ಸಾರಾಂಶ
ಬೆಳಗಾವಿ : ಖಾಸಗಿ ಬಸ್ ಮೂಲಕ ಉತ್ತರ ಪ್ರದೇಶ ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದ ಕಾಲ್ತುಳಿತ ದುರಂತಕ್ಕೆ ಸಾಕ್ಷಿಯಾದ ಬೆಳಗಾವಿಯ 52 ಯಾತ್ರಿಗಳು ಸುರಕ್ಷಿತವಾಗಿ ಮರಳಿದ್ದಾರೆ.
ಖಾಸಗಿ ಬಸ್ ಮೂಲಕ ನಗರದ ಚನ್ನಮ್ಮ ವೃತ್ತದಲ್ಲಿ ಬಂದಿಳಿದ ಯಾತ್ರಿಗಳಲ್ಲಿ ದುಃಖ ಮನೆ ಮಾಡಿತ್ತು. ಈ ವೇಳೆ ಯಾತ್ರಾರ್ಥಿ ಚಿದಂಬರ ಪಾಟೀಲ ಮಾತನಾಡಿ, ಜ.26ರಂದು ಎರಡು ವಾಹನದಲ್ಲಿ ಪ್ರಯಾಗ್‌ರಾಜ್ ಕುಂಭಮೇಳಕ್ಕೆ ತೆರಳಿದ್ದೇವು. ನಾವು ಪ್ರಯಾಗ್ ರಾಜ್ ಮಹಾ ಕುಂಭಮೇಳಕ್ಕೆ ಹೋಗುವ ನಿರ್ಧಾರ ಮಾಡಿದಾಗ ವಾಟ್ಸಪ್ ಗ್ರೂಪ್ಮಾ ಡಿಕೊಂಡು ನಿರಂತರವಾಗಿ ಎಲ್ಲರ ಜೊತೆಗೆ ಸಂಪರ್ಕದಲ್ಲಿದ್ದೇವು.
ಮೌನಿ ಅಮಾವಾಸ್ಯೆಯ ದಿನ ಪವಿತ್ರ ಸ್ನಾನ ಮಾಡಲು 9 ಜನರ ತಂಡ ಮಾಡಿಕೊಂಡು ತೆರಳಿದ್ದೆವು. ಈ ವೇಳೆ ಸಂಗಮದಲ್ಲಿ ಏಕಾಏಕಿ ಕಾಲ್ತುಳಿತ ಉಂಟಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದೇವು. ಈ ವೇಳೆ ಕಾಲ್ತುಳಿತ ಉಂಟಾಗಿ ನಮ್ಮ ಜೊತೆಗೆ ಬಂದ ನಾಲ್ವರು ಬಲಿಯಾದರು.ಘಟನೆಯಲ್ಲಿ ಗಾಯಗೊಂಡವರಿಗೆ ಸಕಾಲದಲ್ಲಿ ಆರೋಗ್ಯ ಸೇವೆ ಸಿಗದ ಹಿನ್ನೆಲೆ ನಾಲ್ವರು ಸಾವಿಗೀಡಾದರು ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.