ ಬಗ್ಗೆ ಹೇಳಿಕೆ ಮತ್ತು ಆರೋಪವನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಇತ್ತೀಚೆಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿರವರು ರಾಜ್ಯ ಸರ್ಕಾರದ ವಿರುದ್ದ ೬೦% ಲಂಚ ಆರೋಪ ಕೇಳಿ ಬರುತ್ತಿರುವುದಾಗಿ ಆರೋಪಿಸಿದ್ದು ಅದಕ್ಕೆ ಸಿಎಂ ಸಿದ್ದರಾಮಯ್ಯನವರು ಸೂಕ್ತ ಸಾಕ್ಷಾಧಾರ ಕೊಟ್ಟು ಆರೋಪಿಸುವಂತೆ ತಿಳಿಸಿದ್ದು ಈ ವಿಚಾರವಾಗಿ ಕುಮಾರಸ್ವಾಮಿರವರು ಜ. ೬ ರಂದು ಟ್ವಿಟರ್ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ, ತುಮಕೂರು ಜಿಲ್ಲೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಂದು ನನ್ನ ಹೆಸರು ಪ್ರಸ್ತಾಪಿಸಿ ಅವರ ಆರೋಪವನ್ನು ಸಾಬೀತು ಮಾಡಿಕೊಳ್ಳಲು ಹೋಗಿರುತ್ತಾರೆ. ಆದರೆ ನಾನು ಎಲ್ಲಿಯೂ ರಾಜ್ಯ ಸರ್ಕಾರದ ವಿರುದ್ದ ಆರೋಪ ಮತ್ತು ಹೇಳಿಕೆಯನ್ನು ನೀಡಿಲ್ಲ, ನನ್ನ ಹೆಸರನ್ನು ವಿನಾಕಾರಣ ಬಳಸಿಕೊಳ್ಳುವುದು ಕೇಂದ್ರ ಸಚಿವರಾದ ಕುಮಾಸ್ವಾಮಿಯವರಿಗೆ ಶೋಭೆ ತರುವುದಿಲ್ಲ ಎಂದರು. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ೪೦% ಲಂಚ ಪ್ರಕರಣ ಕೇಳಲಾಗುತ್ತಿರುವ ಬಗ್ಗೆ ಹಿಂದಿನ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣನವರು ನೇರವಾಗಿ ಆರೋಪ ಮಾಡಿದ್ದರು, ಈ ಬಗ್ಗೆ ಅವರು ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಲಿಖಿತ ದೂರನ್ನು ನೀಡಿದ್ದರು. ಈ ಅದನ್ನು ಮುಚ್ಚಿ ಹಾಕಿಕೊಳ್ಳಲು ಕುಮಾರಸ್ವಾಮಿಅವರು ಮತ್ತು ಬಿಜೆಪಿಯ ಕೆಲವು ರಾಜ್ಯ ನಾಯಕರು ನನ್ನ ಹೇಳಿಕೆಯನ್ನು ತಿರುಚಿ ರಾಜ್ಯ ಸರ್ಕಾರದ ವಿರುದ್ದ ಆರೋಪ ಮಾಡುತ್ತಿರುವುದು ಸರಿಯಲ್ಲ, ಹಿಂದುಳಿದ ವರ್ಗದ ಗುತ್ತಿದಾರನಾದ ನನ್ನನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ವಿನಾಕಾರಣ ಅವರ ಸ್ವಾರ್ಥಕ್ಕೆ ಬಳಸಕೊಳ್ಳುತ್ತಿರುವುದು ನನಗೆ ತೀವ್ರ ನೋವುಂಟು ಮಾಡಿದೆ ಎಂದರು.