ತಿರುಮಕೂಡಲು ನರಸೀಪುರದಲ್ಲಿ ಫೆ.10ರಿಂದ ಕುಂಭಮೇಳ

| Published : Dec 27 2024, 12:45 AM IST

ಸಾರಾಂಶ

ದಕ್ಷಿಣ ಭಾರತದಲ್ಲಿಯೂ ಮಹಾ ಕುಂಭಮೇಳ ನಡೆಯಬೇಕು ಎಂಬ ಆಶಯದೊಡನೆ 1989ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಯಿತು. ಪ್ರತಿ 3 ವರ್ಷಗಳಿಗೊಮ್ಮೆ ಈ ಕುಂಭಮೇಳ ನಡೆಯುತ್ತಿದ್ದು, ಕಳೆದ ಬಾರಿ 2019 ರಲ್ಲಿಯೂ ನಡೆದಿತ್ತು. ಕೋವಿಡ್ ಕಾರಣದಿಂದ ಆ ನಂತರ ನಡೆಯಲಿಲ್ಲ. ಈಗ ಮುಂದಿನ ವರ್ಷ ಜರುಗುವುದು 12ನೇ ಮಹಾಕುಂಭಮೇಳ.

ಕನ್ನಡಪ್ರಭ ವಾರ್ತೆ ಮೈಸೂರು

ದಕ್ಷಿಣ ಭಾರತದ ಪ್ರಯಾಗರಾಜ್ ಎಂದೇ ಖ್ಯಾತವಾದ ಕಾವೇರಿ- ಕಪಿಲಾ ಹಾಗೂ ಸ್ಪಟಿಕ ಸರೋವರಗಳ ತ್ರಿವೇಣಿ ಸಂಗಮವಾದ ತಿರುಮಕೂಡಲು ನರಸೀಪುರದಲ್ಲಿ 12ನೇ ಮಹಾ ಕುಂಭಮೇಳವು ಫೆ.10ರಿಂದ 12 ರವರೆಗೆ ನಡೆಯಲಿದೆ.

ಇದಕ್ಕಾಗಿ ಈಗಿಂದಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸುತ್ತೂರು ಶಾಖಾ ಮಠದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ದಕ್ಷಿಣ ಭಾರತದಲ್ಲಿಯೂ ಮಹಾ ಕುಂಭಮೇಳ ನಡೆಯಬೇಕು ಎಂಬ ಆಶಯದೊಡನೆ 1989ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಯಿತು. ಪ್ರತಿ 3 ವರ್ಷಗಳಿಗೊಮ್ಮೆ ಈ ಕುಂಭಮೇಳ ನಡೆಯುತ್ತಿದ್ದು, ಕಳೆದ ಬಾರಿ 2019 ರಲ್ಲಿಯೂ ನಡೆದಿತ್ತು. ಕೋವಿಡ್ ಕಾರಣದಿಂದ ಆ ನಂತರ ನಡೆಯಲಿಲ್ಲ. ಈಗ ಮುಂದಿನ ವರ್ಷ ಜರುಗುವುದು 12ನೇ ಮಹಾಕುಂಭಮೇಳ.

ಈ ಕುಂಭಮೇಳದಲ್ಲಿ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಠಾಧೀಶರ ಬಳಗ ಹಾಗೂ ಜಿಲ್ಲಾಡಳತದಿಂದ ಈಗಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಪೂರ್ವಭಾವಿ ಸಭೆಯಲ್ಲಿ ಅಗತ್ಯ ಸಿದ್ಧತೆ ಕುರಿತು ಚರ್ಚಿಸಿ, ಜವಾಬ್ದಾರಿ ಹಂಚಲಾಯಿತು. ಅಲ್ಲದೇ ಇದಕ್ಕೆ ಸರ್ಕಾರದ ನೆರವು ಕೋರಲಾಯಿತು.

ಈ ಸಂಬಂಧ ಸದ್ಯದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಟಿ.ನರಸೀಪುರ ಶಾಸಕರೂ ಆದ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಿ ಚರ್ಚಿಸಬೇಕು. ಅಲ್ಲದೇ, ಸ್ಥಳಕ್ಕೆ ಭೇಟಿ ನೀಡಿ, ಅಗತ್ಯ ಕಾಮಗಾರಿ ಕೈಗೊಳ್ಳುವ ಸಂಬಂಧ ಪರಿಶೀಲಿಸಲು ತೀರ್ಮಾನಿಸಲಾಯಿತು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪುಣ್ಯಸ್ನಾನ ಕಾರ್ಯಕ್ರಮಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ, ತಿರುಚ್ಚಿ ಮಹಾಸಂಸ್ಥಾನದ ಜಯೇಂದ್ರಸರಸ್ವತಿ ಸ್ವಾಮೀಜಿ, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಎಸ್ಪಿ ಎನ್. ವಿಷ್ಣುವರ್ಧನ್, ಎಸಿ ರಕ್ಷಿತ್, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಮೊದಲಾದವರು ಇದ್ದರು.