ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಬಟ್ಟೂರಿನ ಅಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಸದ ಮಾತು ಸರಣಿಯ 27ನೇ ಕಾರ್ಯಕ್ರಮ, ಕುಮಾರವ್ಯಾಸ ಜಯಂತಿಯಲ್ಲಿ ಸಾಹಿತಿ ಆರ್.ಎಸ್. ಪಾಟೀಲ ಉಪನ್ಯಾಸ ನೀಡಿದರು.
ಲಕ್ಷ್ಮೇಶ್ವರ: ನಡುಗನ್ನಡ ಕಿರೀಟ ಕುಮಾರವ್ಯಾಸ ಭಾರತ ಎಂದು ಶಿಕ್ಷಕ ಹಾಗೂ ಸಾಹಿತಿ ಆರ್.ಎಸ್. ಪಾಟೀಲ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಬಟ್ಟೂರಿನ ಅಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಸದ ಮಾತು ಸರಣಿಯ 27ನೇ ಕಾರ್ಯಕ್ರಮ, ಕುಮಾರವ್ಯಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಆದಿಕವಿ ಪಂಪ ಮಹಾಭಾರತದ ಯುದ್ಧವನ್ನು ವರ್ಣಿಸಿದರೆ ಮಹಾಕವಿ ಕುಮಾರವ್ಯಾಸ ಮಹಾಭಾರತದ ಪಾತ್ರಗಳ ಅಂತರಂಗದ ಯುದ್ಧವನ್ನು ಎಳೆಎಳೆಯಾಗಿ ನಮ್ಮೆದುರು ತೆರೆದಿಡುತ್ತಾರೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಸ್. ಮಳಿಮಠ, ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎಂಬ ಕುವೆಂಪು ಅವರ ವಾಣಿ ಎಂದಿಗೂ ನಿತ್ಯ ಸತ್ಯವಾಗಿದೆ ಎಂದರು.
ಕಸಾಪ ಸರ್ಕಾರಿ ಪ್ರೌಢಶಾಲಾ ಘಟಕ ಉದ್ಘಾಟಿಸಿ ಮಾತನಾಡಿದ ಶಾಲೆಯ ಕನ್ನಡ ವಿಷಯ ಶಿಕ್ಷಕ ಹಾಗೂ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎನ್.ಎನ್. ಸುಣಗಾರ ಕುಮಾರವ್ಯಾಸ ಭಾರತದ ಪಠಣಕ್ಕಾಗಿಯೇ ಕನ್ನಡದಲ್ಲಿ ಗಮಕಲೆ ಎಂಬ ವಿಶೇಷ ಪ್ರಕಾರ ಹುಟ್ಟಿಕೊಂಡಿತು. ಅಂತಹ ಶ್ರೇಷ್ಠತೆ ಕುಮಾರವ್ಯಾಸರ ಕಾವ್ಯಕ್ಕೆ ಇದೆ ಎಂದರು.ಕಸಾಪ ಸಲಹಾ ಸಮಿತಿಯ ಎಸ್.ಬಿ. ಅಣ್ಣಿಗೇರಿ ಮಾತನಾಡಿ, ಗ್ರಾಮೀಣ ಪರಿಸರದಲ್ಲಿ ಬಟ್ಟೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮಾದರಿ ಶಾಲೆಯಾಗಿದೆ ಎಂದರು. ಸಿಆರ್‌ಪಿ ನವೀನ ಅಂಗಡಿ ಪ್ರೌಢಶಾಲಾ ಹಂತದಲ್ಲಿಯೇ ಇಂತಹ ಸಾಹಿತ್ಯದ ಕಾರ್ಯಕ್ರಮಗಳು ಮಕ್ಕಳಲ್ಲಿ ಸಾಹಿತ್ಯ, ಸಂಸ್ಕೃತಿಯ ಅಭಿರುಚಿ ಮೂಡಿಸುತ್ತವೆ. ಈ ದಿಶೆಯಲ್ಲಿ ಲಕ್ಷ್ಮೇಶ್ವರ ತಾಲೂಕು ಕಸಾಪ ಘಟಕದ ಕಾರ್ಯ ಶ್ಲಾಘನೀಯ ಎಂದರು.
ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿದರು. ಹಿರಿಯ ಶಿಕ್ಷಕ ರವೀಂದ್ರ ಮಳಲಿ, ಸಲೀಮ್ ಶೇಖ್ ಭಾಗವಹಿಸಿದ್ದರು.ಕಸಾಪ ಶಾಲಾ ಘಟಕದ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಉಪನ್ಯಾಸ ನೀಡಿದ ಆರ್.ಎಸ್. ಪಾಟೀಲ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಎಂ.ಎಸ್. ಮಳಿಮಠ ಅವರನ್ನು ಸನ್ಮಾನಿಸಲಾಯಿತು.
ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಹುಣಸಿಮರದ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಜಗಲಿ ಪ್ರಾರ್ಥಿಸಿದರು. ಶಿಕ್ಷಕ ಶೇಖರ ಚಿಕ್ಕಣ್ಣವರ ವಂದಿಸಿದರು.