ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಹೊರಗಿನವರಲ್ಲ. ಅವರು ಈ ರಾಜ್ಯದ ಆಸ್ತಿ. ರಾಷ್ಟ್ರೀಯ ಹಿತಾಸಕ್ತಿಗಾಗಿ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಯಾಗಿದೆ. ಎಚ್.ಡಿ.ಕುಮಾರಸ್ವಾಮಿಗೆ ಮತನೀಡಿ ಲೋಕಸಭೆಗೆ ಕಳುಹಿಸುವಂತೆ ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು. ತಾಲೂಕಿನ ದೊಡ್ಡಕ್ಯಾತನಹಳ್ಳಿ ಶ್ರೀರಾಮ ದೇವಾಲಯದಲ್ಲಿ ಮಾಜಿ ಸಚಿವ ನಾರಾಯಣಗೌಡರೊಂದಿಗೆ ಕರಪತ್ರಗಳನ್ನಿಟ್ಟು ವಿಶೇಷಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಸಿಎಂ ಕುಮಾರಣ್ಣನಿಗೆ ಶಕ್ತಿ ತುಂಬಲು ಜಿಲ್ಲೆಯ ಮತದಾದರರು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದರು. ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಟೀಕಿಸುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ. ಕಾಂಗ್ರೆಸ್ ಕುಟುಂಬ ರಾಜಕಾರಣದಲ್ಲಿ ಮುಳುಗಿದೆ. ಕಾಂಗ್ರೆಸ್ ಪಕ್ಷ ತನ್ನ ಮಂತ್ರಿ ಮಹೋದಯರ ಮಕ್ಕಳು, ಅಳಿಯಂದಿರಿಗೆ ಟಿಕೆಟ್ ನೀಡಿದೆ ಎಂದು ಟೀಕಿಸಿದರು.ಕುಮಾರಸ್ವಾಮಿ ಜಿಲ್ಲೆಯಲ್ಲಿ ಸಂಸದರಾಗಿ ಆಯ್ಕೆಯಾದರೆ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಾರೆ. ಕುಮಾರಸ್ವಾಮಿ ಗೆಲುವು ನಿಶ್ಚಿತ. ಕೇಂದ್ರ ಸಚಿವರಾಗಿ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಾರೆ ಎಂದರು.ಪ್ರಧಾನಿ ಮೋದಿ ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಮೋದಿ ಬಂದ ನಂತರ ಭಾರತ ಜಾಗತಿಕವಾಗಿ ವಿಜೃಂಭಿಸುತ್ತಿದೆ. ಪಾಕಿಸ್ತಾನ, ಚೀನಾದಂತಹ ನೆರೆ ರಾಷ್ಟ್ರಗಳು ಭಾರತವನ್ನು ಕೆಣಕಲು ಬೆದರುತ್ತಿವೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಿಯಂತ್ರಣಕ್ಕೆ ಬಂದಿದೆ. ಕಾಶ್ಮೀರ ಸಂಪೂರ್ಣವಾಗಿ ಭಾರತವಾಗಿದೆ ಎಂದು ಹೇಳಿದರು.ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿ ಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ದೇಶದ ಅಭಿವೃದ್ಧಿಗಾಗಿ ಜನ ಬಿಜೆಪಿ ಜೆಡಿಎಸ್ ಮೈತ್ರಿ ಬೆಂಬಲಿಸುವಂತೆ ಮನವಿ ಮಾಡಿದರು.ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮತ್ತು ನನ್ನ ನಡುವೆ ವೈಯುಕ್ತಿಕ ಭಿನ್ನಾಭಿಪ್ರಾಯ ಇಲ್ಲ. ರಾಜಕೀಯವಾಗಿ ನಾವಿಬ್ಬರು ಭಿನ್ನ ಭಿನ್ನ ಪಕ್ಷದವರಾಗಿದ್ದೆವು. ಇದೀಗ ನಾವಿಬ್ಬರು ಒಂದಾಗಿದ್ದು ನಮ್ಮ ಮೈತ್ರಿಗೆ ಆನೆಬಲ ಬಂದಿದೆ ಎಂದು ಹೇಳಿದರು.ಹೇಮಾವತಿ ನೀರು ತುಮಕೂರಿಗೆ ಖಂಡನೀಯ:
ತೀವ್ರ ಬರಗಾಲ ಎದುರಿಸುತ್ತಿರುವ ಕಾವೇರಿ ಕೊಳ್ಳದ ಜಿಲ್ಲೆಗಳೀಗೆ ನೀರು ನೀಡದೇ ಹಾಸನ ಜಿಲ್ಲೆಯ ಗೊರೂರು ಜಲಾಶಯದಲ್ಲಿನ ನೀರನ್ನು ಹಾಸನ ಉಸ್ತುವಾರಿ ಸಚಿವ ರಾಜಣ್ಣ ಬಿಡಿಸಿಕೊಂಡು ಹೋಗುತ್ತಾರೆ. ಆದರೆ, ಜಿಲ್ಲೆಯ ಉಸ್ತುವಾರಿ ಸಚಿವರು ಸದಾ ರಾಜಕಾರಣ ಮಾಡಿಕೊಂಡು ರೈತರ ಬಗ್ಗೆ ಕಾಳಜಿಯಿಲ್ಲದಂತೆ ವರ್ತಿಸುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.ಇದೇ ವೇಳೆ ದೊಡ್ಡ ಕ್ಯಾತನಹಳ್ಳಿ ಸಂತೇಬಾಚಹಳ್ಳಿ, ರಂಗನಾಥಪುರ ಕ್ರಾಸ್, ಅಘಲಯ, ಭಾರತಿಪುರ ಕ್ರಾಸ್, ಸಾರಂಗಿ, ಅಗ್ರಹಾರಬಾಚಹಳ್ಳಿ, ಮಾಕವಳ್ಳಿ, ಬಂಡೀಹೊಳೆ, ಹರಿಹರಪುರ, ಮಡುವಿನಕೋಡಿ ಗ್ರಾಪಂ ಕೇಂದ್ರಗಳಲ್ಲಿ ಮತಯಾಚನೆ ಮಾಡಿದರು.ಪ್ರಚಾರ ಸಭೆಯಲ್ಲಿ ಮನ್ಮುಲ್ ನಿರ್ದೇಶಕ ಡಾಲು ರವಿ, ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕೀರಾಮು, ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಮುಡಾ ಮಾಜಿ ಅಧ್ಯಕ್ಷ ಕೆ ಶ್ರೀನಿವಾಸ್, ತಾಪಂ ಮಾಜಿ ಸದಸ್ಯರಾದ ಕುಮಾರ್, ಮೋಹನ್, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಮೋಹನ್, ಟಿಎಪಿಸಿಎಂಎಸ್ ನಿರ್ದೇಶಕರಾದ ಬಲದೇವ್, ಕೊರಟಿಕೆರೆ ದಿನೇಶ್, ರಘು, ತೋಟಪ್ಪಶೆಟ್ಟಿ, ಸಾಮಿಲ್ ರವಿಕುಮಾರ್, ಬಿಜೆಪಿ ಮಾಜಿ ಅಧ್ಯಕ್ಷ ಪರಮೇಶ್ ಅರವಿಂದ್, ಹುಬ್ಬನಹಳ್ಳಿಬಲರಾಮು, ಅಘಲಯ ಅಜಯ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಶಾಸಕರ ಆಪ್ತಸಹಾಯಕ ಪ್ರತಾಪ್ ಸೇರಿದಂತೆ ಆಯಾ ಗ್ರಾಪಂ ವ್ಯಾಪ್ತಿಯ ಮುಖಂಡರುಗಳು ಹಾಜರಿದ್ದರು.