ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರ್ ಕಲಾಡ್ಚ ಹಬ್ಬವನ್ನು ಊರಿನ ಪರವೂರಿನ ಭಕ್ತರು ಸೇರಿ ಶನಿವಾರ ಸಾಂಪ್ರದಾಯಿಕವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತುಪೋರಾಟದೊಂದಿಗೆ ದೇವಾಲಯಕ್ಕೆ ತಲುಪಿ ಎತ್ತುಪೋರಾಟವನ್ನು ಒಪ್ಪಿಸಲಾಯಿತು. ನಂತರ ಭಕ್ತಾದಿಗಳಿಂದ ತುಲಾಭಾರ ಸೇವೆ ಸೇರಿದಂತೆ ಹಾಲು ಬಲಿವಾಡು ಹರಕೆ ಇನ್ನಿತರ ಪೂಜೆಗಳನ್ನು ನೆರವೇರಿಸಿದ ಬಳಿಕ ಮಹಾಪೂಜೆ ಜರುಗಿ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಅನ್ನಸಂತರ್ಪಣೆ ನೆರವೇರಿತು.
ನಂತರ ದೇವರ ಪ್ರಾರ್ಥನೆಯ ಬಳಿಕ ದೇವರ ಪ್ರದರ್ಶನ ಬಲಿ ಜರುಗಿ. ಎತ್ತುಪೋರಾಟದೊಂದಿಗೆ ತಕ್ಕ ಮುಖ್ಯಸ್ಥರು ಭಕ್ತಾದಿಗಳು ಮಲ್ಮ ಬೆಟ್ಟಕ್ಕೆ ಶ್ರದ್ಧಾಭಕ್ತಿಯಿಂದ ತೆರಳಿದರು. ಇದೇ ಸಂದರ್ಭ ಪೇರೂರು ಹಾಗೂ ನೆಲಜಿ ಗ್ರಾಮದ ತಕ್ಕ ಮುಖ್ಯಸ್ಥರು ಎತ್ತುಪೋರಾಟದೊಂದಿಗೆ ಮಲ್ಮಕ್ಕೆ ಆಗಮಿಸಿದರು. ಅರ್ಚಕರು ಶುದ್ಧಕಲಶ ಪೂಜಾಕಾರ್ಯಗಳನ್ನು ನೆರವೇರಿಸಿ ಎತ್ತು ಪೋರಾಟ ದುಡಿಕೊಟ್ಟ್ ಪಾಟ್ ನೆರವೇರಿತು. ಬಳಿಕ ಎತ್ತುಪೋರಾಟದ ಅಕ್ಕಿಯನ್ನು ಮೂರು ಭಾಗಮಾಡಿ ನೆಲಜಿ, ಪೇರೂರು ಹಾಗೂ ಪಾಡಿ ದೇವಾಲಯದ ತಕ್ಕಮುಖ್ಯಸ್ಥರು ಹಂಚಿಕೊಂಡು ದೇವರ ಕಟ್ಟು ಸಡಿಲಿಸಲಾಯಿತು. ನಾಡಿನ ಸುಭಿಕ್ಷಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಂಜೆ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಕಲಾಡ್ಚ ಸಂಭ್ರಮದಿಂದ ಜರುಗಿತು. ಈ ಸಂದರ್ಭ ಅರ್ಚಕ ಕುಶ ಭಟ್ ಪೂಜಾ ವಿಧಿ ವಿಧಾನ ಗಳನ್ನು ನೆರವೇರಿಸಿದರು.ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎಎಸ್ ಪೊನ್ನಣ್ಣ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ, ಮಾಜಿ ಶಾಸಕ ಕೆ ಜಿ ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ನಲ್ಲಚಂಡ ಕಿರಣ್ ಕಾರ್ಯಪ್ಪ ರೀನಾ ಪ್ರಕಾಶ್, ದೇವಾಲಯದ ತಕ್ಕ ಮುಖ್ಯಸ್ಥರು, ಭಕ್ತ ಜನ ಸಂಘದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಉಪಾಧ್ಯಕ್ಷ ಕಲಿಯಾಟ೦ಡ ಅಪ್ಪಣ್ಣ, ಕಾರ್ಯದರ್ಶಿ ಬಟ್ಟಿರ ಚೋಂದಮ್ಮ ಮೇದಪ್ಪ, ಖಜಾಂಚಿ ಅಂಜಪರವ೦ಡ ಕೆ. ಕುಶಾಲಪ್ಪ, ಆಡಳಿತ ಮಂಡಳಿಯ ನಿರ್ದೇಶಕರು ಪಾರುಪತ್ಯೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ಬಾಚಮಂಡ ಲವ ಚಿನ್ನಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಪಾಂಡಂಡ ನರೇಶ್, ಊರಿನ ಪರವೂರಿನ ಭಕ್ತಾದಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.