ಕುಮಟಾ ತೆಂಗು-ಈರುಳ್ಳಿಗೆ ಜಿಐ ಟ್ಯಾಗ್ ಸಿಗಲಿ

| Published : Nov 17 2025, 01:30 AM IST

ಸಾರಾಂಶ

ಇಲ್ಲಿನ ಕೃಷಿ ಇಲಾಖೆ ಆವರಣದಲ್ಲಿರುವ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಕಾರ್ಯಾಲಯದಲ್ಲಿ ಕುಮಟಾ ತೆಂಗಿನಕಾಯಿಯ ಗುಣಮಟ್ಟ ಹಾಗೂ ವಿಶೇಷತೆಯ ಕುರಿತು ವಿಶೇಷ ಸಮಾಲೋಚನಾ ಸಭೆಯಲ್ಲಿ ಚರ್ಚಿಸಲಾಗಿದ್ದು, ಕುಮಟಾದ ತೆಂಗು ಹಾಗೂ ಸಿಹಿ ಈರುಳ್ಳಿಗೆ ಜಿಐ ಟ್ಯಾಗ್‌ಗಾಗಿ ಪ್ರಯತ್ನಿಸಲು ನಿರ್ಧರಿಸಲಾಯಿತು.

ಕುಮಟಾದಲ್ಲಿ ವಿಶೇಷ ಸಮಾಲೋಚನಾ ಸಭೆ, ತಜ್ಞರ ಚರ್ಚೆ

ಕನ್ನಡಪ್ರಭ ವಾರ್ತೆ ಕುಮಟಾ

ಇಲ್ಲಿನ ಕೃಷಿ ಇಲಾಖೆ ಆವರಣದಲ್ಲಿರುವ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಕಾರ್ಯಾಲಯದಲ್ಲಿ ಕುಮಟಾ ತೆಂಗಿನಕಾಯಿಯ ಗುಣಮಟ್ಟ ಹಾಗೂ ವಿಶೇಷತೆಯ ಕುರಿತು ವಿಶೇಷ ಸಮಾಲೋಚನಾ ಸಭೆಯಲ್ಲಿ ಚರ್ಚಿಸಲಾಗಿದ್ದು, ಕುಮಟಾದ ತೆಂಗು ಹಾಗೂ ಸಿಹಿ ಈರುಳ್ಳಿಗೆ ಜಿಐ ಟ್ಯಾಗ್‌ಗಾಗಿ ಪ್ರಯತ್ನಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಎವಿಪಿ ಸಂಸ್ಥೆ ಅಧ್ಯಕ್ಷ ಗಣಪತಿ ಎಸ್. ನಾಯ್ಕ ಮಾತನಾಡಿ, ಗುಣಮಟ್ಟ ಹಾಗೂ ತನ್ನ ವಿಶಿಷ್ಟತೆಯಿಂದ ಹೆಸರಾದ ಕುಮಟಾ ತೆಂಗಿನಕಾಯಿಗೆ ರಾಷ್ಟ್ರೀಯ ಮಾನ್ಯತೆ ಪಡೆಯುವುದಕ್ಕಾಗಿ ನಮ್ಮ ಎವಿಪಿ ಸಂಸ್ಥೆಯಿಂದ ಕೈಗೊಂಡ ಕ್ರಮದ ವರದಿ ಮಂಡಿಸಿದರು. ವಿಜ್ಞಾನಿಗಳು, ತೋಟಗಾರಿಕಾ ಅಧಿಕಾರಿಗಳು, ರೈತ ಆಸಕ್ತ ಗುಂಪಿನ ಪ್ರಮುಖರು, ವಕೀಲರು ಹಾಗೂ ರೈತರಿಂದ ತೆಂಗು ಹಾಗೂ ಸಿಹಿ ಈರುಳ್ಳಿಗೆ ಜಿಐ ಟ್ಯಾಗ್ ಪಡೆಯುವತ್ತ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ವಿಶೇಷ ಸಮಾಲೋಚನ ಸಭೆ ಹಮ್ಮಿಕೊಂಡಿದ್ದೇವೆ ಎಂದರು.

ಬೆಂಗಳೂರು ರಾಮಯ್ಯ ಇಂಟೆಲೆಕ್ಚ್ಯೂವಲ್ ಸೆಂಟರ್ ಫಾರ್ ಪ್ರಾಪರ್ಟಿ ರೈಟ್ಸ್‌ನ ಸಂಯೋಜಕರಾದ ಸುಮಂಗಲಾ ಮುರಳಿ ಮಾಹಿತಿ ನೀಡಿ, ಕುಮಟಾ ತೆಂಗಿನ ಕಾಯಿಯು ಸ್ವಾದಿಷ್ಟಕರ ರುಚಿ, ಗಾತ್ರ, ಹೆಚ್ಚಿನ ಎಣ್ಣೆಯ ಪ್ರಮಾಣ, ದೀರ್ಘಕಾಲ ಬಾಳಿಕೆಯ ವಿಶೇಷ ಗುಣ ಧರ್ಮದೊಂದಿಗೆ ಪ್ರಾದೇಶಿಕ ಮಾರುಕಟ್ಟೆ, ಹೆಚ್ಚಿನ ಬೆಲೆ ಮತ್ತು ಬೇಡಿಕೆ ಹೊಂದಿದೆ. ಕುಮಟಾ ತೆಂಗಿನಕಾಯಿ ಮತ್ತು ಕುಮಟಾ ಸಿಹಿ ಈರುಳ್ಳಿಗೆ ಜಿ.ಐ. ಟ್ಯಾಗ್ ಮಾನ್ಯತೆ ಪಡೆಯಬಹುದಾಗಿದೆ. ಅಘನಾಶಿನಿ ನದಿ ತಟದ ಭೌಗೋಳಿಕ ಲಕ್ಷಣದ ಪ್ರಭಾವಳಿಯಿಂದ ಕೂಡಿದ ಇಲ್ಲಿನ ಹಲವಾರು ಬೆಳೆಗಳು ವಿಶೇಷ ಗುಣ ಧರ್ಮದಿಂದ ಕೂಡಿವೆ. ಜಿ.ಐ. ಟ್ಯಾಗ್ ಮಾನ್ಯತೆ ಪಡೆಯುವಲ್ಲಿ ಪೂರಕವಾದ ಗುಣ-ವಿಶೇಷಗಳ ಮಾಹಿತಿ ಬಹುತೇಕ ಲಭ್ಯವಿದ್ದು ದಾಖಲಿಸಬಹುದಾಗಿದೆ. ಪೋಷಕಾಂಶಗಳು, ಫಿಜಿಕೋ ಕೆಮಿಕಲ್ ಮತ್ತು ಆರ್ಗನೋಲಿಪ್ಟಿಕ್ ಇತರ ಗುಣ ಧರ್ಮಗಳನ್ನು ಪ್ರಮಾಣಿಕರಿಸಿ ಪೂರೈಸುವುದರ ಮೂಲಕ ಮಾನ್ಯತೆ ಪಡೆಯಬಹುದಾಗಿದೆ ಎಂದರು.

ಸಭೆಯಲ್ಲಿ ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ರೂಪಾ ಪಾಟೀಲ್, ಎ.ವಿ.ಪಿ. ಸಲಹಾ ಮಂಡಳಿಯ ಮುಖ್ಯಸ್ಥ ಡಾ. ಜಿ.ವಿ. ನಾಯಕ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಡಾ. ನಾಗೇಶ ನಾಯ್ಕ ಕಾಗಾಲ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಸುಭಾಷ್ ಚಂದ್ರನ್, ತೋಟಗಾರಿಕಾ ಸಹಾಯಕ ನಿರ್ದೇಶಕ ಚೇತನ ನಾಯ್ಕ, ತೋಟಗಾರಿಕಾ ಸಹಾಯಕ ನಿರ್ದೇಶಕ ಲಿಂಗರಾಜ ಇಟ್ನಾಳ್ ಇತರರು ಪಾಲ್ಗೊಂಡು ಚರ್ಚಿಸಿದರು.

ಎವಿಪಿ ಸಂಸ್ಥೆಯ ನಿರ್ದೇಶಕ ತಿಮ್ಮಣ್ಣ ಭಟ್ ವಂದಿಸಿದರು, ಕೃಷ್ಣ ನಾಯ್ಕ, ಜಗದೀಶ್ ಪಿ., ಪ್ರಭಾಕರ ಪಟಗಾರ, ಶಂಕರ ಗೌಡ, ವೆಂಕಟೇಶ ಅಳ್ವೆಕೋಡಿ, ಕರುಣಾಕರ ಕೂಜಳ್ಳಿ, ಗಣಪತಿ ಪಟಗಾರ, ರಾಧಾಕೃಷ್ಣ ಗೌಡ, ಗೋಪಾಲಕೃಷ್ಣ ಹೆಗಡೆ, ಚಂದ್ರು ಪಟಗಾರ, ಈಶ್ವರ ಕೊಡಿಯಾ ಇತರರು ಇದ್ದರು.