ಅವನತಿಯತ್ತ ಕುಮಟಾ ಸಿಹಿ ಈರುಳ್ಳಿ

| Published : Feb 28 2024, 02:37 AM IST

ಸಾರಾಂಶ

ಕೆಲವೇ ವರ್ಷಗಳ ಹಿಂದೆ 40ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಈಗ ಕೇವಲ 10 ಹೆಕ್ಟೇರ್ ಗೆ ಇಳಿಕೆಯಾಗಿದೆ. ಈಗ ಬೆಳೆದ ಈರುಳ್ಳಿ ಬೆಳೆಯೂ ಹಾವು ಸುರುಳಿ (ತಿರುಪು) ರೋಗಕ್ಕೆ ತುತ್ತಾಗಿ ನಾಶವಾಗುತ್ತಿದೆ.

ಕುಮಟಾ:

ರೋಗದ ಸುಳಿಗೆ ಸಿಲುಕಿ ಕುಮಟಾದ ಸಿಹಿ ಈರುಳ್ಳಿ ಅವನತಿಯತ್ತ ಸಾಗಿದೆ. ವರ್ಷದಿಂದ ವರ್ಷಕ್ಕೆ ಬೆಳೆಯ ಕ್ಷೇತ್ರ ಕಡಿಮೆಯಾಗುತ್ತಿದ್ದು, ತೋಟಗಾರಿಕೆ ಇಲಾಖೆ ಈ ಈರುಳ್ಳಿ ಬೆಳೆ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ವಿಶೇಷ ತಳಿಯಾದ ಗೊಂಚಲು ಸಿಹಿ ಈರುಳ್ಳಿ ಇತಿಹಾಸದ ಪುಟ ಸೇರುವ ಸಾಧ್ಯತೆ ಇದೆ.ಕುಮಟಾದ ವನ್ನಳ್ಳಿ, ಅಳ್ವೆಕೋಟಿ, ಹಂದಿಗೋಣಗಳಲ್ಲಿ ಬೆಳೆಯುತ್ತಿದ್ದ ಗೊಂಚಲು (ಜಡೆ) ಈರುಳ್ಳಿಗೆ ಸತತ ನಾಲ್ಕು ವರ್ಷಗಳಿಂದ ರೋಗದ ಕಾಟ. ಇನ್ನೇನು ಬೆಳೆ ಕೈಗೆ ಬಂತು ಎನ್ನುವ ಹತ್ತಿನಲ್ಲಿ ಕೊಳೆತುಹೋಗಿ ಕೃಷಿಕರು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಕೆಲವೇ ವರ್ಷಗಳ ಹಿಂದೆ 40ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಈಗ ಕೇವಲ 10 ಹೆಕ್ಟೇರ್ ಗೆ ಇಳಿಕೆಯಾಗಿದೆ. ಈಗ ಬೆಳೆದ ಈರುಳ್ಳಿ ಬೆಳೆಯೂ ಹಾವು ಸುರುಳಿ (ತಿರುಪು) ರೋಗಕ್ಕೆ ತುತ್ತಾಗಿ ನಾಶವಾಗುತ್ತಿದೆ. ಈ ರೋಗ ನಿಯಂತ್ರಣಕ್ಕೆ ಕಾಂಟಾಫ್ ದ್ರಾವಣವನ್ನು ಪ್ರತಿ ಲೀಟರ್‌ಗೆ ಒಂದು 1 ಮಿ.ಲೀ. ಸೇರಿಸಿ ಸಿಂಪಡಿಸಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಯಾವುದೂ ಪ್ರಯೋಜನ ಆಗುತ್ತಿಲ್ಲ.ಕಳೆದ ವರ್ಷ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಕಿಲೋಗೆ ₹ 30 ಇದ್ದರೂ ಇಲ್ಲಿನ ಈರುಳ್ಳಿಗೆ ಭಾರಿ ಬೇಡಿಕೆ, ಇಳುವರಿ ಕುಸಿತದಿಂದಾಗಿ ಪ್ರತಿ ಕಿಲೋಗೆ ₹ 110ರಿಂದ ₹ 120 ತನಕ ಏರಿಕೆಯಾಗಿತ್ತು. ಅಳ್ವೆಕೋಡಿ ಹಾಗೂ ಹಂದಿಗೋಣಗಳ ಚತುಷ್ಪಥ ಹೆದ್ದಾರಿಯ ಇಕ್ಕೆಲಗಳಲ್ಲಿನ ತಾತ್ಕಾಲಿಕ ಗುಡಿಸಲುಗಳೇ ಈ ಈರುಳ್ಳಿಗೆ ಪ್ರಮುಖ ಹಾಗೂ ಏಕೈಕ ಮಾರುಕಟ್ಟೆ.ಅದೆಷ್ಟೋ ವರ್ಷಗಳಿಂದ ಮನೆ, ಅಡುಗೆ ಮನೆಗಳಲ್ಲಿ ಗೊಂಚಲುಗಳಾಗಿ ಇಳಿಬಿಟ್ಟು ವರ್ಷವಿಡಿ ಕೆಡದೆ ರುಚಿಯ ಜೊತೆಗೆ ಅಡುಗೆಮನೆಯನ್ನು ಸಿಂಗರಿಸುತ್ತಿದ್ದ ಈರುಳ್ಳಿ ತಳಿ ಸಂರಕ್ಷಿಸಿ, ಬೆಳೆಗಾರರನ್ನು ಪ್ರೋತ್ಸಾಹಿಸದೆ ಇದ್ದಲ್ಲಿ ಈ ತಳಿಯೇ ನಶಿಸಿಹೋಗುವ ಅಪಾಯ ಇದೆ.ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ಷೇತ್ರಕ್ಕೆ ಬರುತ್ತಿಲ್ಲ. ಯಾವುದೋ ಒಬ್ಬ ರೈತರನ್ನು ಭೇಟಿಯಾಗಿ ಹೋಗುತ್ತಾರೆ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪರಿಹಾರ, ರೋಗ ನಿಯಂತ್ರಣ ಯಾವುದಕ್ಕೂ ಹೇಳುವವರಿಲ್ಲ. ಕೇಳುವವರಿಲ್ಲ ಎಂದು ಕೃಷಿಕರು ಗೋಳಿಡುತ್ತಿದ್ದಾರೆ.ಇಲ್ಲಿನ ಈರುಳ್ಳಿಗೆ ಜಿಐ ಟ್ಯಾಗ್ ಬಗ್ಗೆ ಸಮಿತಿ ರಚನೆ ಆಗಿದೆ. ಆದರೆ ಬೆಳೆ ಅವನತಿಯತ್ತ ಸಾಗುತ್ತಿದೆ. ಓನಿಯನ್ ಟ್ವಿಸ್ಟಿಂಗ್ (ಹಾವು ಸುರುಳಿ)ರೋಗದಿಂದ ಈರುಳ್ಳಿ ಗಡ್ಡೆಯೇ ಆಗದೆ ಬಾಲದಂತೆ ತಿರುಚಿಕೊಳ್ಳುತ್ತದೆ. ನಂತರ ಒಣಗಿ ಹೋಗುತ್ತದೆ. ರೋಗ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಕೊನೆ ಪಕ್ಷ ಈ ಅಪರೂಪದ ತಳಿಯನ್ನು ರಕ್ಷಿಸಲು ತೋಟಗಾರಿಕೆ ಇಲಾಖೆ ಮುಂದಾಗಬೇಕಾಗಿದೆ.

ಈ ಪ್ರದೇಶದ ಈರುಳ್ಳಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ಬೆಳೆ ವೀಕ್ಷಿಸಿ, ಹಾನಿಗೊಳಗಾದ ಬೆಳೆಗೆ ಪರಿಹಾರ ದೊರಕಿಸಿ, ಬೆಳೆಗೆ ಪ್ರೋತ್ಸಾಹಿಸಿದಲ್ಲಿ ಮಾತ್ರ ಬೆಳೆಗಾರರು ಬದುಕು ಕಂಡುಕೊಳ್ಳಬಹುದು ಎಂದು ಸಾಮಾಜಿಕ ಹೋರಾಟಗಾರ ಭಾಸ್ಕರ್ ಪಟಗಾರ ಹೇಳಿದರು.ಈರುಳ್ಳಿ ಬೆಳೆಗೆ ಸತತ ನಾಲ್ಕು ವರ್ಷಗಳಿಂದ ಕಾಣಿಸುತ್ತಿರುವ ರೋಗ, ಹೆಚ್ಚುತ್ತಿರುವ ವಾಣಿಜ್ಯ ಚಟುವಟಿಕೆಗಳು, ಅಕಾಲಿಕ ಮಳೆ ಮತ್ತಿತರ ಕಾರಣಗಳಿಂದ ಈರುಳ್ಳಿ ಬೆಳೆಯ ಕ್ಷೇತ್ರ ಕಡಿಮೆಯಾಗುತ್ತಿದೆ. ಈ ವಿಶೇಷ ತಳಿ ಉಳಿಸಿ, ಬೆಳೆಸಲು ತೋಟಗಾರಿಕೆ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಚೇತನ್ ತಿಳಿಸಿದರು.

ನನ್ನದು 35 ಗುಂಟೆ ಕ್ಷೇತ್ರದಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದೆ. ಹಾವುಸುಳಿ ರೋಗದಿಂದ ಎಲ್ಲ ಬೆಳೆಯೂ ನಾಶವಾಗಿದೆ. ಎಲ್ಲವನ್ನೂ ಕಿತ್ತು ಹಾಕಿದ್ದೇನೆ. ಯಾರೂ ಹೇಳುವವರಿಲ್ಲ. ಕೇಳುವವರಿಲ್ಲ. ಬದುಕಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ಬೆಳೆಗಾರ ಬಾಬು ನಾರಾಯಣ ನಾಯ್ಕ ಬೇಸರ ವ್ಯಕ್ತಪಡಿಸಿದರು.